ಸಚಿನ್ ಪಾಂಚಾಳ್ ಕುಟುಂಬಕ್ಕೆ ೧೦ ಲಕ್ಷ ರೂ. ಪರಿಹಾರ

0
25

ಬೀದರ್: ಆತ್ಮಹತ್ಯೆ ಮಾಡಿಕೊಂಡ ಯುವ ಗುತ್ತಿಗೇದಾರ ಸಚಿನ್ ಪಾಂಚಾಳ್‌ರ ಭಾಲ್ಕಿ ತಾಲ್ಲೂಕಿನ ಕಟ್ಟಿತೂಗಾಂವ್ ಗ್ರಾಮದಲ್ಲಿನ ಮನೆಗೆ ಬೀದರ್ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ್ ಖಂಡ್ರೆ ಭಾನುವಾರ ಭೇಟಿ ನೀಡಿ ದುಃಖತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಸಚಿನ್ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದ ಸಚಿವರು, ಸಚಿನ್ ಆತ್ಮಹತ್ಯೆ ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು. ವೈಯಕ್ತಿಕವಾಗಿ ಮತ್ತು ಸರ್ಕಾರದ ವತಿಯಿಂದ ೧೦ ಲಕ್ಷ ರೂಪಾಯಿ ಪರಿಹಾರ ಕೊಡಿಸುವುದಾಗಿ ಸಚಿವರು ಭರವಸೆ ನೀಡಿದರು. ಈಗಾಗಲೇ ರೈಲ್ವೆ ಪೊಲೀಸರು ಈ ವಿಚಾರದಲ್ಲಿ ತನಿಖೆ ನಡೆಸುತ್ತಿದ್ದು, ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಸತ್ಯಾಸತ್ಯತೆ ಹೊರತರಲಾಗುವುದು ಎಂದು ಹೇಳಿದರು.
ಇದರಲ್ಲಿ ಯಾರೇ ತಪ್ಪಿತಸ್ಥಿರಿದ್ದರು, ಎಂತಹುದೇ ಪ್ರಭಾವಿಗಳಿದ್ದರೂ ಅವರನ್ನು ಸರ್ಕಾರ ಶಿಕ್ಷೆಗೆ ಗುರಿಪಡಿಸಲಿದೆ ಎಂದರು. ನಿಮ್ಮ ಕುಟುಂಬಕ್ಕೆ ಕ್ಷೇತ್ರದ ಶಾಸಕನಾಗಿ, ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಪ್ರಾಮಾಣಿಕವಾಗಿ ನ್ಯಾಯ ಕೊಡಿಸುವ ಪ್ರಯತ್ನ ಮಾಡುವೆ. ಸಚಿನ್‌ಗೆ ಅನ್ಯಾಯವಾಗಿದ್ದರೆ ಅದನ್ನು ಸರ್ಕಾರದ ಗಮನಕ್ಕೆ ತರಬಹುದಾಗಿತ್ತು ಎಂದ ಅವರು, ಆದರೂ ಸರ್ಕಾರ ನಿಮ್ಮ ಕುಟುಂಬದೊಂದಿಗೆ ಇರಲಿದೆ ಎಂದು ಭರವಸೆ ನೀಡಿದರು.
ಡೆತ್‌ನೋಟ್ ಬಗ್ಗೆ ಎಫ್.ಎಸ್.ಎಲ್ ವರದಿ ಬರಲಿ ಅದನ್ನು ನೋಡಿ ಸರ್ಕಾರ ಕ್ರಮ ಕೈಗೊಳ್ಳಲಿದೆ. ಕುಟುಂಬಕ್ಕೆ ಆತ್ಮಸ್ಥೈರ್ಯ ಕೊಡಲು ಎಲ್ಲರೂ ಮುಂದಾಗಬೇಕು. ಇದರಲ್ಲಿ ಯಾರೂ ರಾಜಕೀಯ ಮಾಡಬಾರದು. ನೆಲದ ಕಾನೂನು ಕಾಪಾಡುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಚಿನ ಅವರ ತಂದೆ ಮೌನಪ್ಪ ಪಾಂಚಾಳ, ತಾಯಿ ಈರಮ್ಮ, ಸಹೋದರಿಯರಾದ ಸಂಗೀತಾ, ಸುರೇಖಾ, ಸುಜಾತಾ, ಸುನೀತಾ ಹಾಗೂ ಸವಿತಾ ಸೇರಿದಂತೆ ಕುಟುಂಬದ ಇತರ ಸದಸ್ಯರು ಉಪಸ್ಥಿತರಿದ್ದರು.

Previous articleಭೀಕರ ರಸ್ತೆ ಅಪಘಾತ:‌ ಸ್ಥಳದಲ್ಲಿ ಇಬ್ಬರು ಸಾವು
Next articleನಿಮ್ಮೆಲ್ಲರ ಆಶೀರ್ವಾದದಿಂದ ಗುಣಮುಖನಾಗಿದ್ದೇನೆ