ಹುಬ್ಬಳ್ಳಿ: ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿಲ್ಲ. ಸಿಎಂ ರಾಜೀನಾಮೆ ನೀಡುವಂತೆ ಎಐಸಿಸಿ ಕೂಡ ಕೇಳಿಲ್ಲ. ಹೀಗಾಗಿ, ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ, ದಲಿತ ಸಿಎಂ ವಿಚಾರ ಕೇವಲ ಊಹಾಪೋಹ. ಒಂದು ಬಾರಿಯೂ ೧೧೩ ಸ್ಥಾನ ದಾಟದ ಬಿಜೆಪಿ, ಕಾಂಗ್ರೆಸ್ ನೀಡುತ್ತಿರುವ ಉತ್ತಮ ಆಡಳಿತವನ್ನು ನೋಡಲಾಗದೇ ಸಿಎಂ ಬದಲಾವಣೆ ವಿಚಾರವನ್ನು ಹರಿಬಿಡುತ್ತಿದೆ ಎಂದರು.
ಜಾತಿ ಜನಗಣತಿ ವಿಚಾರವಾಗಿ ಮಾತನಾಡಿ, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಸಂಪುಟ ಸಭೆಯಲ್ಲಿ ಮುಕ್ತವಾಗಿ ಚರ್ಚೆಯಾಗಲಿದೆ. ಜಾತಿ ಜನಗಣತಿ ವರದಿ ಹಳೆಯದಾಗಿದ್ದರಿಂದ ಕೆಲವರು ಅಪಸ್ವರ ಎತ್ತುತ್ತಿದ್ದಾರೆ. ಇನ್ನೂ ಕೆಲವರು ಅದನ್ನು ತಿದ್ದುಪಡಿ ಮಾಡುವಂತೆ ಮನವಿ ಮಾಡಿದ್ದಾರೆ. ಹೀಗಾಗಿ, ಚರ್ಚೆ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.