Home Advertisement
Home ನಮ್ಮ ಜಿಲ್ಲೆ ಧಾರವಾಡ ಹೊರಟ್ಟಿಯವರಿಗೆ ಪಕ್ಷದಿಂದ ಸೂಕ್ತ ಸ್ಥಾನ: ಶೆಟ್ಟರ ವಿಶ್ವಾಸ

ಹೊರಟ್ಟಿಯವರಿಗೆ ಪಕ್ಷದಿಂದ ಸೂಕ್ತ ಸ್ಥಾನ: ಶೆಟ್ಟರ ವಿಶ್ವಾಸ

0
110
SHETTAR

ಹುಬ್ಬಳ್ಳಿ: ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರಿಗೆ ಬಿಜೆಪಿ ಪಕ್ಷ ಸೂಕ್ತ ಸ್ಥಾನಮಾನ ನೀಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಸೇರ್ಪಡೆಯಾಗಿರುವ ಸಿ.ಎಂ. ಇಬ್ರಾಹಿಂ ಅವರು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರಾಗಿದ್ದರೂ, ಅಲ್ಲಿ ಏನು ಮಾಡಲು ಆಗದ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಇಬ್ರಾಹಿಂ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಅವರಿಗೆ ವಿಧಾನ ಪರಿಷತ್ ಸದಸ್ಯರಾಗಲೂ ಸಾಧ್ಯವಾಗಿರಲಿಲ್ಲ. ಅವರ ಪರಿಸ್ಥಿತಿ ಏನಿತ್ತು, ಈಗ ಏನಿದೆ ಎಂಬುದು ಎಲ್ಲಿರಿಗೂ ಗೊತ್ತಿರುವ ವಿಚಾರ ಎಂದು ಪ್ರತಿಕ್ರಿಯಿಸಿದರು.
ಡಿ.ಕೆ. ಶಿವಕುಮಾರ, ಸಿದ್ದರಾಮಯ್ಯ ಅವರ ಶಕ್ತಿ ಕೇಂದ್ರದ ಜೊತೆ ಮಲ್ಲಿಕಾರ್ಜುನ ಖರ್ಗೆ ಅವರ ಮತ್ತೊಂದು ಶಕ್ತಿ ಕೇಂದ್ರ ಹುಟ್ಟಿಕೊಂಡಿದೆ. ಪಕ್ಷದಲ್ಲಿ ಕಡೆಗಣನೆಗೆ ಒಳಗಾಗಿದ್ದ ಎಚ್.ಕೆ. ಪಾಟೀಲ, ಕೆ.ಎಚ್. ಮುನಿಯಪ್ಪ, ಜಿ.ಪರಮೇಶ್ವರ ಅವರನ್ನು ಖರ್ಗೆ ಅವರು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಇದರಿಂದ ಪಕ್ಷದಲ್ಲಿ ಮತ್ತಷ್ಟು ವೈಮನಸ್ಸು ಹೆಚ್ಚಾಗಿದೆ ಎಂದರು.
ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ಪಾದಯಾತ್ರೆ, ರ‍್ಯಾಲಿ ಮಾಡುತ್ತದೆ. ಎಷ್ಟೇ ರ‍್ಯಾಲಿ, ಯಾತ್ರೆ ನಡೆಸಿದರೂ, ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಬಿಜೆಪಿಗೆ ಪರ್ಯಾಯ ಪಕ್ಷವೇ ಇಲ್ಲ ಎಂದರು.