ಬಿಗಿ ಕಾನೂನು ಜಾರಿಯಾಗದೇ ಸಮುದಾಯ, ಪ್ರಾಬಲ್ಯ, ಧನಬಲ ಇತ್ಯಾದಿಗಳನ್ವಯ ಕಾನೂನು ಮತ್ತು ಸುವ್ಯವಸ್ಥೆ ಜಾರಿಗೊಳಿಸುತ್ತಿರುವುದರಿಂದಲೇ ಧ್ವನಿ ಇಲ್ಲದವರ ವಿಷಯದಲ್ಲಿ ಇಂತಹ ಅಮಾನುಷ ಘಟನೆಗಳು ಜರುಗುತ್ತಿರಲು ಕಾರಣ. ಪ್ರಭಾವಿಗಳಿಗೆ ಅನುಗುಣವಾಗಿ ಬಗ್ಗಿಸುವ ಕಾನೂನು, ನ್ಯಾಯದಾನ ವಿಳಂಬ ಇತ್ಯಾದಿಗಳಿಂದ ಆದಿವಾಸಿ, ಬುಡಕಟ್ಟು, ಅತ್ಯಂತ ದುರ್ಬಲ ಚಿಕ್ಕಪುಟ್ಟ ಸಮುದಾಯಗಳಿಗೆ ರಕ್ಷಣೆ ಇಲ್ಲವಾಗಿದೆ. ಇವರುಗಳು ಭಯದ ನೆರಳಿನಲ್ಲಿ ಬದುಕಬೇಕಾಗಿದೆ.
ವಾರದಿಂದೀಚೆಗೆ ಸಂಭವಿಸಿದ ನಾಲ್ಕೈದು ಅಮಾನುಷ ಘಟನೆಗಳು ತೀವ್ರ ಘಾಸಿಗೊಳಿಸಿವೆ. ಸ್ವಾತಂತ್ರ್ಯ ಬಂದು ಎಪ್ಪತೈದು ವರ್ಷಗಳ ನಂತರವೂ ದೇಶದಲ್ಲಿ ಮನುಷ್ಯ ಮನುಷ್ಯನನ್ನಾಗಿ ನೋಡುವ ಮತ್ತು ಈ ನೆಲದ ಸಂವಿಧಾನ, ಕಾನೂನಿಗೆ ಗೌರವ ನೀಡುವ ವ್ಯವಸ್ಥೆ ರೂಪಿತವಾಗಿಲ್ಲವಲ್ಲ ಎಂಬ ಖೇದ ಮೂಡದಿರದು.
ಮಧ್ಯಪ್ರದೇಶದ ಸಿಧಿ ಪಟ್ಟಣದಲ್ಲಿ ಆದಿವಾಸಿ ಸಮುದಾಯದ ವ್ಯಕ್ತಿಯೋರ್ವ ಪಟ್ಟಣದ ಸಂತೆಯ ಕಟ್ಟೆಯಲ್ಲಿ ಕುಳಿತಿದ್ದ. ಆತನ ಮುಂದೆ ಮರಿ ಪುಢಾರಿಯೊಬ್ಬ ಸಿಗರೇಟು ಸೇದುತ್ತ ಆತನ ಮೈಮೇಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದ. ಇದರ ವೀಡಿಯೊ ಎಲ್ಲೆಡೆ ಹಬ್ಬಿದಾಗ ಮಧ್ಯಪ್ರದೇಶದ ಸರ್ಕಾರವೇ ಕಂಪಿಸಿಬಿಟ್ಟಿತು.
ಇದೇ ರಾಜ್ಯದಲ್ಲಿ ಇಬ್ಬರು ಮಹಿಳೆಯರಿಗೆ ಬುಡಕಟ್ಟು ಸಮುದಾಯದ ಯುವಕರು ಕೀಟಲೆ ಮಾಡಿದ್ದಾರೆಂದು ಭಾವಿಸಿ ಅವರ ಮೇಲೆ ಮಲ ಸುರಿದು, ತಿನ್ನಿಸಿ, ಬೂಟು ಚಪ್ಪಲಿಗಳ ಹಾರ ಹಾಕಿ ಮೆರವಣಿಗೆ ನಡೆಸಲಾಯಿತು.
ಇನ್ನೊಂದು, ಉತ್ತರ ಪ್ರದೇಶದಲ್ಲಿ ಗುತ್ತಿಗೆ ನೌಕರನೋರ್ವ ದಲಿತ ವ್ಯಕ್ತಿಯಿಂದ ತನ್ನ ಕಾಲು ನೆಕ್ಕಿಸುತ್ತಿದ್ದ ಘಟನೆ.
ರಾಜ್ಯದ ಕಾನೂನು ಸುವ್ಯವಸ್ಥೆಗೆ ಸವಾಲೆಸೆದ ಘಟನೆ ಇದಾದರೆ, ಅಮಾನುಷ ಮನಸ್ಥಿತಿಯ ಪ್ರಕರಣ ಎಂಬುದು ನೋವಿನ ಆಯಾಮ.
ಎಲ್ಲಕ್ಕೂ ಅಮಾನುಷ ಮತ್ತು ಬರ್ಬರವಾದ ಘಟನೆ ನಮ್ಮ ಚಿಕ್ಕೋಡಿ ತಾಲ್ಲೂಕಿನ ಹಿರೆಕೋಡಿಯ ಜೈನ ಮುನಿಗಳ ಹತ್ಯೆ. ಸರ್ವವನ್ನೂ ತ್ಯಾಗ ಮಾಡಿ ದಿಗಂಬರರಾದ ಯೋಗಿ ತನ್ನ ಆಪ್ತರಿಂದಲೇ ಕೊಲೆಯಾದದ್ದು ಕಲ್ಪನೆಗೂ ಮೀರಿದ ಕೃತ್ಯ. ಹತ್ಯೆಯ ನಂತರ ದೇಹವನ್ನು ಒಂಬತ್ತು ತುಂಡುಗಳಾಗಿ ಮಾಡಿ ಬಾವಿಯಲ್ಲಿ ಹೂತು ಹಾಕಿದ ಅಮಾನುಷ ಸಂಗತಿ ಯಾವ ಕ್ರೌರ್ಯಕ್ಕೂ ಸಾಟಿ ಇಲ್ಲ ಎನ್ನಬಹುದೇನೋ?
ಈ ಎಲ್ಲ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ತೀರಾ ಖಂಡನಾರ್ಹ ಮತ್ತು ಅಮಾನುಷ ಎನ್ನುತ್ತ ಸರ್ಕಾರಗಳು, ಇನ್ನು ಮುಂದೆ ಹೀಗಾಗದಂತೆ ಜಾಗೃತರಾಗುತ್ತೇವೆ, ನೋಡಿಕೊಳ್ಳುತ್ತೇವೆ ಎಂದು ಉತ್ತರಿಸಿವೆ. ಆದರೆ ಎದ್ದಿರುವ ಪ್ರಶ್ನೆ ಎಂದರೆ, ಇವೆಲ್ಲ ಘಟನಾನಂತರದ ಪೋಸ್ಟ್ ಮಾರ್ಟಮ್. ಇಂತಹ ಘಟನೆಗಳು ಏಕೆ ಜರುಗುತ್ತಿವೆ? ಅದೂ ದುರ್ಬಲರು, ಅಸಹಾಯಕರು, ಧ್ವನಿ ಇಲ್ಲದ, ಸಮಾಜದ ಬೆಂಬಲ ಇಲ್ಲದ, ತುಳಿತಕ್ಕೆ ಒಳಗಾದ ಜನರ ಮೇಲೆಯೇ ಇಂಥವು ಇನ್ನೆಷ್ಟು ಕಾಲ ನಡೆಯುತ್ತಿರಬೇಕು? ಎನ್ನುವುದು. ಮಧ್ಯಪ್ರದೇಶದ ಘಟನೆಯನ್ನೇ ತೆಗೆದುಕೊಳ್ಳಿ. ಕೊಬ್ಬರಿ ಮಾರುಕಟ್ಟೆಯಲ್ಲಿ ತನ್ನಷ್ಟಕ್ಕೆ ತಾನು ಸಂಜೆ ವೇಳೆ ಕುಳಿತಿದ್ದ ಆದಿವಾಸಿ ವ್ಯಕ್ತಿ ಬಲೆಕೋಲ್ ಎಂಬಾತನದ್ದು ಏನೇನೂ ತಪ್ಪಿರಲಿಲ್ಲ. ತನ್ನಷ್ಟಕ್ಕೆ ತಾನು ಮಾರುಕಟ್ಟೆಯ ಪಕ್ಕದಲ್ಲಿ ಕುಳಿತಿದ್ದವನ ಮೇಲೆ ರಾಜಕೀಯ ಪ್ರಾಬಲ್ಯವುಳ್ಳ ಪ್ರವೀಣ ಶುಕ್ಲಾ ಕೊಬ್ಬಿನಿಂದ ಸಿಗರೇಟು ಸೇದುತ್ತ ಆತನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದು. ಏಕೆ ಇಷ್ಟು ಅಮಾನವೀಯತೆ ಎಂದರೆ ಕೊಬ್ಬು ಅಷ್ಟೇ. ಆತನ ಚಿಕ್ಕಪ್ಪ ಶಾಸಕ. ಅದೂ ಆಡಳಿತ ಪಕ್ಷದ ವ್ಯಕ್ತಿ ಅಷ್ಟೇ. ಮಧ್ಯಪ್ರದೇಶ ಸರ್ಕಾರ ತೀವ್ರ ಟೀಕೆಯ ನಂತರ ಆತನನ್ನು ಬಂಧಿಸಿ ಮನೆಯನ್ನೇನೋ ಬುಲ್ಡೋಜ್ ಮಾಡಿತು. ಚುನಾವಣೆಯ ಹೊಸ್ತಿಲಲ್ಲಿ ದೊಡ್ಡ ವಿವಾದ ಭುಗಿಲೆದ್ದಾಗ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚವ್ಹಾಣ ಆ ಆದಿವಾಸಿಯನ್ನು ಮನೆಗೆ ಕರೆಸಿ ಪಾದಪೂಜೆ ನಡೆಸಿ ಕಳಿಸಿದರು. ಪಾಪ, ಆದಿವಾಸಿ ಕೋರಿದ್ದೇನೆಂದರೆ ದಯವಿಟ್ಟು ಆತನನ್ನು (ಆರೋಪಿಯನ್ನು) ಕ್ಷಮಿಸಿಬಿಡಿ. ಅವರು ದೊಡ್ಡವರು. ತಿಳಿದವರು. ಬಹಳ ಓದಿದವರು. ನಾವು, ನಮ್ಮ ಸಂಸಾರ ಬದುಕಬೇಕು. ಇದೇ ಊರಲ್ಲಿಯೇ ಬಾಳಬೇಕು' ಎಂದು. ಆದಿವಾಸಿ ಮನಸ್ಸು ಎಷ್ಟು ಮೃದು, ಅಮಾಯಕ ಮತ್ತು ಹೃದಯವಂತಿಕೆಯಿಂದ ಕೂಡಿದ್ದು ನೋಡಿ. ಚಿಕ್ಕೋಡಿಯ ಹಿರೇಕೋಡಿ ಜೈನಾಶ್ರಮದ ಜಿನಮುನಿ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಇನ್ನೊಂದು ದುರಂತದ ಸಂಗತಿ. ಜೈನಮುನಿಗಳು ವಿದ್ವಾಂಸರು. ತಾಂತ್ರಿಕ ಶಿಕ್ಷಣ ಪಡೆದವರು. ನಂತರ ಎಲ್ಲವನ್ನೂ ತ್ಯಾಗ ಮಾಡಿ ಆಶ್ರಮ ನಿರ್ಮಿಸಿ ನೂರಾರು ಮಕ್ಕಳಿಗೆ ಶಿಕ್ಷಣ, ವಸತಿ ನೀಡಿ ಸಮುದಾಯಕ್ಕೆ ಪ್ರೀತಿಪಾತ್ರರಾದವರು. ಆಪತ್ಕಾಲದಲ್ಲಿ ಸಹಾಯ ಮಾಡಿದ್ದನ್ನು ಮರಳಿ ಕೇಳಿದ್ದಷ್ಟೇ ಅವರ ತಪ್ಪು. ಅಷ್ಟಕ್ಕೇ ಕರೆಂಟ್ ಶಾಕ್ ನೀಡಿ, ಇಪ್ಪತ್ತು ಕಿಲೋ ಮೀಟರ್ ಹೊತ್ತೊಯ್ದು, ಒಂಬತ್ತು ತುಂಡು ಮಾಡಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಬಂಧಿತರಿಬ್ಬರೇ ಈ ಕೃತ್ಯ ಎಸಗಿದರೇ ಎಂಬುದಿನ್ನೂ ಸ್ಪಷ್ಟವಾಗಿಲ್ಲ. ಇವರೇ ಆರೋಪಿಗಳಾ, ಇವರ ಹಿಂದೆ ಇನ್ಯಾರಿದ್ದಾರೆ? ಕೇವಲ ಆರು ಲಕ್ಷಕ್ಕೆ ಮುನಿಗಳ ಕೊಲೆಯಾಯಿತಾ, ಅಥವಾ ಬೇರೆ ಏನಾದರೂ ಇದರ ಹಿಂದಿತ್ತಾ ಎಂಬುದನ್ನು ಕಾನೂನು ನೋಡಿಕೊಳ್ಳುತ್ತದೆ. ಸತ್ಯ ಇನ್ನಷ್ಟೇ ಬಯಲಾಗಬೇಕಾಗಿದೆ. ಈ ಘಟನೆಯಂತೂ ದೇಶಾದ್ಯಂತ ಸಹೃದಯರ ಮನ ಕಲಕಿದೆ. ದಿಗಂಬರ ಮುನಿಯನ್ನು ಇಷ್ಟು ಅಮಾನುಷವಾಗಿ ಕೊಲೆ ಮಾಡಿರುವುದು ದೇಶದಲ್ಲಿಯೇ ಪ್ರಥಮ. ಜೈನ ಸಮುದಾಯ ರಾಜ್ಯದಲ್ಲಿ ಅಲ್ಪ. ಬೆಳಗಾವಿ ಜಿಲ್ಲೆಯಲ್ಲಿ ಇವರ ಸಂಖ್ಯೆ ಹೆಚ್ಚು. ಐತಿಹಾಸಿಕ ಮತ್ತು ಸಾಮಾಜಿಕ ಕಾರಣಗಳಿಂದಾಗಿ ಇನ್ನುಳಿದ ಕಡೆ ಸಮುದಾಯದ ಆಶ್ರಮಗಳು, ಮಂದಿರಗಳು, ಸ್ವಾಮಿಗಳು ಇರುವುದೇ ಬೆರಳೆಣಿಕೆಯಷ್ಟು. ಈ ಸಮುದಾಯದಿಂದ ಸಾಮಾಜಿಕ ಸಾಮರಸ್ಯ ಕದಡಿದೆ. ಅಶಾಂತಿ ನಿರ್ಮಾಣವಾಗಿದೆ. ಸಮಾಜದ ಯುವಕರು ಸಮಾಜ ಘಾತಕರಾಗಿದ್ದಾರೆ ಎಂಬ ಒಂದೇ ಒಂದು ಆರೋಪ ಇಲ್ಲ. ಬದಲು ಅಹಿಂಸೆಯನ್ನೇ ಜೀವನವನ್ನಾಗಿಸಿಕೊಂಡ ಸಮುದಾಯವಿದು. ಹಾಗೆಯೇ ಸಮಾಜ ಕಟ್ಟುವಲ್ಲಿ ಜೈನ ಸಮುದಾಯದ ಕೊಡುಗೆ ಅಪಾರ. ಈ ಅಮಾನುಷ ಘಟನೆಯ ಬಗ್ಗೆ ಮರುಗದವರಿಲ್ಲ. ತನಿಖೆಯಾಗಬೇಕು, ರಕ್ಷಣೆ ಬೇಕು ಎಂದು ಕೋರಿದ ಸಮುದಾಯ ಮತ್ತು ಮುನಿಗಳು ಹೇಳಿದ್ದೇನು ಗೊತ್ತಾ?
ಆರೋಪಿಗಳನ್ನು ಹಿಂಸಿಸಬೇಡಿ. ನಾವು ಅಹಿಂಸೆಯ ಪ್ರತಿಪಾದಕರು. ಶಿಕ್ಷಿಸಬೇಡಿ. ಅವರನ್ನು ಪ್ರಾಯಶ್ಚಿತ್ತ ಮಾಡಿಕೊಳ್ಳುವಷ್ಟು ಶಿಕ್ಷಣ ನೀಡಿ. ಪ್ರಜ್ಞೆ ಬೆಳೆಸಿ. ಮುಂದೆ ಇಂತಹ ಘಟನೆಗಳು ಆಗದಂತೆ ರಕ್ಷಣೆ ಕೊಡಿ’ ಎಂಬುದು.
ಎಷ್ಟು ಮಾನವೀಯತೆ, ಹೃದಯವಂತಿಕೆ ನೋಡಿ. ಯತಿಗಳನ್ನು ಕಳೆದುಕೊಂಡು ಕಣ್ಣೀರು ಹಾಕದವರಿಲ್ಲ. ಸ್ವತಃ ಮುನಿಗಳೆಲ್ಲ ಮಮ್ಮಲ ಮರುಗಿದರು. ಸಮುದಾಯದ ಯುವಕರಿಗೆ, ಗಣ್ಯರಿಗೆ ಅಹಿಂಸೆ ಮತ್ತು ಶಾಂತಿಯ ಮಂತ್ರ ಪಠಿಸಿದರು. ಎಲ್ಲಿಯೂ ದೊಂಬಿ, ಗಲಾಟೆ ಆಗದಂತೆ ನೋಡಿಕೊಂಡರು.
ಏಕೆಂದರೆ ಅವರಿಗೆ ಧ್ವನಿ, ಬಲ ಇಲ್ಲ. ಜೈನ ಸಮುದಾಯ ಹೃದಯವಂತಿಕೆ ಮೆರೆಯಲು ಮತ್ತೊಂದು ಕಾರಣ ಎಂದರೆ ಭಯ. ಇದೇ ಪ್ರಬಲ ಸಮಾಜವಾಗಿದ್ದರೆ? ಕೋಲಾಹಲ, ದೊಂಬಿ, ಗಲಭೆಗಳೆಲ್ಲ ಸೃಷ್ಟಿಯಾಗುತ್ತವಲ್ಲ? ದುರ್ಬಲ ವರ್ಗದವರ ಮೇಲೆಯೇ ಈ ರೀತಿಯ ಹಲ್ಲೆಗಳು ಏಕೆ ನಡೆಯುತ್ತವೆ?
ಮಧ್ಯಪ್ರದೇಶದಲ್ಲಿ ಈಗ ಚುನಾವಣೆ ಹಿನ್ನೆಲೆಯಲ್ಲಿ ಸಿಎಂ ಶಿವರಾಜ್ ಚವ್ಹಾಣ ಆದಿವಾಸಿಯನ್ನು ಮನೆಗೆ ಕರೆದು ಪಾದಪೂಜೆಯನ್ನೇನೋ ಮಾಡಿದರು.
ಒಂದು ಜಿಲ್ಲೆಯಲ್ಲಿ ಆ ಸಮುದಾಯ ಪ್ರಬಲವಾಗಿರುವುದರಿಂದ ಮತಬ್ಯಾಂಕ್ ರಾಜಕಾರಣ ಕೂಡ ಇದರ ಹಿಂದಿದೆ.
ಜೈನಮುನಿ ಹತ್ಯೆಯಲ್ಲಿಯೂ ರಾಜಕಾರಣ ಸೇರಿಕೊಂಡಿದೆ. ಬದಲಾದ ಸರ್ಕಾರ ಮತ್ತು ಆರೋಪಿಗಳ ಜಾತಿ ಸಮುದಾಯ ಎಲ್ಲವೂ ಕೂಡ ಈ ರಾಜಕೀಯ ಸಿಕ್ಕುಗಳಲ್ಲಿ ಸೇರಿಕೊಂಡಿವೆ.
ಹಾಗಂತ ಮಲಹೊರಿಸುವ, ಉಗುಳುವ, ದಲಿತ ಬುಡಕಟ್ಟು ದುರ್ಬಲ ಸಮುದಾಯವನ್ನು ಅವಹೇಳನ ಮಾಡುವ ಘಟನೆಗಳು ಈ ಹಿಂದಿನಿಂದಲೂ ನಡೆಯುತ್ತಲೇ ಇವೆ. ಸಾಕಷ್ಟು ಆಯೋಗಗಳು, ಕಾನೂನು ಎಲ್ಲವೂ ಇದ್ದರೂ ಭಯಮುಕ್ತ ವಾತಾವರಣ ಮಾತ್ರ ದುರ್ಬಲರಲ್ಲಿ ಇಲ್ಲ.
ಇಷ್ಟೆಲ್ಲದರ ನಡುವೆ ಈಗ ಎದ್ದಿರುವ ಪ್ರಶ್ನೆ, ಮನುಷ್ಯ ಮನುಷ್ಯರನ್ನೇ ಗೌರವಿಸುವ ಅಥವಾ ಎಲ್ಲ ಸಮುದಾಯದವರೂ ಮನುಷ್ಯರೇ ಎನ್ನುವ ಪರಿಕಲ್ಪನೆಯೇ ಇನ್ನೂ ಇಲ್ಲದ ಈ ಸ್ಥಿತಿಯಲ್ಲಿ ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ಬಗ್ಗೆ ಈಗ ದೇಶಾದ್ಯಂತ ಚರ್ಚೆಯಾಗುತ್ತಿದೆ. ಮುಂದಿನ ಸಂಸತ್ ಅಧಿವೇಶನದಲ್ಲಿ ಇದು ಮಂಡನೆಯೂ ಆಗಲಿದೆ. ಇಂತಹ ಮಾನವೀಯತೆ ಇಲ್ಲದ, ಅಮಾನುಷ ಘಟನೆಗಳು ನಡೆಯುವ ದೇಶದಲ್ಲಿ ಏಕರೂಪ ನಾಗರಿಕ ಕಾನೂನು ಕುರಿತು ಚರ್ಚೆಯಾಗಲೇಬೇಕಿದೆ. ಯುಸಿಸಿಯಿಂದ ದುರ್ಬಲರನ್ನು ಮನುಷ್ಯರಂತೆ ಕಾಣಲಾಗುತ್ತದೆಯೇ? ಭಯ ನಿವಾರಿಸೀತೇ? ಸಮಾಜದಲ್ಲಿರುವ ಕಂದಕ ನಿವಾರಣೆಯಾದೀತೆ? ಈ ಸಾಧಕ ಬಾಧಕಗಳ ನಿರ್ಧಾರ ಆಗಲೇಬೇಕಿದೆ ಅಲ್ಲವೇ?