ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಸಚಿವ ಸಂತೋಷ ಲಾಡ ಅನಿರೀಕ್ಷಿತ ಭೇಟಿ ನೀಡಿವಿದ್ಯಾರ್ಥಿನೀಯರೊಂದಿಗೆ ಸಂವಾದ, ಊಟ ಸವಿದ ಸಚಿವರು
ಧಾರವಾಡ(ಕ.ವಾ)ಜು.12: ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ ಅವರು ಶುಕ್ರವಾರ ಸಂಜೆ ಧಾರವಾಡ ನಗರದ ಸೈದಾಪುರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಕ್ ನಂತರದ ವಿದ್ಯಾರ್ಥಿನೀಯರ ವಸತಿ ನಿಲಯಕ್ಕೆ ಅನಿರೀಕ್ಷಿತ ಭೇಟಿ ನೀಡಿ, ವಿದ್ಯಾರ್ಥಿನೀಯರ ಊಟ, ಲೈಬ್ರರಿ, ಓದುವ ಕೊಠಡಿ ಸೇರಿದಂತೆ ವಿವಿಧ ಮೂಲಸೌಕರ್ಯಗಳನ್ನು ಪರಿಶೀಲಿಸಿದರು.
ಇಂದು ಸಂಜೆ 7 ಗಂಟೆ ಸುಮಾರಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರೊಂದಿಗೆ ವಿದ್ಯಾರ್ಥಿನೀಯರ ವಸತಿನಿಲಯಕ್ಕೆ ಆಗಮಿಸಿದ ಸಚಿವರು, ನೇರವಾಗಿ ಅಡುಗೆ ಕೊಣೆಗೆ ಭೇಟಿ ನೀಡಿ, ಆಹಾರ ತಯ್ಯಾರಿಕೆ, ಅಡುಗೆ ಪದಾರ್ಥ, ಸ್ವಚ್ಛತೆ, ನೈರ್ಮಲ್ಯ ಪರಿಶೀಲಿಸಿ, ಅಡುಗೆ ಪದಾರ್ಥಗಳ ಗುಣಮಟ್ಟ, ರುಚಿ ನೋಡಿದರು.
ನಂತರ ಊಟದ ಸಭಾಂಗಣದಲ್ಲಿ ವಸತಿನಿಲಯದ ವಿದ್ಯಾರ್ಥಿನೀಯರೊಂದಿಗೆ ಸಂವಾದ ಮಾಡಿ, ಅವರ ಓದು, ಹಾಸ್ಟೆಲ್ ಸೌಲಭ್ಯ, ಇಲಾಖೆ ಅಧಿಕಾರಿಗಳು ತೋರುವ ಕಾಳಜಿ, ಆರೋಗ್ಯ ಸುರಕ್ಷತೆ ಬಗ್ಗೆ ಮಾಹಿತಿ ಪಡೆದರು.
ಸಚಿವರು ಮಾತನಾಡಿ, ಬೇಡಿಕೆ ಅನುಸಾರ ವಸತಿನಿಲಯದ ಆಸಕ್ತ ವಿದ್ಯಾರ್ಥಿನೀಯರಿಗೆ ಉಚಿತವಾಗಿ ಐಎಎಸ್, ಕೆಎಎಸ್ ದಂತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡಲಾಗುವುದು. ನಿಲಯ ಪಾಲಕರಲ್ಲಿ ನೋಂದಣಿ ಮಾಡಿಕೊಳ್ಳಲು ತಿಳಿಸಿದರು.
ವಸತಿನಿಲಯದ ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿನೀಯರಿಗೆ ಉತ್ತಮ ಗುಣಮಟ್ಟದ ಆಹಾರ ಪೂರೈಸಲಾಗುತ್ತಿದೆ. ಯಾವುದೇ ಕೊರತೆಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದರು.
ವಿದ್ಯಾರ್ಥಿಗಳಲ್ಲಿ ಕೌಶಲ್ಯ ಜ್ಞಾನ ಬೆಳೆಸಲು ಹೆಚ್ಚು ಒತ್ತು ನೀಡಲಾಗುತ್ತಿದ್ದು, ವಿದ್ಯಾರ್ಥಿನೀಯರು ಇಚ್ಚಿಸಿದಲ್ಲಿ ವಿಶೇಷವಾದ ಕೌಶಲ್ಯ ತರಬೇತಿಗೆ ವ್ಯವಸ್ಥೆ ಮಾಡುವದಾಗಿ ಸಚಿವರು ತಿಳಿಸಿದರು.
ಜಿಲ್ಲೆಯ ಹಿರಿಯ ಅಧಿಕಾರಿಗಳು ವಿವಿಧ ಇಲಾಖೆಗಳ ವಿದ್ಯಾರ್ಥಿನಿಲಯಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ, ಸಾಧನೆಯ ಛಲ ಮತ್ತು ಆತ್ಮಗೌರದ ಬದುಕಿನ ಬಗ್ಗೆ ಪ್ರೇರಣೆ ನೀಡಬೇಕು. ಇಲಾಖೆ ಮುಖ್ಯಸ್ಥರು ವಸತಿನಿಲಯಗಳಿಗೆ ನಿರಂತರ ಭೇಟಿ ನೀಡಿ, ವಿದ್ಯಾರ್ಥಿಗಳಲ್ಲಿ ಮಾನಸಿಕ ಧೈರ್ಯ ಮತ್ತು ಆತ್ಮೀಯ ಸ್ಪಂದನೆ ಬೆಳೆಸಬೇಕೆಂದು ತಿಳಿಸಿದರು.
ವಿದ್ಯಾರ್ಥಿನೀಯರು ಡಿಸಿ ದಿವ್ಯ ಪ್ರಭು ಅವರಂತ ಅಧಿಕಾರಿಗಳನ್ನು ಮಾದರಿಯಾಗಿ ಇಟ್ಟುಕೊಂಡು ಐಎಎಸ್,ಐಪಿಎಸ್ ಓದಿ, ಪಾಸ್ ಆಗುವ ಮೂಲಕ ಉನ್ನತ ಸಾಧನೆ ಮಾಡಬೇಕೆಂದು ನುಡಿದರು.
ಅನಿರೀಕ್ಷಿತವಾಗಿ ಅತಿಥಿಗಳಾಗಿ ಆಗಮಿಸಿದ್ದ ಸಚಿವರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಮನೆಯವರಂತೆ ಆತ್ಮೀಯ ಕ್ಷಣಗಳನ್ನು ಕಳೆದ ವಿದ್ಯಾರ್ಥಿನೀಯರು ಸೆಲ್ಪಿ ತೆಗೆದುಕೊಂಡು ಖುಷಿಪಟ್ಟರು.
ವಿದ್ಯಾರ್ಥಿನಿಯರೊಂದಿಗೆ ಸಚಿವ ಸಂತೋಷ ಲಾಡ, ಡುಸಿ ದಿವ್ಯ ಪ್ರಭು ಮತ್ತು ಮಹಾನಗರಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಅವರು ಚಪಾತಿ, ಸವತಿಕಾಯಿ ಪಲ್ಲೆ, ಅಣ್ಣ ಸಾಂಬರ ಸವಿದರು. ಊಟದ ನಂತರ ವಿದ್ಯಾರ್ಥಿಗಳಿಗೆ ಬಾಳೆ ಹಣ್ಷು ನೀಡಲಾಯಿತು.
ವಿದ್ಯಾರ್ಥಿನೀಯರ ವಸತಿನಿಲಯದ ಅಚ್ಚುಕಟ್ಟು, ಸ್ವಚ್ಛತೆ, ವಿದ್ಯಾರ್ಥಿನೀಯರ ಶಿಸ್ತು ನೋಡಿ, ಸಚಿವರು ಭೇಷ್ ಎಂದರು.
ಈಗಾಗಲೇ ಜಿಲ್ಲೆಗೆ ಅನುಮತಿ ನೀಡಿರುವ ಹೊಸ ವಸತಿನಿಲಯಗಳನ್ನು ಶೀಘ್ರ ಆರಂಭಿಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಸಚಿವರ ಭೇಟಿ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಶುಭ ಪಿ. ಜಿಲ್ಲಾ ಕಚೇರಿ ವ್ಯವಸ್ಥಾಪಕಿ ಮೀನಾಕ್ಷಿ ಚಂಚನೂರ, ವಾರ್ಡನ್ ಗೀತಾ ಇದ್ದರು.
ಭೇಟಿಯಿಂದ ಆನಂದಿತರಾದ ವಿದ್ಯಾರ್ಥಿನೀಯರು ಸಾಮೂಹಿಕ ಚಪ್ಪಾಳೆ ಮೂಲಕ ಸಚಿವರನ್ನು, ಜಿಲ್ಲಾಧಿಕಾರಿಗಳನ್ನು ಬಿಳ್ಕೋಟ್ಟರು.