ಸುಳ್ಳು ಹೇಳುವ ಪರಿಣಿತರ ಪಕ್ಷದ ಧೋರಣೆ ಸಾಬೀತು

0
24

ಹುಬ್ಬಳ್ಳಿ: ಚುನಾವಣೆ ಸಂದರ್ಭದಲ್ಲಿ ನೀಡಿದ ಗ್ಯಾರಂಟಿ ಯೋಜನೆಗಳನ್ನು ಮೊದಲ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು ಜಾರಿಗೊಳಿಸುವುದಾಗಿ ಕಾಂಗ್ರೆಸ್ ನಾಯಕರು ಹೇಳಿದ್ದರು. ಮೊದಲ ಸಂಪುಟ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆ ಜಾರಿ ಮಾಡಿಲ್ಲ. ಈ ಮೂಲಕ ಕಾಂಗ್ರೆಸ್ ಎಂದರೆ ಸುಳ್ಳು ಹೇಳುವ ಪಕ್ಷ. ಸುಳ್ಳು ಹೇಳುವ ಪರಿಣಿತಿ ಪಡೆದಿರುವವರ ಪಕ್ಷ ಎಂಬುದು ಸಾಬೀತಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ರವಿವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ತಾವೇನು ಜನರಿಗೆ ಭರವಸೆ ಕೊಟ್ಟಿದ್ದರೊ ಅದನ್ನು ಈಡೇರಿಸಲು ಆಸಕ್ತಿ ಇಲ್ಲ ಎಂಬುದು ಮೊದಲ ಸಂಪುಟ ಸಭೆ ಮುಗಿದ ಬಳಿಕ ರಾಜ್ಯದ ಜನರಿಗೆ ಗೊತ್ತಾಗಿದೆ. ಚುನಾವಣೆ ಕಾರಣಕ್ಕಾಗಿ ನೀಡಿದ ಭರವಸೆ ಹುಸಿಯಾಗಿದೆ. ಇನ್ ಪ್ರಿನ್ಸಿಪಲ್ ಕೊಡಲಾಗಿದೆ ಎಂದು ತೇಪೆ ಹಚ್ಚುವಂತಹ ಹೇಳಿಕೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಗ್ಯಾರಂಟಿಗಳನ್ನು ಘೋಷಣೆ ಮಾಡುವಾಗ ಇನ್ ಪ್ರಿನ್ಸಿಪಲ್ ಎಂದು ಹೇಳಿದ್ರಾ? ಏನೂ ಹೇಳಿರಲಿಲ್ಲ. ಈಗ ಇನ್ ಪ್ರಿನ್ಸಿಪಲ್ ಮಾತು ಏಕೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ನಮ್ಮ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಜಲಸಂಪನ್ಮೂಲ, ಲೋಕೋಪಯೋಗಿ ಇಲಾಖೆ ಯಾವುದೇ ಇಲಾಖೆ ಇರಲಿ. ಹಗರಣಗಳು ಆಗಿಲ್ಲ. ಬೇಕಿದ್ದರೆ ಕಾಂಗ್ರೆಸ್ ಸರ್ಕಾರ ತನಿಖೆ ನಡೆಸಲಿ. ನಾವೇನೂ ಬೇಡ ಎಂದಿಲ್ಲ ಎಂದು ಜೋಶಿ ಹೇಳಿದರು.
ರಾಜ್ಯಕ್ಕೆ ಕೇಂದ್ರದಿಂದ ಅನುದಾನ ಹೆಚ್ಚಳ
೨೦೦೯ರಿಂದ ೨೦೧೪ರ ಅವಧಿಯಲ್ಲಿ ಡೆವಲ್ಯೂಷನ್ ಫಂಡ್ ಟ್ಯಾಕ್ಸೆಸನ್‌ದಲ್ಲಿ ಶೇ ೧೪೮ ರಷ್ಟು ಜಾಸ್ತಿ ಆಗಿದೆ. ೨೦೧೯ರಿಂದ ಇಲ್ಲಿಯವರೆಗೆ ಶೇ ೧೨೯ ರಷ್ಟು ಜಾಸ್ತಿಯಾಗಿದೆ. ೭೦೦-೮೦೦ ಕೋಟಿ ಡೆವಲ್ಯೂಷನ್ ಆಫ್ ಫಂಡ್ ನಮ್ಮ ಆಡಳಿತ ಅವಧಿಯಲ್ಲಿ ೫೦೦೦ ದಿಂದ ೭೦೦೦ ಕೋಟಿ ಬಂದಿದೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಏನೂ ಅನುದಾನ ಬಂದಿಲ್ಲ. ಅನುದಾನ ಕೊಟ್ಟೇ ಇಲ್ಲ ಎಂದು ಶನಿವಾರ ಹೇಳಿಕೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ದಾಖಲಾತಿಯನ್ನು ಪರಿಶೀಲಿಸಲಿ ಎಂದು ಜೋಶಿ ಸಲಹೆ ನೀಡಿದರು.
ಉದಾಹರಣೆಗೆ ೨೦೦೯-೧೦ರ ಅವಧಿಯಲ್ಲಿ ೨೦೪೭೬ ಕೋಟಿ ಬಂದಿತ್ತು. ೨೦೧೯-೨೦೨೦ರಲ್ಲಿ ೭೫೭೮ ಕೋಟಿ ಬಂದಿದೆ. ೨೦೨೧-೨೨ರಲ್ಲಿ ೭೮೬೨ ಕೋಟಿ ಬಂದಿದೆ. ಪ್ರತಿ ವರ್ಷ ಅನುದಾನ ರಾಜ್ಯಕ್ಕೆ ಹೆಚ್ಚಾಗುತ್ತಲೇ ಬಂದಿದೆ ಎಂದು ಪ್ರಲ್ಹಾದ ಜೋಶಿ ಮಾಹಿತಿ ನೀಡಿದರು.

Previous articleಬೆಂಗಳೂರಿನಲ್ಲಿ ಮಳೆಗೆ ಮಹಿಳೆ ಬಲಿ
Next articleನನಗೆ ಜೀರೋ ಟ್ರಾಫಿಕ್ ಸೌಲಭ್ಯ ಬೇಡ