Home Advertisement
Home ಸುದ್ದಿ ರಾಜ್ಯ ವಿಧಾನ ಪರಿಷತ್ ಸದಸ್ಯ ಬೋಜೇಗೌಡ ಆರೋಪ ನಿರಾಧಾರ ಮಾನನಷ್ಟ ಮೊಕ್ಕದ್ದಮೆಗೆ ಚಿಂತನೆ: ಕೇಂದ್ರ ಸಚಿವ ಪ್ರಲ್ಹಾದ...

ವಿಧಾನ ಪರಿಷತ್ ಸದಸ್ಯ ಬೋಜೇಗೌಡ ಆರೋಪ ನಿರಾಧಾರ ಮಾನನಷ್ಟ ಮೊಕ್ಕದ್ದಮೆಗೆ ಚಿಂತನೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

0
57

ಹುಬ್ಬಳ್ಳಿ: ರಾಷ್ಟ್ರೀಯ ವೈದ್ಯಕೀಯ ಮಂಡಳಿಗೆ (ಎನ್‌ಎಂಸಿ) ಸದಸ್ಯರನ್ನಾಗಿ ನೇಮಿಸಲು ಶಿವಮೊಗ್ಗ ವೈದ್ಯರೊಬ್ಬರಿಂದ ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ಕಚೇರಿಯಲ್ಲಿ ಲಂಚ ಪಡೆಯಲಾಗಿದೆ ಎಂದು ವಿಧಾನ ಪರಿಷತ್‌ನ ಜೆಡಿಎಸ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾಡಿರುವ ಆರೋಪಕ್ಕೆ ಸಂಬಂಧ ಪಟ್ಟಂತೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ನಿರಾಧಾರ ಆರೋಪ ಮಾಡಿರುವ ಬೋಜೇಗೌಡರ ವಿರುದ್ಧ ಮಾನನಷ್ಟ ಮೊಕ್ಕದ್ದಮೆ ದಾಖಲಿಸುವ ಬಗ್ಗೆ ಯೋಚಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಮಂಗಳವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬೋಜೇಗೌಡ ಅವರು ಶಿವಮೊಗ್ಗದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ.ಹರೀಶ್ ಅಯ್ಯಣ್ಣ ಎಂಬುವವರನ್ನು ಎನ್‌ಎಂಸಿ ಸದಸ್ಯರನ್ನಾಗಿ ನೇಮಿಸುವುದಕ್ಕೆ ಪ್ರಲ್ಹಾದ ಜೋಶಿ ಅವರ ಕಚೇರಿಯ ಸಿಬ್ಬಂದಿಗೆ ೨.೫ ಕೋಟಿ ಲಂಚ ಸಂದಾಯವಾಗಿದೆ ಎಂದು ದಾಖಲೆ ಪ್ರದರ್ಶಿಸಿ ಆರೋಪಿಸಿದ್ದರು.

ಆರೋಪ ಕೇಳಿ ಬರುತ್ತಿದ್ದಂತೆಯೇ ಅದಕ್ಕೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬೋಜೇಗೌಡ ಅವರು ಪ್ರದರ್ಶಿಸಿರುವ ಪತ್ರ ವೈದ್ಯರೊಬ್ಬರಿಗೆ ಬರೆದುದಾಗಿದೆ. ನಾನು ವೈದ್ಯ ಅಲ್ಲ. ಅವರು ಆರೋಪಿಸಿರುವಂತಹ ಸಿಬ್ಬಂದಿ ನಮ್ಮ ಕಚೇರಿಯಲ್ಲಿ ಇಲ್ಲ. ನಿರಾಧಾರಾವಾಗಿ ಬೋಜೇಗೌಡ ಆರೋಪ ಮಾಡಿದ್ದಾರೆ. ಅದನ್ನು ಸಮರ್ಥವಾಗಿ ಎದುರಿಸಲಾಗುವುದು. ಅಲ್ಲದೇ, ಮಾನನಷ್ಟ ಮೊಕ್ಕದ್ದಮೆಯನ್ನು ಹೂಡುವು ಚಿಂತನೆ ನಡೆಸಿದ್ದೇನೆ ಎಂದು ಟ್ವಿಟ್ಟರ್‌ನಲ್ಲಿ ಜೋಶಿ ಬರೆದುಕೊಂಡಿದ್ದಾರೆ. ಕೇಂದ್ರ ಆರೋಗ್ಯ ಸಚಿವರಾಗಿದ್ದ ಹರ್ಷವರ್ಧನ ಅವರು ಡಾ.ಬಿ.ಡಿ. ಪಾಂಡೆ ಎಂಬುವವರಿಗೆ ಬರೆದಿದ್ದ ಪತ್ರವನ್ನೂ ಜೋಶಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

Previous articleಕಾರು-ಟ್ಯಾಂಕರ್ ಢಿಕ್ಕಿ: ಮೂವರ ಸಾವು
Next articleನಿವೃತ್ತ ಪ್ರಾಧ್ಯಾಪಕರಿಗೆ ಆನ್‌ಲೈನ್‌ನಲ್ಲಿ ೧.೧೯ ಕೋಟಿ ವಂಚನೆ