ಗಂಗಾವತಿ: ಅಂಜನಾದ್ರಿ ಬೆಟ್ಟ ಹತ್ತುವ ಸಂದರ್ಭದಲ್ಲಿ ಯುವಕನಿಗೆ ಹೃದಯಘಾತ ಸಂಭವಿಸಿ ಮೃತಪಟ್ಟಿರುವ ಘಟನೆ ನಡೆದಿದೆ.
ಸುರೇಶ್ ಯಾದವ್ ಪುತ್ರ ಜಯೇಶ ಯಾದವ್(18) ಮೃತ ದುರ್ದೈವಿ. ಕೊಪ್ಪಳ ತಾಲೂಕಿನ ಹುಲಿಗಿಯ ಜಯೇಶ, ಸ್ನೇಹಿತರೊಂದಿಗೆ ಅಂಜನಾದ್ರಿಗೆ ತೆರಳಿದ್ದ. ಬೆಟ್ಟ ಏರುತ್ತಿದ್ದ ವೇಳೆ ಯುವಕ ಹೃದಯಾಘಾತವಾಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಬೆಟ್ಟ ಹತ್ತುವ ಸಂದರ್ಭದಲ್ಲಿ 475 ನೇ ಮೆಟ್ಟಿಲು ಬಳಿ ಹೃದಯಾಘಾತ ಸಂಭವಿಸಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಕೂಡಲೇ 108 ಅಂಬುಲೆನ್ಸ್ ಗೆ ಕರೆ ಮಾಡಿದರೂ ಪ್ರಯೋಜನವಾಗಿಲ್ಲ. ಅಂಜನಾದ್ರಿ ಬೆಟ್ಟದ ಕಾರ್ಮಿಕರು ಕೂಡಲೇ ಜಯೇಶ ಅವರನ್ನು ಆನೆಗೊಂದಿ ಸರಕಾರಿ ಆಸ್ಪತ್ರೆಗೆ ಕರೆತಂದಿದ್ದು, ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಶವ ಪರೀಕ್ಷೆಗಾಗಿ ಗಂಗಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆದು ಕೇಸ್ ದಾಖಲಿಸಿಕೊಂಡಿದ್ದಾರೆ. ಸದ್ಯ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.