ದಾವಣಗೆರೆ: ಶಂಕಿತ ದರೋಡೆಕೋರರನ್ನು ಬಂಧಿಸುವ ಸಂದರ್ಭದಲ್ಲಿ ಪೊಲೀಸರ ಮೇಲೆ ಅಟ್ಯಾಕ್ ಮಾಡಿದ್ದು, ಈ ವೇಳೆ ಓರ್ವ ಪೊಲೀಸ್ ಸಿಬ್ಬಂದಿ ಗಾಯಗೊಂಡು, ಒಬ್ಬ ದರೋಡೆಕೋರನ ಕಾಲಿಗೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ಹೊನ್ನಾಳಿ ತಾಲೂಕಿನ ಅರಬಘಟ್ಟೆ ಕ್ರಾಸ್ ಬಳಿ ಭಾನುವಾರ ಮಧ್ಯರಾತ್ರಿ 2 ಗಂಟೆ ಸುಮಾರಿನಲ್ಲಿ ನಡೆದಿದೆ.
ದರೋಡೆಕೋರರು ಬರುತ್ತಿದ್ದಾರೆ ಎಂಬ ಶಂಕೆ ಮೇಲೆ ಪೊಲೀಸರು ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕ್ರಾಸ್ ಬಳಿ ನಾಕಾ ಬಂಧಿ ಹಾಕಿದ್ದಾರೆ. ಮೂರು ಕಾರಿನಲ್ಲಿ ಬಂದ ಯುಪಿ ಮೂಲದ ಏಳು ಜನ ದರೋಡೆಕೋರರು ಬಂದಿದ್ದು, ತಪಾಸಣೆ ಮಾಡುವ ಸಂದರ್ಭದಲ್ಲಿ ಎರಡು ತಪ್ಪಿಸಿಕೊಂಡಿವೆ. ಒಂದು ಕಾರು ಬೆನ್ನಟ್ಟಿ ಹಿಡಿದ ಪೊಲೀಸರು, ಕಾರಿನೊಳಗೆ ಇದ್ದ ನಾಲ್ವರು ಪೊಲೀಸರ ಮೇಲೆ ಅಟ್ಯಾಕ್ ಮಾಡಲು ಹೋಗಿದ್ದಾರೆ. ಇದರಲ್ಲಿ ಒಬ್ಬ ಮಚ್ಚು ತೆಗೆದು ಓರ್ವ ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿದ್ದಾನೆ. ಕೂಡಲೇ ಪೊಲೀಸರು ದರೋಡೆಕೋರರ ಮೇಲೆ ಫೈರಿಂಗ್ ಮಾಡಿದ್ದು, ಓರ್ವ ದರೋಡೆಕೋರನ ಕಾಲಿಗೆ ಗುಂಡು ತಗಲಿದ್ದು, ನಾಲ್ವರನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಪೂರ್ಣ ಮಾಹಿತಿ ನೀಡಿದ ಮೇಲೆ ಈ ಘಟನೆಯ ನಿಖರ ಸತ್ಯಾಂಶ ತಿಳಿಯಲಿದೆ.