ಬಳ್ಳಾರಿ: ತಾಲೂಕಿನ ಶ್ರೀಧರಗಡ್ಡೆ, ಅಮರಾಪುರ, ಸಂಗನಕಲ್ಲು, ಪಿಡಿ ಹಳ್ಳಿ, ಹಲಕುಂದಿ ಸೇರಿದಂತೆ ಹದಿಮೂರು ಹಾಗೂ ಸಂಡೂರಿನ 1 ಗ್ರಾಪಂ ಸೇರಿ ಒಟ್ಟು ಜಿಲ್ಲೆಯ 14 ಗ್ರಾಂ ಪಂಚಾಯಿತಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ತೆರಳಿ, ದಾಖಲೆ ಪತ್ರಗಳನ್ನು ಶುಕ್ರವಾರ ಪರಿಶೀಲಿಸಿದ್ದಾರೆ.
15ನೇ ಹಣಕಾಸು ಆಯೋಗದ ಅನುದಾನದ ಬಳಕೆಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಪರಿಶೀಲಿಸಿ, ವಶಕ್ಕೆ ಪಡೆದು ರವಾನಿಸುವಂತೆ ಲೋಕಾಯುಕ್ತ ಕೇಂದ್ರ ಕಚೇರಿಯಿಂದ ವಾರೆಂಟ್ ಬಂದಿತ್ತು. ಅದರಂತೆ ದಾಖಲೆಗಳನ್ನು ಸಂಗ್ರಹಿಸಿ ಬೆಂಗಳೂರು ಕಚೇರಿಗೆ ರವಾನಿಸಲಾಗುವುದು. ಅಲ್ಲಿ ತನಿಖೆ ನಡೆಯಲಿದೆ ಎಂದು ಬಳ್ಳಾರಿ ಲೋಕಾಯುಕ್ತ ಎಸ್‌ಪಿ ಸಿದ್ದರಾಜು ತಿಳಿಸಿದ್ದಾರೆ.