ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿಗೆ ಸಂಬಂಧಿಸಿದಂತೆ ಇಲ್ಲಿನ ಗಾಂಧಿ ಭವನದಲ್ಲಿ ರವಿವಾರ ಜರುಗಿದ ಪಂಚಮಸಾಲಿ ವಕೀಲರ ರಾಜ್ಯ ಮಟ್ಟದ ಸಭೆಯಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಅಡ್ವೋಕೇಟ್ ಪರಿಷತ್ ಅಸ್ತಿತ್ವಕ್ಕೆ ತರಲಾಯಿತು.
ಸಭೆಯ ಸಾನ್ನಿಧ್ಯ ವಹಿಸಿದ್ದ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ಅಡ್ವೋಕೇಟ್ ಪರಿಷತ್ ಘೋಷಣೆ ಮಾಡಿ, ಪರಿಷತ್‌ನ ಬ್ಯಾನರ್ ಅನಾವರಣಗೊಳಿಸಿದರು.
೨ಎ ಮೀಸಲಾತಿಗಾಗಿ ಸರ್ಕಾರದ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಈ ಸಮಾವೇಶದಲ್ಲಿ ವಕೀಲರ ಮೂಲಕ ಸರ್ಕಾರದ ಮೇಲೆ ಒತ್ತಡ ತರಲು ಹಕ್ಕೊತ್ತಾಯ ಮಂಡನೆಯಾಯಿತು. ಗಣ್ಯರು, ಬೇರೆ ಬೇರೆ ಜಿಲ್ಲೆಯ ವಕೀಲರು ವಿಷಯ ಮಂಡನೆ ಮಾಡಿದ ಬಳಿಕ ಶ್ರೀಗಳು ಪರಿಷತ್ ರಚನೆಯಾದ ಬಗ್ಗೆ ಘೋಷಿಸಿ, ಸಮಾಜದ ವಕೀಲರ ವೃಂದಕ್ಕೆ ಪ್ರತಿಜ್ಞಾ ವಿಧಿ ಭೋದಿಸಿ, ಮೀಸಲಾತಿ ಕೊಡಿಸುವವರೆಗೂ ಹೋರಾಟ ನಡೆಸಲು ಮನವಿ ಮಾಡಿದರು.