ರಾಜಕೀಯ ಕವಲುಗಳ ಕೂಡಿಕೆಯ ಯಜ್ಞ

0
10

ಕಾಲಚಕ್ರದ ಉರುಳಿನಲ್ಲಿ ಆಳುವ ಕೇಂದ್ರ ಸರ್ಕಾರದ ವಿರುದ್ಧ ಮಹಾಮೈತ್ರಿ ಏರ್ಪಡಿಸಿಕೊಳ್ಳುವ ನಿಟ್ಟಿನಲ್ಲಿ ನಡೆಯಲಿರುವ ದ್ವಿತೀಯ ಹಂತದ ಮಹಾಯಜ್ಞಕ್ಕೆ ಕರ್ನಾಟಕ ಸಾಕ್ಷಿ. ಈ ಬಾರಿಯ ಮಹಾಯಜ್ಞದಲ್ಲಿ ಸೂತ್ರಧಾರಿಗಳಂತೆ ಪಾತ್ರಧಾರಿಗಳು ಕೂಡಾ ಬೇರೆ. ಏಕೆಂದರೆ, ಭಾರತದ ರಾಜಕಾರಣದ ಭೂಪಟವೇ ಕಳೆದ ೧೦ ವರ್ಷಗಳಲ್ಲಿ ಬದಲಾಗಿರುವುದು ಇದಕ್ಕೆ ಕಾರಣ.
ಹತ್ತು ವರ್ಷಗಳ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪ್ರತಿಪಕ್ಷಗಳ ಮಹಾಮೈತ್ರಿಯ ಸ್ವರೂಪ ಬೇರೆ ಇತ್ತು. ಆಗ ಕಾಂಗ್ರೆಸ್‌ನ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರೆ ಸೋನಿಯಾಗಾಂಧಿಯವರು ಎಐಸಿಸಿ ಅಧ್ಯಕ್ಷರು. ಆದರೆ, ಈಗ ಬಿಜೆಪಿಯ ನರೇಂದ್ರ ಮೋದಿ ಪ್ರಧಾನಿಯಾಗಿದ್ದರೆ, ಜೆ.ಪಿ. ನಡ್ಡಾ ಬಿಜೆಪಿ ರಾಷ್ಟ್ರಾಧ್ಯಕ್ಷ. ಜೊತೆಗೆ ಚಾಣಕ್ಯನೆಂದೇ ಗುರುತಿಸಿಕೊಂಡಿರುವ ಗೃಹ ಸಚಿವ ಅಮಿತ್ ಶಾ ರೂಪಿಸಿರುವ ತಂತ್ರಾಂಶ. ಒಟ್ಟಾರೆ ಅದೇನೆ ಇರಲಿ. ಎರಡು ದಿನಗಳ ಕಾಲ ಸೋಮವಾರದಿಂದ ನಡೆಯಲಿರುವ ಮಹಾಮೈತ್ರಿಯಲ್ಲಿ ಬಿಜೆಪಿಯನ್ನು ಹೊರತುಪಡಿಸಿ ಅದರ ಪ್ರಮುಖ ವಿರೋಧಿಗಳು ಪಾಲ್ಗೊಳ್ಳುತ್ತಿರುವ ಈ ಮೇಳದಲ್ಲಿ ಹಿಮ್ಮೇಳವೆಂಬಂತೆ ದೆಹಲಿಯಲ್ಲಿ ಎನ್‌ಡಿಎ ಮೈತ್ರಿಕೂಟದ ವಿಸ್ತರಣೆಗೆ ಸಂಬಂಧಿಸಿದಂತೆ ಸಮಾನಾಂತರವಾಗಿ ಉಳಿದ ಪಕ್ಷಗಳ ಸಭೆಯೂ ನಡೆಯಲಿರುವುದು ಒಂದು ರೀತಿಯ ರಾಜಕೀಯ ಸಂಗ್ರಾಮದ ತಾಲೀಮು. ನಿಜ. ಇದೆಲ್ಲವೂ ಮುಂಬರುವ ಲೋಕಸಭಾ ಚುನಾವಣೆಗೆ ದಿಗ್ವಿಜಯ ಸಾಧಿಸುವ ನಿಟ್ಟಿನಲ್ಲಿ ಜರುಗುತ್ತಿರುವ ತಾಲೀಮು.
ಬೆಂಗಳೂರಿನಲ್ಲಿ ಇಂತಹ ರಾಷ್ಟ್ರೀಯ ಸ್ವರೂಪದ ಮೇಳ ನಡೆಯುತ್ತಿರುವುದ ಇದೇನು ಮೊದಲಲ್ಲ. ೧೯೬೯ರಲ್ಲಿ ಕಾಂಗ್ರೆಸ್ ಪಕ್ಷದ ವಿಭಜನೆಗೆ ಸಾಕ್ಷಿಯಾದ ಎಐಸಿಸಿ ಮಹಾಧಿವೇಶನ ನಡೆದದ್ದು ಬೆಂಗಳೂರಿನ ಗಾಜಿನ ಮನೆಯಲ್ಲಿ. ಇದಾದ ನಂತರ ಕಾಂಗ್ರೆಸ್‌ಗೆ ಪರ್ಯಾಯವಾಗಿ ರಾಷ್ಟ್ರಮಟ್ಟದಲ್ಲಿ ಮೈತ್ರಿಕೂಟವೊಂದನ್ನು ಕಟ್ಟಲು ೮೦ರ ದಶಕದಿಂದಲೂ ನಡೆದಿರುವ ಪ್ರಯತ್ನಗಳು ಅಷ್ಟಿಷ್ಟು ಫಲ ಕೊಟ್ಟಿದ್ದರೂ ನಿರ್ಣಾಯಕ ರೀತಿಯಲ್ಲಿ ಫಲ ಸಿಕ್ಕಿದ್ದು ೧೯೮೮ರಲ್ಲಿ ಸಂಸ್ಥಾಪನೆಯಾದ ಜನತಾದಳ ಎಂಬ ಹೊಸ ರಾಜಕೀಯ ಪಕ್ಷದ ಮೂಲಕ. ಐದು ಪಕ್ಷಗಳಲ್ಲದೆ ಹರಿದುಹಂಚಿ ಹೋಗಿದ್ದ ಜನತಾಪರಿವಾರದ ಉಳಿದ ಘಟಕಗಳು ಜನತಾ ದಳದ ಅಡಿಯಲ್ಲಿ ಸೇರಿದ ಕಾರಣ ಕಾಂಗ್ರೆಸ್ ಪಕ್ಷಕ್ಕೆ ಪ್ರಬಲ ಸವಾಲು ಒಡ್ಡಲು ಸಾಧ್ಯವಾಗಿ ೧೯೮೯ರ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ರಂಗ ಸರ್ಕಾರ ಮೊಟ್ಟ ಮೊದಲ ಬಾರಿಗೆ ವಿ.ಪಿ. ಸಿಂಗ್ ನೇತೃತ್ವದಲ್ಲಿ ಅಧಿಕಾರಕ್ಕೆ ಬರಲು ಕಾರಣವಾಯಿತು. ಅತ್ಯಂತ ಚೊಕ್ಕಟ ನಾಯಕ ಎಂಬ ಬಿರುದಾಂಕಿತರಾಗಿದ್ದ ಪ್ರಧಾನಿ ರಾಜೀವ್‌ಗಾಂಧಿ ನೇತೃತ್ವದ ಕಾಂಗ್ರೆಸ್ ಚುನಾವಣೆಯಲ್ಲಿ ಪರಾಭವಗೊಂಡ ನಂತರ ಅದನ್ನು ಸಮಸ್ಥಿತಿಗೆ ತರಲು ಭಗಿರಥ ಯತ್ನಗಳು ನಡೆದವು. ಇದೇ ಸಂದರ್ಭದಲ್ಲಿ ಇಡೀ ದೇಶಾದ್ಯಂತ ಪ್ರಾದೇಶಿಕ ಪಕ್ಷಗಳ ಬಲವರ್ಧನೆ ಆಯಾ ರಾಜ್ಯಗಳಲ್ಲಿ ಹೆಚ್ಚಾದ ನಂತರ ರಾಷ್ಟ್ರೀಯ ಪಕ್ಷಗಳು ಬಾಲಂಗೋಚಿಯಂತೆ ಕಾರ್ಯ ನಿರ್ವಹಿಸುವ ಪರಿಸ್ಥಿತಿಯ ತಲೆದೋರಲಾರಂಭಿಸಿತು. ತಮಿಳುನಾಡು, ಕೇರಳ, ಪಶ್ಚಿಮಬಂಗಾಳ ಹಾಗೂ ಕಾಶ್ಮೀರಕ್ಕೆ ಮಾತ್ರ ಸೀಮಿತವಾಗಿದ್ದ ಈ ಬೆಳವಣಿಗೆ ರಾಷ್ಟ್ರಮಟ್ಟದಲ್ಲಿ ವಿಸ್ತರಣೆಗೊಂಡು ರಾಷ್ಟ್ರೀಯ ಪಕ್ಷಗಳ ನೆಲೆಗಟ್ಟು ಸಂಕುಚಿತಗೊಳ್ಳಲು ಆರಂಭವಾದವು.
ಪಾಟ್ನಾದಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ನಡೆದ ಮೊದಲ ಮಹಾಮೈತ್ರಿಯ ಮೇಳದಲ್ಲಿ ನಿರ್ಣಾಯಕ ರೀತಿಯ ಫಲಿತಾಂಶಗಳು ಬರದಿದ್ದರೂ ಮಹಾಮೈತ್ರಿಯ ಸ್ಥಾಪನೆಯ ಅಗತ್ಯ ಮತ್ತು ಅನಿವಾರ್ಯತೆಗೆ ಸಹಮತ ಕಂಡುಬಂದದ್ದು ಒಂದು ರೀತಿಯಲ್ಲಿ ಮೊದಲನೆಯ ಗೆಲುವು. ಈ ಮೈತ್ರಿಕೂಟಕ್ಕೆ ನಾಯಕರಾರು ಎಂಬ ಪ್ರಶ್ನೆಗೆ ಈಗಲೇ ಉತ್ತರ ಸಿಕ್ಕುವುದು ಕಷ್ಟ. ರಾಷ್ಟ್ರವ್ಯಾಪಿ ಜನಮಾನ್ಯತೆ ಹೊಂದಿರುವ ರಾಹುಲ್ ಗಾಂಧಿಯವರ ನಾಯಕತ್ವದ ಬಗ್ಗೆ ಒಲವು ಅಲ್ಲಲ್ಲಿ ಕಂಡುಬರುತ್ತಿದ್ದರೂ ಮೇಳದಲ್ಲಿ ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಹಾಗೆ ನೋಡಿದರೆ ಇಂತಹ ನಿರ್ಧಾರ ಕೈಗೊಳ್ಳುವುದು ಕೂಡಾ ಕಷ್ಟವೇ. ನಾಯಕತ್ವಕ್ಕೆ ಕೈಹಾಕುವುದು ಎಂದರೆ ಜೇನುಗೂಡಿಗೆ ಕಲ್ಲೆಸದಂತೆ ಎಂಬ ಮಾತನ್ನು ನಿರಾಕರಿಸುವುದು ಕಷ್ಟವೇ. ಏಕೆಂದರೆ, ಈ ಮೇಳದಲ್ಲಿ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಬಿಹಾರದ ನಿತೀಶ್ ಕುಮಾರ್, ತಮಿಳುನಾಡಿನ ಸ್ಟಾಲಿನ್, ಆಮ್ ಆದ್ಮಿಯ ಕೇಜ್ರಿವಾಲ್, ಎನ್‌ಸಿಪಿಯ ಶರದ್ ಪವಾರ್, ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮೊದಲಾದ ಅತಿರಥ ಮಹಾರಥರು ಪಾಲ್ಗೊಳ್ಳುವುದು ನಿಶ್ಚಿತವಾಗಿರುವ ಕಾರಣ ಪ್ರತಿಯೊಂದು ನಡೆಯೂ ಪ್ರಾಮುಖ್ಯತೆ ಪಡೆದುಕೊಳ್ಳುವುದು ಖಂಡಿತ.
ಮಹಾಮೈತ್ರಿಯನ್ನು ರೂಪಿಸುವ ಉದ್ದೇಶ ಪ್ರಶ್ನಾತೀತವೇ. ಪರ್ಯಾಯ ಪಕ್ಷ ದೇಶದಲ್ಲಿ ಇಲ್ಲದೇ ಇದ್ದಾಗ ಅಧಿಕಾರರೂಢ ಪಕ್ಷ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುವ ಅಪಾಯಗಳು ಇದ್ದೇ ಇರುತ್ತವೆ. ಕೇವಲ ಸರ್ಕಾರ ಸ್ಥಾಪನೆ ಮಾಡುವುದಕ್ಕಷ್ಟೆ ಪರ್ಯಾಯ ಮೈತ್ರಿಯ ಹೊಣೆಗಾರಿಕೆ ಸೀಮಿತಗೊಳ್ಳುವುದಿಲ್ಲ. ಬಹು ಸಂಸ್ಕೃತಿಯ ಈ ನಾಡಿನಲ್ಲಿ ಎಲ್ಲರ ಬುದ್ಧಿ ಭಾವಗಳು ಪ್ರತಿಧ್ವನಿಗೊಳ್ಳುವ ಅಗತ್ಯವಂತೂ ಇದೆ. ಕೇವಲ ಒಂದು ಪಕ್ಷದಿಂದ ಇಂತಹ ಕಾರ್ಯ ಅಸಾಧ್ಯ. ಈ ನಿಟ್ಟಿನಲ್ಲಿ ಈ ಮಹಾಮೈತ್ರಿ ಸ್ಥಾಪನೆ ಸ್ವಾಗತಾರ್ಹ ಬೆಳವಣಿಗೆ.
ಮಹಾಮೈತ್ರಿಯ ಸ್ಥಾಪನೆಗೆ ಹೊರಟಾಗಲೆಲ್ಲ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಮುಖಂಡರು ಮೂಗು ಮುರಿಯುವುದು ಸ್ವಾಭಾವಿಕವೇ. ಇಂದಿರಾಗಾಂಧಿಯವರ ಕಾಲದಲ್ಲಿ ಬಿಜೆಪಿಯ ವಾಜಪೇಯಿ, ಆಡ್ವಾಣಿ, ಬಲರಾಜ್ ಮುಧೋಕ್, ಸಮಾಜವಾದಿ ಪಕ್ಷದ ಎನ್.ಜಿ. ಗೋರೆ, ಎಸ್.ಎಂ. ಜೋಶಿ, ಮಧುದಂಡವತೆ, ಜಾರ್ಜ್ ಫರ್ನಾಂಡಿಸ್, ಮಧು ಲಿಮೆಯೆ, ಕಮ್ಯುನಿಸ್ಟ್ ಬಣದ ಇ ಎಂ.ಎಸ್.ನಂಬೂದರಿ ಪಾಡ್, ಭೂಪೇಶ್ ಗುಪ್ತ, ಎಸ್.ಎ. ಡಾಂಗೆ, ರಾಜಶೇಖರ ರೆಡ್ಡಿ ಸೇರಿದಂತೆ ಪಶ್ಚಿಮ ಬಂಗಾಳದ ವಾಮ ಪಂಥೀಯ ಮುಖಂಡರು ಮುಂದಾದಾಗ ಆಗಿನ ಕಾಂಗ್ರೆಸ್ ಮುಖಂಡರಾದ ಶಿವಶಂಕರ್, ಎಸ್.ಎಸ್. ರೇ ಮೊದಲಾದವರು ಕೈಲಾಗದವರು ಮೈ ಪರಚಿಕೊಂಡಂತೆ ಎಂದು ಬಹಿರಂಗವಾಗಿಯೇ ಟೀಕಿಸಿದ್ದರು. ೧೯೮೮ರಲ್ಲಿ ರಾಷ್ಟ್ರೀಯ ರಂಗದ ಸಂಸ್ಥಾಪನೆಗೆ ಮದರಾಸಿನಲ್ಲಿ (ಚೆನೈ) ನಡೆದ ಪ್ರತಿಪಕ್ಷಗಳ ಮುಖಂಡರ ಮೇಳಕ್ಕೆ ಕಾಂಗ್ರೆಸ್ ಪಕ್ಷದ ವಾಚಾಳಿ ನಾಯಕ ಮಣಿಶಂಕರ್ ಅಯ್ಯರ್ `ಇದು ರಾಷ್ಟ್ರೀಯ ರಂಗವಲ್ಲ. ಇದೊಂದು ರಾಷ್ಟ್ರೀಯ ಮುಖಭಂಗ’ ಎಂದು ಹಂಗಿಸಿದ್ದರು. ಆದರೂ ಆಗಿನ ಮಹಾಮೈತ್ರಿ ಸ್ಥಾಪನೆಗೊಂಡು ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಗಿದ್ದು ಇನ್ನೊಂದು ಕಥೆ.
ಬದಲಾಗಿರುವ ರಾಜಕೀಯ ಸನ್ನಿವೇಶದಲ್ಲಿ ಕಳೆದ ಚುನಾವಣೆಗೆ ಹೋಲಿಸಿದರೆ ಎನ್‌ಡಿಎ ಮೈತ್ರಿಕೂಟವೂ ಮೊದಲಿನಷ್ಟು ಪ್ರಬಲವಾಗಿಲ್ಲ. ಪ್ರತಿಪಕ್ಷಗಳು ಒಂದಾಗದಿದ್ದರೂ ಒಂದು ರೀತಿಯಲ್ಲಿ ಅಭಿಪ್ರಾಯ ಮಂಡನೆಯ ಮಟ್ಟಿಗೆ ಮೇಲುಗೈ ಸಾಧಿಸಿ ತಮ್ಮ ಪ್ರಾಬಲ್ಯವನ್ನು ತೋರಿಸಿಕೊಂಡಿರುವುದು ಕೆಲವರ ದೃಷ್ಟಿಯಲ್ಲಿ ಒಂದು ದಿಕ್ಸೂಚಿ. ಏನೇ ಆದರೂ ಎನ್‌ಡಿಎಗೆ ವರ್ಚಸ್ವಿ ನಾಯಕ ನರೇಂದ್ರ ಮೋದಿ ಅವರಿದ್ದಾರೆ. ಇದೇ ಸ್ವರೂಪದ ನಾಯಕ ಪರ್ಯಾಯ ಮೈತ್ರಿ ಕೂಟದಲ್ಲಿ ರೂಪುಗೊಂಡರೆ ಆಗ ಎರಡು ಸಂಘಟನೆಗಳ ನಡುವೆ ಸಮಾನ ಹೋರಾಟ ಸಾಧ್ಯ. ಇದರ ಜೊತೆಗೆ ಕಾರ್ಯಕ್ರಮ ಆಧಾರಿತವಾಗಿ ಪರ್ಯಾಯ ಮೈತ್ರಿಕೂಟ ಜನ ಒಪ್ಪುವ ದೇಶಕ್ಕೆ ಅಗತ್ಯವಿರುವ ಯೋಜನೆಗಳನ್ನು ರೂಪಿಸಿ ಪ್ರಣಾಳಿಕೆಯ ಮೂಲಕ ಜನರಿಗೆ ಮನದಟ್ಟು ಮಾಡಿ ಅಭಿಪ್ರಾಯ ರೂಪಿಸಿ ಸಾರ್ವಜನಿಕ ಸಂವಾದಕ್ಕೆ ಇಂಬು ಕೊಟ್ಟರೆ ಆಗ ನಿಜವಾಗಲೂ ಖಡಾಖಡಿ ಹೋರಾಟ ನಿಶ್ಚಿತ. ರಾಜಕೀಯ ಕವಲುಗಳನ್ನು ಕಸಿ ಮಾಡಿ ಕೂಡಿಸುವುದು ಸುಲಭವಲ್ಲ. ಏಕೆಂದರೆ, ಇದಕ್ಕೆ ಔಷಧೋಪಚಾರ ಹಾಗೂ ಶುಶ್ರೂಷೆ ಜೊತೆಗೆ ಒಮ್ಮತ ಅತ್ಯಗತ್ಯ. ಈಗಿನ ಮಟ್ಟಿಗೆ ಹೇಳುವುದಾದರೆ ಉದ್ದೇಶಿತ ಮೈತ್ರಿಕೂಟಕ್ಕೆ ಅಗತ್ಯವಿರುವುದು ಬಹುಮತಕ್ಕೆ ಬದಲು ಪ್ರಶ್ನಾತೀತ ಒಮ್ಮತ.

Previous articleತಾನು ಉಣ್ಣದ ಪರರಿಗಿಕ್ಕದ ಧನವಿದ್ದೇತಕೆ?
Next articleನಮ್ಮ ಪಕ್ಷಕ್ಕೆ ಆಹ್ವಾನ ಕೊಟ್ಟರೂ ಕೊಡದಿದ್ದರೂ ತಲೆಕೆಡಿಸಿಕೊಳ್ಳಲ್ಲ