ಉಡುಪಿ: ಜಿಲ್ಲೆಯಾದ್ಯಂತ ಗುರುವಾರವೂ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ವಿವಿಧೆಡೆಗಳಲ್ಲಿ ನೀರು ತುಂಬಿದ್ದು, ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳಿಸಲಾಗಿದೆ. ಈ ಕಾರ್ಯಕ್ಕೆ ಕೆಲವೆಡೆ ಬೋಟುಗಳನ್ನು ಬಳಸಲಾಗಿದೆ.
ಕಳೆದ ಎರಡು ದಿನಗಳಿಂದ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮರವಂತೆ, ಉದ್ಯಾವರ, ಕಾಪು ಮೊದಲಾದೆಡೆಗಳಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಮಳೆಯೊಂದಿಗೆ ವೇಗದ ಗಾಳಿ ಬೀಸುವ ಪರಿಣಾಮ ಅನೇಕ ಮನೆಗಳು ಹಾಗೂ ಕೃಷಿ ತೋಟಗಳಿಗೆ ಹಾನಿ ಸಂಭವಿಸಿದೆ. ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು ಉಡುಪಿ ನಗರ ಸೇರುದಂತೆ ವಿವಿಧೆಡೆಗಳಲ್ಲಿ ಬಹುತೇಕ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹಲವು ಮನೆಗಳಿಗೆ ನೀರು ನುಗ್ಗಿರುವ ಹಿನ್ನೆಲೆಯಲ್ಲಿ ಅಲ್ಲಿನ ಅನೇಕ ಕುಟುಂಬಗಳನ್ನು ಸ್ಥಳಾಂತರ ಮಾಡುವ ಕಾರ್ಯವೂ ಸಾಗಿದೆ.
ನಗರದ ಬೈಲಕೆರೆ, ಮೂಡನಿಡಂಬೂರು, ಕೊಡವೂರು, ನಿಟ್ಟೂರು, ಕಲ್ಸಂಕ, ತೆಂಕಪೇಟೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ನೆರೆ ಪರಿಸ್ಥಿತಿ ಕಂಡುಬಂದಿದ್ದು, ಅನೇಕ ಮನೆಗಳು ಜಲಾವೃತಗೊಂಡಿವೆ. ಗುರುವಾರ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದ್ದು, ಕೂಡಲೇ ಮಾಹಿತಿ ತಿಳಿದ ಅಗ್ನಿಶಾಮಕ ದಳ ಹಾಗೂ ಉಡುಪಿ ನಗರಸಭೆ ಕಾರ್ಯಪಡೆ ಸ್ಥಳಕ್ಕಾಗಮಿಸಿ ಬೋಟ್ ಮೂಲಕ ಹಾಗೂ ಹಗ್ಗದ ಸಹಾಯದಿಂದ ಜನರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಸ್ಥಳೀಯರೂ ಕೈಜೋಡಿಸಿದರು.
ನೆರೆಪೀಡಿತ ಪ್ರದೇಶಗಳಿಗೆ ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್, ಎಸ್.ಪಿ ಅಕ್ಷಯ್ ಹಾಕೆ ಮಚ್ಚೀಂದ್ರ, ನಗರಸಭೆ ಪೌರಾಯುಕ್ತ ರಾಯಪ್ಪ ಸೇರಿದಂತೆ ಹಲವು ಅಧಿಕಾರಿಗಳು ತೆರಳಿ ರಕ್ಷಣಾ ಕಾರ್ಯದಲ್ಲಿ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ರಮೇಶ್ ಕಾಂಚನ್, ಕುಂಜಿಬೆಟ್ಟು ನಗರಸಭಾ ಸದಸ್ಯ ಗಿರೀಶ್ ಅಂಚನ್, ಮಾಜಿ ಸದಸ್ಯರಾದ ಶಶಿರಾಜ್ ಕುಂದರ್, ಆರ್.ಕೆ ರಮೇಶ್ ಪೂಜಾರಿ, ಶಿವಳ್ಳಿ ಗ್ರಾಮಲೆಕ್ಕಿಗ ಪ್ರಮೋದ್ ಹಾಗೂ ಪ್ರದೀಪ್ ಶೇರಿಗಾರ್, ಸುನಿಲ್ ಬೈಲಕರೆ, ಸಂದೇಶ್ ದೇವಾಡಿಗ, ಪ್ರಣಮ್, ಸುಹಾಸ್, ಸಂಪತ್, ರಾಘವೇಂದ್ರ ಹಾಗೂ ಸಂಜಯ್ ಆಚಾರ್ಯ ನೆರವು ನೀಡಿದರು. ವ್ಯಾಪಕ ಮಳೆ ಮುಂದುವರೆದ ಹಿನ್ನೆಲೆಯಲ್ಲಿ ಈಗಾಗಲೇ ಉಡುಪಿ ಜಿಲ್ಲೆಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ