ಅಕ್ಕಿ-ಚಿಕ್ಕಿಗಳ ಚಿಕ್ಕಾಸಿನ ರಾಜಕೀಯ!

0
35

ಇದು ಶಾಲಾ ಮಕ್ಕಳ ಮತ್ತು ಬಡವರ ಹೆಸರಿನಲ್ಲಿ ನಡೆಯುತ್ತಿರುವ ರಾಜಕೀಯವೇ? ಅಥವಾ ಈ ನೆಪದ ವ್ಯಾಪಾರವೇ?
ರಾಜ್ಯ ಸರ್ಕಾರ ಸೋಮವಾರ ಒಂದು ಆದೇಶ ಹೊರಡಿಸಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಮಕ್ಕಳಿಗೆ ನೀಡಲಾಗುತ್ತಿದ್ದ ಶೇಂಗಾ ಚಿಕ್ಕಿಯನ್ನು ಸ್ಥಗಿತಗೊಳಿಸಿತು. ಮಧ್ಯಾಹ್ನದ ಬಿಸಿಯೂಟಕ್ಕೆ ಅನ್ನ ಸಾಂಬಾರ್ ಜೊತೆ ಮೊಟ್ಟೆ, ಇಲ್ಲವೇ ಚಿಕ್ಕಿ ಅಥವಾ ಬಾಳೆಹಣ್ಣನ್ನು ಒಂದರಿಂದ ಎಂಟನೇ ತರಗತಿವರೆಗಿನ ಮಕ್ಕಳಿಗೆ ನೀಡಲಾಗುತ್ತಿತ್ತು.
ಚಿಕ್ಕಿಯಲ್ಲಿ ಕೆಟ್ಟ ಕೊಬ್ಬು ಮತ್ತು ಸಕ್ಕರೆ ಅಂಶ ಅಧಿಕವಾಗಿರುವ ಕಾರಣ ಚಿಕ್ಕಿಯ ಬದಲು ಮೊಟ್ಟೆ ಅಥವಾ ಬಾಳೆಹಣ್ಣು ನೀಡುವಂತೆ ಸರ್ಕಾರವೇನೋ ಆದೇಶಿಸಿತು. ಚಿಕ್ಕಿ ದಾಸ್ತಾನು ಸರಿಯಾಗಿಲ್ಲ. ಅದರ ಗುಣಮಟ್ಟವೂ ಕಳಪೆಯಾಗಿದೆ. ಕಲಬುರ್ಗಿ, ಯಾದಗಿರಿ ಜಿಲ್ಲೆಗಳಲ್ಲಿ ಬೂಸ್ಟ್ ಬಂದ ಚಿಕ್ಕಿ ವಿತರಣೆಯೂ ಆಗಿದೆ. ಆರೋಗ್ಯಕ್ಕೆ ಹಾನಿಕರ. ಈ ಕಾರಣಕ್ಕಾಗಿ ಮಕ್ಕಳಿಗೆ ನೀಡಲಾಗುತ್ತಿದ್ದ ಚಿಕ್ಕಿಯನ್ನು ಸ್ಥಗಿತಗೊಳಿಸಲಾಗಿದೆ ಎಂಬುದು ಸರ್ಕಾರದ ಒಕ್ಕಣೆ.
ಮೊಟ್ಟೆ ಬದಲು ಚಿಕ್ಕಿ ನೀಡಲು ಆರಂಭಿಸಿದಾಗಲೇ ಹಲವರು ಈ ಪ್ರಶ್ನೆಯನ್ನು ಎತ್ತಿದ್ದರು. ಸರ್ಕಾರದ ವ್ಯವಹಾರವೆಂದರೆ ಚಿಕ್ಕಿಯಲ್ಲೂ ಚಿಕ್ಕಾಸು' ಮಾಡುವುದು! ಅತಿಥಿಗಳು ಬಂದಾಗ ಮಕ್ಕಳಿಗೆ ಮೊಟ್ಟೆ ಕೊಟ್ಟು ನಂತರ ಹಿಂಪಡೆದ ಪ್ರಕರಣ ಈ ಹಿಂದೆ ವರದಿಯಾಗಿತ್ತು. ಹಾಗೇ, ಒಂದು ತಿಂಗಳಿಗೆ ಅಗತ್ಯವಾಗುವಷ್ಟು ಚಿಕ್ಕಿ ಖರೀದಿಸಿಟ್ಟುಕೊಂಡರೆ ಅದು ಹಾಳಾಗದಿರುತ್ತದೆಯೇ? ಸಂಗ್ರಹಿಸಿಟ್ಟುಕೊಳ್ಳುವುದು ಕಷ್ಟ ಎನ್ನುವ ರಾಜ್ಯ ಸರ್ಕಾರದ ಪ್ರಸ್ತುತ ಆದೇಶವೇನೋ ಒಪ್ಪತಕ್ಕದ್ದೇ. ಆದರೆ ಚಿಕ್ಕಿ ವಿತರಣೆಗೆ ಈ ಹಿಂದೆ ಸರ್ಕಾರ ಒಪ್ಪಿದಾಗ ಮತ್ತು ಈಗ ಹಠಾತ್ ಸ್ಥಗಿತಗೊಳಿಸಿದಾಗ, ಎರಡೂ ಚಿಕ್ಕಾಸು-ಮಾಮೂಲಿ ವಾಸನೆ ಬಡಿದಿದೆ. ಚಿಕ್ಕಿ ಉತ್ಪಾದಕರು ಹಣ ಬಾರದು, ಬೋಗಸ್ ಬಿಲ್ ಪಡೆಯುತ್ತಿದ್ದಾರೆ ಎಂಬೆಲ್ಲ ದೂರನ್ನು ನೀಡಿದ್ದರೆನ್ನಿ. ಈಗ ಚಿಕ್ಕಿ ಬದಲು ಬಾಳೆಹಣ್ಣು ಕೊಡಿ ಎಂದರೆ ಚಿಕ್ಕಿ ವ್ಯಾಪಾರಿ, ಬಾಳೆಹಣ್ಣು ವ್ಯಾಪಾರಿಯೂ ಆದಾನು! ಮತ್ತೊಂದು ಅಕ್ಕಿ ವಿವಾದ ಈಗ ಶುರುವಾಗಿದೆ. ೨೨.೫೦ ರೂಪಾಯಿಗೆ ಕೆಜಿಯಂತೆ ಅಕ್ಕಿ ಕೊಡುತ್ತೇವೆಂದರೂ ರಾಜ್ಯ ಸರ್ಕಾರ ಅಕ್ಕಿ ಖರೀದಿಸುತ್ತಿಲ್ಲ. ಅನ್ನಭಾಗ್ಯ ಗ್ಯಾರಂಟಿ ಯೋಜನೆಗೆ ಹತ್ತು ಕೆಜಿ ಬದಲು ಐದು ಕೆಜಿ ಅಕ್ಕಿ ಪೂರೈಸಿ, ಇನ್ನುಳಿದ ಐದು ಕೆಜಿಗೆ ೧೭೦ ರೂಪಾಯಿ ಕೊಡುತ್ತಿದೆ. ಇದರಿಂದ ಬೊಕ್ಕಸಕ್ಕೆ ಹಾನಿ ಎಂಬುದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಲ್ಹಾದ ಜೋಶಿ ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯ ಸರ್ಕಾರ ೨೨.೫೦ ರೂಪಾಯಿಗೆ ಅಕ್ಕಿ ಖರೀದಿಸಿ, ಒಟ್ಟು ಹತ್ತು ಕೆಜಿ ಅಕ್ಕಿ ಪ್ರತಿಯೊಬ್ಬ ಬಿಪಿಎಲ್ ಕಾರ್ಡ್ದಾರರಿಗೆ ನೀಡಲಿ ಎಂಬುದು ಅವರ ಆಗ್ರಹ. ಆದರೆ ಈಗ ಸಂಶಯ ಬಂದಿರುವುದು ಅಕ್ಕಿಯ ರಾಜಕಾರಣದ ಬಗ್ಗೆ. ಸಿದ್ದರಾಮಯ್ಯ ಸರ್ಕಾರ ತನ್ನ ಮೊದಲ ಅವಧಿಯಲ್ಲಿ ತಲಾ ೭ ಕೆಜಿ ಅಕ್ಕಿ ಕೊಡುತ್ತಿತ್ತು. ನಂತರ ಬಂದ ಬಿಜೆಪಿ ಸರ್ಕಾರ ಇದನ್ನು ೫ ಕೆಜಿಗೆ ಇಳಿಸಿತು. ೫ ಕೆ.ಜಿ. ಕೇಂದ್ರ ನೀಡುವ ಆಹಾರ ಭದ್ರತೆಯ ಅಕ್ಕಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿಅಕ್ಕಿಯ ಪಾತ್ರ’ ಏನೆಂಬುದು ಗೊತ್ತೇ ಇದೆ. ೧೦ ಕೆಜಿ ಅಕ್ಕಿ ಕೊಡುತ್ತೇವೆಂದು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿತು.
ಚುನಾವಣೆಯಲ್ಲಿನ ಅನ್ನಭಾಗ್ಯ ಗ್ಯಾರಂಟಿ ವಾಗ್ದಾನದಂತೆ ಗೆದ್ದ ನಂತರ ಹತ್ತು ಕೆಜಿ ಅಕ್ಕಿಗಾಗಿ ಸಿದ್ದರಾಮಯ್ಯ ಸರ್ಕಾರ ಹುಡುಕಾಡಬೇಕಾಯಿತು. ಆಗ ಪ್ರತಿ ಕೆಜಿಗೆ ೩೬ ರೂಪಾಯಿಯಂತೆ ಪ್ರತಿ ವರ್ಷ ೨.೫ ಲಕ್ಷ ಮೆಟ್ರಿಕ್ ಟನ್ ಅಕ್ಕಿ ಪೂರೈಸಲು ಕೇಂದ್ರ ಆಹಾರ ನಿಗಮ ಒಪ್ಪಿ, ಆ ನಂತರ, ಎರಡೇ ದಿನದಲ್ಲಿ ಅಕ್ಕಿ ದಾಸ್ತಾನು ಸಾಕಷ್ಟಿಲ್ಲ, ಕೊಡಲಾಗದು ಎಂದು ರಾಗ ಎಳೆದಿತ್ತು. ಆಗಲೇ ಶುರುವಾದದ್ದು ಅಕ್ಕಿಯ ರಾಜಕಾರಣ.
ನಂತರ ಲೆಕ್ಕಾಚಾರ ಹಾಕಿ ಅಕ್ಕಿಯ, ಬಾಕಿ ಐದು ಕೆಜಿಗೆ ೧೭೦ ರೂಪಾಯಿಯಂತೆ ಪ್ರತಿ ಗ್ರಾಹಕನಿಗೆ ನೀಡಿದರಾಯಿತು ಎಂದು ತೀರ್ಮಾನಕ್ಕೆ ಸಿದ್ದರಾಮಯ್ಯ ಸರ್ಕಾರ ಬಂತು. ಐದಾರು ತಿಂಗಳೇನೋ ಫಲಾನುಭವಿಗಳ ಖಾತೆಗೆ ೧೭೦ ರೂಪಾಯಿಯೇನೋ ಬಂತು. ಅದು ಸಾಲಕ್ಕೋ ಶೂಲಕ್ಕೋ ಜಮೆಯೂ ಆಯಿತೆನ್ನಿ. ಇನ್ನು ಕೆಲವರು ಹಣ ನೀಡಿರೆಂದು ಪಟ್ಟೂ ಹಿಡಿದರು. ಏಕೆಂದರೆ ಐದು ಕೆಜಿ ಅಕ್ಕಿಯಂತೂ ಸಾಕು. ಈ ೧೭೦ ರೂಪಾಯಿಯಲ್ಲಿ ಬೇರೆ ದವಸ ಧಾನ್ಯ ಖರೀದಿಸಬಹುದು ಎಂಬುದು ಮಹಿಳೆಯರ ಲೆಕ್ಕಾಚಾರ.
ಈಗ, ಆಗ ೩೬ ರೂಪಾಯಿ ಕೊಟ್ಟರೂ ಅಕ್ಕಿ ಕೊಡೆ ಎಂದ ಕೇಂದ್ರ ಸರ್ಕಾರ `ಭಾರತ್ ಬ್ರ್ಯಾಂಡ್’ ಅಕ್ಕಿಯನ್ನು ೨೭ ರೂಪಾಯಿಯಂತೆ ಇಡೀ ದೇಶಾದ್ಯಂತ ಪ್ರಧಾನಿ ಚಿತ್ರದೊಂದಿಗೆ ಮಾರಾಟಕ್ಕೆ ಇಳಿದಿದೆ. ಇದು ಚುನಾವಣಾ ಮತಗಳಿಕೆ ತಂತ್ರ ಎಂಬ ಟೀಕೆಯೂ ಬಂತು.
ಏನೇ ಇರಲಿ. ಭಾರತ್ ಬ್ರ್ಯಾಂಡ್ ಲೋಕಸಭಾ ಚುನಾವಣೆ ನಂತರ ಕಣ್ಮರೆಯಾಗಿ ಹೋಯಿತು. ಅಂದು ೩೬ ರೂಪಾಯಿಗೆ ಪ್ರತಿ ಕೆಜಿಯಂತೆ ಅಕ್ಕಿ ಕೋರಿದ್ದರೂ ಕೊಡದ ಕೇಂದ್ರ ಸರ್ಕಾರ ಈಗ ನಾವು ೨೨.೫೦ ರೂಪಾಯಿಗೆ ಪ್ರತಿ ಕೆಜಿಯಂತೆ ಕೊಡುತ್ತೇವೆಂದು ಹೇಳುತ್ತಿದೆ. ಇದಲ್ಲದೇ, ಪ್ರತಿ ಜಿಲ್ಲೆಯಲ್ಲೂ ಕೂಡ ಅನ್ನಭಾಗ್ಯ ಅಕ್ಕಿ ಕೊಂಡುಕೊಂಡು, ಅದನ್ನು ಪಾಲಿಷ್ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ದೊಡ್ಡ ಜಾಲವೇ ಇದೆ. ಹತ್ತು ಕೆಜಿ ಪ್ರತಿ ವ್ಯಕ್ತಿಗೆ ಕೊಟ್ಟರೆ ಈ ಜಾಲದ ಲಾಭ ಅಷ್ಟೇ ಜಬರ್‌ದಸ್ತ್ !
ಅನ್ನಭಾಗ್ಯದ ಅಕ್ಕಿ ಪರಿವರ್ತನೆಯಾಗಿ ರಾಜ್ಯಾದ್ಯಂತ ವಿಕ್ರಿಯಾಗುತ್ತಿತ್ತು. ಸರ್ಕಾರದ ಗ್ಯಾರಂಟಿ ಈ ಕಳ್ಳ ವ್ಯಾಪಾರಿಗಳ ನಿಶ್ಚಿತ ಠೇವಣಿಯಾಗುತ್ತಿತ್ತು.
ಕಳ್ಳ ಅಕ್ಕಿ ವ್ಯಾಪಾರಸ್ಥರು ರಾಜಕೀಯ ಮರಿ ಪುಢಾರಿಗಳು. ಅಥವಾ ಕೆಲವು ಮಂತ್ರಿ ಮಹೋದಯರ, ಶಾಸಕರ ಹಿಂಬಾಲಕರು. ಅಥವಾ ಅಭಯಹಸ್ತ ಹೊಂದಿದವರು. ಹೀಗಾಗಿ ಅಕ್ಕಿ ರಾಜಕಾರಣದಲ್ಲಿ ವ್ಯಾಪಾರಸ್ಥರ ಒಳಸಂಚು ಕಾಣುತ್ತಿದೆ. ಆಗ ಕನ್ನಡಿಗರಿಗೆ ೩೬ ರೂಪಾಯಿಯಂತೆ ಅಕ್ಕಿ ಕೊಡಿ ಎಂದು ಗೋಗರೆದರೂ ನಿರಾಕರಿಸಿದ ಕೇಂದ್ರ ಸರ್ಕಾರವೇ ಎಥಿನಾಲ್ ಉತ್ಪಾದನೆಗೆ ೨೦ ರೂಪಾಯಿಗೆ ಅಕ್ಕಿ ನೀಡುತ್ತಿತ್ತು! ಬಡವನ ಹೊಟ್ಟೆ ತುಂಬಿಸಬೇಕಾದ ಅನ್ನ ವಾಹನಗಳ ಇಂಧನ ಉತ್ಪಾದನೆಗೆ ಬಳಕೆಯಾಯಿತು. ಅಕ್ಕಿ ಬೆಂದ ನಂತರವೇ ಅನ್ನ. ಆದರೆ ಕೊತಕೊತ ಕುದಿಯುತ್ತಿದ್ದಾಗಲೇ ಅರೆಬೆಂದ ರಾಜಕೀಯ! ಭತ್ತ ಅಕ್ಕಿಯಾಗುವಾಗ, ಅಕ್ಕಿ ಬಡವನ ಹೊಟ್ಟೆ ಸೇರುವವರೆಗೆ ರಾಜಕೀಯ ಮತ್ತು ವಂಚನೆಯ ಜಾಲ ಬೆರಗುಗೊಳಿಸುವಂಥದ್ದು. ರಾಜ್ಯ ಸರ್ಕಾರ ಚಿಕ್ಕಿ ನಿಷೇಧಿಸಿದ ದಿನವೇ ಕೇಂದ್ರ ಸರ್ಕಾರ ೨೨.೫೦ ರೂಪಾಯಿಗೆ ಒಂದು ಕೆಜಿ ಅಕ್ಕಿ ಕೊಡುತ್ತೇವೆ ಎಂದು ಕರ್ನಾಟಕ ಸರ್ಕಾರಕ್ಕೆ ಆಹ್ವಾನ ನೀಡುತ್ತಿರುವಾಗಲೇ ಹುಬ್ಬಳ್ಳಿಯ ಗಬ್ಬೂರು ಬಳಿ ಇರುವ ಗೋದಾಮಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ, ಅಂಗನವಾಡಿ ಮಕ್ಕಳ ಹೊಟ್ಟೆಗೆ ಸೇರಬೇಕಾದ ಅಕ್ಕಿ, ದವಸ ಧಾನ್ಯ, ಅಕ್ರಮ ಸಂಗ್ರಹಿಸಿರುವುದು ಹೊರಬಂತು. ಮತ್ತೆ ನೀವೇ ಊಹಿಸಿ. ನಾಗರಿಕ ಸಮಾಜದಲ್ಲಿ ಮಕ್ಕಳ ಬಿಸಿಯೂಟ, ಪೌಷ್ಟಿಕ ಆಹಾರ ಮತ್ತು ಹಸಿದ ಹೊಟ್ಟೆಯ ಅನ್ನ ಅಸ್ತçದಂತೆ ಬಳಕೆಯಾಗಬಾರದು. ರಾಜಕೀಯ ಗುರಾಣಿಯೂ ಆಗಬಾರದು. ಇದು ಪ್ರತಿಯೊಬ್ಬರ, ವಿಶೇಷವಾಗಿ ಆಳುವವರ ನೈತಿಕ ಮತ್ತು ವಿಧ್ಯಾತ್ಮಕ ಹೊಣೆಗಾರಿಕೆ.
ಮಕ್ಕಳ ಹೆಸರಿನಲ್ಲಿ ಸೈಕಲ್, ಸಮವಸ್ತç, ನೋಟ್‌ಬುಕ್, ಸೈನ್ಸ್ ಕಿಟ್ ಹಗರಣಗಳ ಆರೋಪ ಬಂದಿತ್ತು… ಈಗ ಬಿಸಿಯೂಟದ ಅಕ್ಕಿ-ಚಿಕ್ಕಿ ವಿವಾದ…
ಆದರೇನು ಮಾಡೋದು, ಆಳುವವರ ಕೃಪಾಶ್ರಯದಲ್ಲೇ ಇಂಥ ಅನಾಚಾರ ನಡೆಯುತ್ತಿದೆ. ಬಿಸಿಯೂಟ, ಅಂಗನವಾಡಿ ಮಕ್ಕಳ ಪೌಷ್ಟಿಕ ಆಹಾರ, ಹಣ್ಣು, ಮೊಟ್ಟೆ, ಪಡಿತರ ಧಾನ್ಯ ಎಲ್ಲವುಗಳ ಹಿಂದೆ ದೊಡ್ಡ ಮೋಸಗಾರರ ಜಾಲವಿದೆ. ಬಡವರ ಹಸಿವಿನಲ್ಲಿ ಲಾಭ ಗಳಿಸಿ ಕೇಕೆ ಹಾಕುವ ಮಂದಿ ಇದ್ದಾರೆ. ಅನ್ನ ಕಸಿಯುವ ದೊಡ್ಡ ದಂಧೆ, ದೊಡ್ಡವರ ಲಾಭದ ಲಾಲಸೆ ಈಗಲೇ ಅಪಾಯಕಾರಿ ಮಟ್ಟವನ್ನು ತಲುಪಿದೆ. ಇದು ದುರಂತ.
ಕೇವಲ ರೇಷನ್ ಕಾರ್ಡ್, ಪಡಿತರ ಮಾತ್ರವಲ್ಲ, ಅಂಗನವಾಡಿ ಹಾಗೂ ಪ್ರಾಥಮಿಕ ಶಾಲಾ ಮಕ್ಕಳ ಬಿಸಿಯೂಟ, ಕೃಷಿ, ಆಹಾರ ಧಾನ್ಯ ಬೆಂಬಲ ಬೆಲೆ ನಿಗದಿಯವರೆಗೂ ರಾಜಕಾರಣ ಮತ್ತು ಅವ್ಯವಹಾರ ಅಕ್ರಮ ದಂಧೆ ದೇಶವ್ಯಾಪಿ ಹಬ್ಬಿದೆ ಎನ್ನಿ.ಕೇವಲ ಚಿಕ್ಕಿ- ಅಕ್ಕಿಯ ರಾಜಕಾರಣವಲ್ಲ. ಹಸಿದ ಕಂಗಳ ಕಣ್ಣೀರು ಬರಿಸುವ ದುಷ್ಟ ಹೇತು ನಮ್ಮ
ನಡುವೆ ಕುಣಿಯುತ್ತಿದೆ… ಅಲ್ಲವೇ?

Previous articleಸುವರ್ಣಸೌಧ ಬಳಿ ಟ್ಯಾಂಕರ್ ಪಲ್ಟಿ
Next articleಅಂಕ ಮುಖ್ಯವಲ್ಲ, ಫಲಿತಾಂಶದಿಂದ ಬಂದ ಜ್ಞಾನ ಮುಖ್ಯ