ಮಂಗಳೂರು: ಇನ್ನೇನು ಪರೀಕ್ಷೆ ನಡೆಯಬೇಕು, ಬೆಲ್ ಆಗಬೇಕು ಎನ್ನುವಾಗಲೇ ಗಡಿನಾಡು ಕಾಸರಗೋಡಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಪರೂಪದಲ್ಲಿ ಅಪರೂಪವಾದ ಘಟನೆಯೊಂದು ನಡೆದಿದೆ. ಹದ್ದೊಂದು ವಿದ್ಯಾರ್ಥಿ ಹಾಲ್ ಟಿಕೆಟ್ ಹಿಡಿದು ಹಾರಿದೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರೆಲ್ ಆಗಿದೆ.
ಸರಕಾರಿ ಇಲಾಖೆಯ ಪರೀಕ್ಷೆ ಈ ಶಾಲೆಯಲ್ಲಿ ನಡೆಯುತ್ತಿತ್ತು. ಸುಮಾರು 300 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬಂದಿದ್ದರು. ವಿದ್ಯಾರ್ಥಿಗಳು ಪರೀಕ್ಷೆ ಆರಂಭವಾಗುವ ವೇಳೆಯ ತುಸು ಬೇಗವೇ ಬಂದಿದ್ದರು. ಬೆಳಿಗ್ಗೆ 7.30ಕ್ಕೆ ನಿಗದಿಯಾಗಿದ್ದ ಪರೀಕ್ಷೆಯ ಗಂಟೆ ಬಾರಿಸುವ ಮುನ್ನ ಎಲ್ಲಿಂದಲೋ ಹಾರಿ ಬಂದ ಹದ್ದೊಂದು ವಿದ್ಯಾರ್ಥಿಯ ಹಾಲ್ ಟಿಕೆಟ್ ಕಸಿದು ಹಾರಿದೆ ಈ ಘಟನೆ ಎಲ್ಲರನ್ನೂ ಅಚ್ಚರಿಗೊಳಪಡಿಸಿತ್ತು. ಹದ್ದು ಶಾಲೆಯ ಮೇಲಿನ ಮಹಡಿಯ ಕಿಟಕಿಯ ಅಂಚಿನಲ್ಲಿ ಶಾಂತವಾಗಿ ಕುಳಿತಿತ್ತು. ಕಾಗದವನ್ನು ತನ್ನ ಕೊಕ್ಕಿನಲ್ಲಿ ಹಿಡಿದುಕೊಂಡು ಸೇರಿದ್ದ ಜನರನ್ನು ನೋಡುತ್ತಿತ್ತು.
ಗದ್ದಲ ಮತ್ತು ಕೆಳಗೆ ಜನಸಂದಣಿ ಸೇರಿದ್ದರೂ, ಹದ್ದು ಯಾವುದೇ ಆತಂಕವಿಲ್ಲದೆ ಕೆಲವು ನಿಮಿಷಗಳ ಕಾಲ ಹಾಲ್ ಟಿಕೆಟ್ ಹಿಡಿದುಕೊಂಡು ಕುಳಿತಿತ್ತು, ಕೊನೆಗೆ ಸ್ವಲ್ಪ ಸಮಯದ ನಂತರ ಹಾಲ್ ಟಿಕೆಟ್ ಕೆಳಕ್ಕೆ ಹಾಕಿದೆ. ಈ ಪ್ರಹಸನದ ಬಳಿಕ ವಿದ್ಯಾರ್ಥಿ ನಿರಾತಂಕವಾಗಿ ಪರೀಕ್ಷೆ ಬರೆದರು.