ಸೌಜನ್ಯ ಪ್ರಕರಣದ ಮರು ತನಿಖೆಗೆ ಒತ್ತಾಯ
ಹೋರಾಟಕ್ಕಿಳಿದ ಬಿಜೆಪಿ
ಮಂಗಳೂರು: ಉಜಿರೆಯ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಮರು ತನಿಖೆಯಾಗುವ ಮೂಲಕ ಆ ಕುಟುಂಬಕ್ಕೆ ನ್ಯಾಯ ದೊರೆಯಬೇಕು ಎಂದು ಒತ್ತಾಯಿಸುವ ಮೂಲಕ ಬಿಜೆಪಿ ಸೌಜನ್ಯ ಪರ ಹೋರಾಟಕ್ಕೆ ಧುಮುಕಿದೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು, ಸೌಜನ್ಯ ಪ್ರಕರಣದ ಮರು ತನಿಖೆ ಆಗಬೇಕು. ಈ ಕುರಿತಾದ ಸಂಶಯಗಳು ನಿವಾರಣೆ ಆಗಬೇಕು. ಈ ಪ್ರಕರಣದ ಹಿಂದೆ ಯಾರೇ ಪ್ರಭಾವಿಗಳಿರಲಿ, ಹಂತಕರನ್ನು ಬಂಧಿಸಿ, ಅವರಿಗೆ ಕಠಿಣ ಶಿಕ್ಷೆ ಆಗುವಂತೆ ಮಾಡಬೇಕು ಎಂದು ಬಿಜೆಪಿ ಆಗ್ರಹಿಸುತ್ತದೆ’ ಎಂದರು
‘೨೦೧೨ರ ಅ. ೯ರಂದು ಸೌಜನ್ಯಾ ಕಾಣೆಯಾಗಿದ್ದು, ಮರುದಿನ ಆಕೆಯ ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣವನ್ನು ಸ್ಥಳೀಯ ಪೊಲೀಸರು, ಸಿಐಡಿ ಪೊಲೀಸರು, ನಂತರ ಸಿಬಿಐ ತನಿಖೆ ನಡೆಸಿದೆ. ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ವ್ಯಕ್ತಿ ತಪ್ಪಿತಸ್ಥ ಅಲ್ಲ ಎಂದು ಸಿಬಿಐ ನ್ಯಾಯಾಲಯದ ತೀರ್ಪಿ ನಲ್ಲಿ ಹೇಳಿದೆ. ಸಿಬಿಐ ತನಿಖೆಯಿಂದಲೂ ಪ್ರಕರಣದ ಆರೋಪಿಗಳು ಯಾರು ಎಂದು ಸ್ಪಷ್ಟ ಆಗಿಲ್ಲ’ ಎಂದರು.
‘ಪ್ರಕರಣದ ಮರು ತನಿಖೆ ಆಗಬೇಕು ಎಂಬುದು ಸೌಜನ್ಯಾ ಕುಟುಂಬ ಆಗ್ರಹಿಸಿದೆ. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂಬುದು ನಮ್ಮ ಪಕ್ಷದ ನಿಲುವು ಕೂಡಾ. ಈ ಉದ್ದೇಶದಿಂದ ಆ.೨೭ರಂದು ಬೆಳ್ತಂಗಡಿಯ ತಾಲೂಕು ಪಂಚಾಯತ್ ಕಚೇರಿ ಎದುರು ಬಿಜೆಪಿಯಿಂದ ನಡೆಯಲಿರುವ ಪ್ರತಿಭಟನೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಶಾಸಕರು, ಸಂಸದರು ಹಾಗೂ ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ’ ಎಂದರು.
‘ಸೌಜನ್ಯಾ ಕುಟುಂಬಕ್ಕೆ ಅನ್ಯಾಯ ಆಗಿದೆ. ಆಕೆಯ ಆತ್ಮಕ್ಕೆ ಶಾಂತಿ ಸಿಗಬೇಕು ಎಂಬ ಕಾರಣಕ್ಕೆ ನಾವು ಹೋರಾಟ ನಡೆಸಲಿದ್ದೇವೆ. ಈ ಪ್ರಕರಣದ ಮರುತನಿಖೆಗೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೂ ಪಕ್ಷದ ಶಾಸಕರನ್ನು ಒಳಗೊಂಡ ನಿಯೋಗವು ಮನವಿ ಸಲ್ಲಿಸಲಿದೆ’ ಎಂದರು.
‘ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನ್ಯಾಯಕ್ ಅವರು ಸಿಬಿಐ ನ್ಯಾಯಾಲಯದ ತೀರ್ಪು ಬಂದ ತಕ್ಷಣವೇ ಈ ಪ್ರಕರಣದ ಮರು ತನಿಖೆಗೆ ಒತ್ತಾಯಿಸಿ, ಪಕ್ಷದ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ’ ಎಂದರು.
ಸೌಜನ್ಯ ಪ್ರಕರಣದ ಕುರಿತು ಬೇರೆ ಬೇರೆ ಸಂಘಟನೆಗಳು ಹೋರಾಟ ಮಾಡುತ್ತಿರಬಹುದು. ಆದರೆ, ಬಿಜೆಪಿ ನಿಲುವು ಸ್ಪಷ್ಟ. ಸೌಜನ್ಯ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂಬುದು ಪಕ್ಷದ ನಿಲುವು’ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿ ದ. ಕ. ಜಿಲ್ಲಾ ಅಧ್ಯಕ್ಷ ಸುದರ್ಶನ್ ಮೂಡುಬಿದ್ರೆ, ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ, ಹರೀಶ್ ಪೂಂಜ, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ಭಾಗಿರಥಿ ಮುರುಳ್ಯ, ಸುರೇಶ್ ಶೆಟ್ಟಿ ಗುರ್ಮೆ, ಗುರುರಾಜ ಗಂಟಿಹೊಳೆ, ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಬಿಜೆಪಿ ರಾಜ್ಯ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್, ಪಕ್ಷದ ಪ್ರಭಾರಿಗಳಾದ ಉದಯ ಕುಮಾರ್ ಶೆಟ್ಟಿ, ರಾಜೇಶ್ ಕಾವೇರಿ ಉಪಸ್ಥಿತರಿದ್ದರು.