ಶಾಮನೂರು ಏನೇ ಹೇಳಿದರೂ ನನಗದು ಆಶೀರ್ವಾದವಿದ್ದಂತೆ

0
17

ದಾವಣಗೆರೆ: ಕಾಂಗ್ರೆಸ್ಸಿನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರ ಬಗ್ಗೆ ನನಗೆ ಬಹಳ ಗೌರವವಿದೆ. ೨೦೦೪ರಿಂದಲೂ ನಾವು ಸೋಲುವುದನ್ನು ನೋಡಿಕೊಂಡು ಬರುತ್ತಿದ್ದಾರೆ. ಮುಂದೆಯೂ ಸೋಲುವುದನ್ನು ನೋಡುತ್ತಾರೆ. ಚುನಾವಣೆಗೆ ಫಂಡ್ ಕೊಡುತ್ತಾರಂತೆ. ನಾವು ಖಂಡಿತವಾಗಿಯೂ ಅದನ್ನು ಪಡೆಯುತ್ತೇವೆ. ಶಿವಶಂಕರಪ್ಪನವರು ಏನೇ ಹೇಳಿಕೆ ನೀಡಿದರೂ ಅದು ನಮಗೆ ಆಶೀರ್ವಾದ ಇದ್ದಂತೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಈಚೆಗೆ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಸಿದ್ದೇಶ್ವರ್ ಸೋಲುವುದನ್ನ ನಾನು ನೋಡಬೇಕು. ಹಾಗಾಗಿ ಅವರು ಈ ಬಾರಿಯ ಲೋಕಸಭಾ ಚುನಾವಣೆಗೆ ನಿಲ್ಲಬೇಕು. ನಾನೇ ಬೇಕಾದರೆ ಚುನಾವಣೆಗೆ ನಿಲ್ಲಲು ಅವರಿಗೆ ಫಂಡ್ ಕೊಡುತ್ತೇನೆ. ಕಾಂಗ್ರೆಸ್ ನಿಂದ ಯಾರೂ ನಿಲ್ಲದಿದ್ದರೆ ನಾನೆ ಸೆಡ್ಡು ಹೊಡೆಯುತ್ತೇನೆ ಎಂದು ಸಂಸದ ಸಿದ್ದೇಶ್ವರ್ ಅವರ ಬಗೆಗೆ ಹೇಳಿಕೆ ನೀಡಿದ್ದರು.

ಶುಕ್ರವಾರ ಶಾಮನೂರು ಹೇಳಿಕೆ ಉಲ್ಲೇಖಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದೇಶ್ವರ್, ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸತತವಾಗಿ ನಾಲ್ಕು ಸಲ ಗೆದ್ದ ನನ್ನ ಸೋಲನ್ನು ನೋಡಬೇಕೆಂಬುದಾಗಿ ಶಾಮನೂರು ಶಿವಶಂಕರಪ್ಪನವರು ಹೇಳಿರುವುದೆ ನನಗೆ ಆಶೀರ್ವಾದ. ಕಳೆದ ೨೦೧೯ರ ಚುನಾವಣೆವರೆಗೂ ಆಶೀರ್ವಾದ ಮಾಡಿದ್ದಾರೆ. ಮುಂದೆ ೨೦೨೪ರಲ್ಲೂ ಶಿವಶಂಕರಪ್ಪನವರ ಆಶೀರ್ವಾದ ನನ್ನ ಮೇಲಿದೆ ಎಂದರು.

ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಬಿಜೆಪಿಗೆ ಸೋಲಿಗೆ ಕಾರಣವಾದರೆ, ತಡವಾಗಿ ಬಿಜೆಪಿ ಟಿಕೆಟ್ ಹಂಚಿದ್ದರಿಂದ ನಮಗೆ ಹಿನ್ನಡೆಯಾಗಿದೆ. ಮುಂಚೆಯೇ ನಮ್ಮ ಪಕ್ಷದಿಂದ ಟಿಕೆಟ್ ಹಂಚಿದ್ದರೆ ನಾವೂ ಗೆಲ್ಲುತ್ತಿದ್ದೆವು. ನಾವೆಲ್ಲಾ ಒಮ್ಮತದಿಂದ ಪಕ್ಷದ ಗೆಲುವಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಪ್ರಚಾರಕ್ಕೆ ಎಲ್ಲಾ ಕಡೆಯಲ್ಲೂ ಪ್ರಚಾರ ಮಾಡಿದ್ದೇನೆ. ಮುಂಚಿಗಿಂತಲೂ ಹೆಚ್ಚು ಕೆಲಸ ಮಾಡಿದ್ದೇನೆ ಎಂದು ಅವರು ಹೇಳಿದರು.

ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್ಸಿನ ಆರು ಜನ ಶಾಸಕರಿದ್ದಾರೆ. ೨೦೧೩ರಲ್ಲಿ ನಮ್ಮ ಸರ್ಕಾರ ಇರಲಿಲ್ಲ. ಆಗ ತಾಪಂ, ಜಿಪಂ, ಪಾಲಿಕೆ ಸದಸ್ಯರು ಸಹ ಇರಲಿಲ್ಲ. ಅಂತಹ ವೇಳೆಯೇ ೧೩ ಸಾವಿರ ಮತಗಳ ಅಂತರದಿಂದ ಲೋಕಸಭೆಗೆ ಆಯ್ಕೆಯಾಗಿದ್ದೇನೆ. ನರೇಂದ್ರ ಮೋದಿ ಹವಾದಿಂದ ಗೆದ್ದಿದ್ದೇನೆಂಬುದಾಗಿ ಕೆಲವರು ಟೀಕಿಸುತ್ತಾರೆ. ನಮ್ಮ ತಂದೆ ದಿವಂಗತ ಜಿ.ಮಲ್ಲಿಕಾರ್ಜುನಪ್ಪ ಸ್ಪರ್ಧಿಸಿ, ಗೆದ್ದಾಗ ಯಾವ ಹವಾ ಇತ್ತು ಎಂಬುದಕ್ಕೆ ಶಾಮನೂರು ಶಿವಶಂಕರಪ್ಪನವರೇ ಉತ್ತರಿಸಬೇಕು ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮೊನ್ನೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಸೇರಿದಂತೆ ಕಾಂಗ್ರೆಸ್ಸಿನವರು ಯಾವ ಹವಾ ಅಥವಾ ಅಲೆಯಿಂದ ಗೆದ್ದಿದ್ದಾರೆ? ಸೋತಾಗ ಎಲ್ಲರೂ ಕಲ್ಲು ಹೊಡೆಯುವುದು ಸಹಜ. ಸೋಲು, ಗೆಲುವುದು ಸಹಜ. ಈ ಸಲ ಸೋತಿರಬಹುದು. ಮುಂದೆ ಖಂಡಿತಾವಾಗಿಯೂ ಮತ್ತೆ ನಾವು ಗೆಲುವು ಸಾಧಿಸುತ್ತೇವೆ ಎಂದರು.

Previous articleವಿಚ್ಛೇದನ ಪಡೆದ ಪತ್ನಿ ಕೊಲ್ಲಲು ಸಂಚು ರೂಪಿಸಿದ್ದ ಮಾಜಿ ಪತಿ ಅರೆಸ್ಟ್ !
Next articleರಾಯಚೂರಿನಲ್ಲಿ ಏಮ್ಸ್‌ ಸ್ಥಾಪನೆ: ಸಿದ್ದರಾಮಯ್ಯ ಕೇಂದ್ರಕ್ಕೆ ಪತ್ರ