ಯಾವಾಗಲೂ ರೈತರ ಪರ ಧ್ವನಿ ಎತ್ತಲು ಸಿದ್ಧ

0
37

ಹಾವೇರಿ: ನಾನು ಅಧಿಕಾರಲ್ಲಿ ಇರಲಿ ಇಲ್ಲದಿರಲಿ ರೈತರ ಪರವಾಗಿ ನಿರಂತರ ಧ್ವನಿ ಎತ್ತುವ ಕೆಲಸವನ್ನು ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು ಹಾವೇರಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಅಹವಾಲು ಸ್ವೀಕರಿಸಿ ಮಾತನಾಡಿದರು. ರಾಜ್ಯದಲ್ಲಿ ರೈತರ ಜ್ವಲಂತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ಹಾವೇರಿ ಜಿಲ್ಲಾ ರೈತರು ಮಾಡುತ್ತಿರುವುದು ಅಭಿನಂದನೀಯ ಎಂದರು.
ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡುವ ವಿಚಾರದಲ್ಲಿ ಪ್ರಾಥಮಿಕ ಹಂತದಲ್ಲಿಯೇ ಬೆಳೆ ಸಮೀಕ್ಷೆ ಮಾಡಿ ಪರಿಹಾರ ನೀಡಬೇಕೆಂದು ಹೊಸ ಆದೇಶ ಬಂದಿದೆ. ಬೆಳೆ ಹಾನಿಯ ಶೇ 25% ರಷ್ಟು ಪರಿಹಾರವನ್ನು ತಕ್ಷವೇ ನೀಡುವಂತೆ ನವೆಂಬರ್ ತಿಂಗಳಲ್ಲಿ ಆದೇಶ ಆಗಿದೆ. ಈ ಕುರಿತು ಕೂಡಲೇ ಕೇಂದ್ರದ ಸಚಿವರು ಮತ್ತು ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ, ಏನೆಲ್ಲಾ ಬದಲಾವಣೆ ಮಾಡಬೇಕು ಎನ್ನುವ ಕುರಿತು ಚರ್ಚೆ ಮಾಡುತ್ತೇನೆ. ಅಲ್ಲದೇ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯ ಮಾಡುತ್ತೇನೆ ಎಂದರು.
ಅದಕ್ಕೂ ಮೊದಲು ರಾಜ್ಯದ ಸರ್ಕಾರದ ವ್ಯಾಪ್ತಿಯಲ್ಲಿ ಸ್ಟೇಟ್ ಹೈಲೆವೆಲ್ ಕಮಿಟಿ ಇರುತ್ತದೆ. ಆ ಕಮಿಟಿಯಲ್ಲಿ ವಿಮೆಯ ಕುರಿತು ಅನುಮೋದನೆ ನೀಡಬೇಕಾಗುತ್ತದೆ. ಅದಕ್ಕಾಗಿ ರಾಜ್ಯ ಸರ್ಕಾರದ ಕೃಷಿ ಸಚಿವರು, ಕೃಷಿ ಇಲಾಖೆಯ ಆಯುಕ್ತರು ಮತ್ತು ಕಾರ್ಯದರ್ಶಿಗಳ ಜೊತೆ ಮಾತನಾಡಿ, ಕೂಡಲೇ ಸ್ಟೇಟ್ ಲೆವೆಲ್ ಹೈಪವರ್ ಕಮಿಟಿಯಲ್ಲಿ ಅನುಮೋದನೆ ನೀಡಿ ಕೇಂದ್ರ ಸರ್ಕಾರಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ, ಏನು ಬದಲಾವಣೆ ಆಗಬೇಕು ಆ ಬದಲಾವಣೆಯನ್ನು ಮಾಡಿಸುವ ಪ್ರಯತ್ನ ಮಾಡುತ್ತೇನೆ. ಬೆಳೆ ವಿಮೆ ಪರಿಹಾರದ ಕುರಿತು ಶೇ. 90ರಷ್ಟು ಅರ್ಜಿಗಳು ಹಾವೇರಿ ಜಿಲ್ಲೆಯಿಂದ ಬಂದಿವೆ. ರೈತರು ಕೇಂದ್ರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ಎಲ್ಲ ಮಾಹಿತಿ ಹೊಂದಿರುವುದು ಒಳ್ಳೆಯ ಬೆಳವಣಿಗೆ ಕೇಂದ್ರದ ಎಲ್ಲ ಯೋಜನೆಗಳ ಲಾಭ ರೈತರಿಗೆ ತಲುಪುವಂತೆ ಮಾಡಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತೇನೆ ಎಂದರು.
ಅದೇ ರೀತಿ ಸುಂಟಿ ಬೆಳೆ ಹಾನಿಗೆ ಪರಿಹಾರ ನೀಡುವ ಕುರಿತು ರಾಜ್ಯ ಸರ್ಕಾರದ ಅನುಮೋದನೆ ಪಡೆದು 2015-16ರಲ್ಲಿ‌ ಕೇಂದ್ರ ಸರ್ಕಾರ ಯಾವ ರೀತಿ ಪರಿಹಾರ ನೀಡಿತ್ತೊ ಅದೇ ರೀತಿ ಈ ಬಾರಿಯೂ ಪರಿಹಾರ ನೀಡುವಂತೆ‌‌ ಕೇಂದ್ರ ಸರ್ಕಾರದ ಮೇಲೆ ಹೇರುವುದಾಗಿ ತಿಳಿಸಿದರು.
ರೈತರ ಪಂಪ್‌ಸೆಟ್‌ಗಳಿಗೆ ನಿಗದಿತ ಅವಧಿಯಲ್ಲಿ ವಿದ್ಯುತ್ ಪೂರೈಕೆ ಮಾಡಲು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲು ಇಂಧನ ಸಚಿವರನ್ನು ಭೇಟಿ ಮಾಡಿ ಒತ್ತಡ ಹೇರಲಾಗುವುದು ಎಂದು ಹೇಳಿದರು. ಇದೇ ವೇಳೆ, ಬೆಡ್ತಿ ಹಾಗೂ ವರದಾ ನದಿ ನೀರಿನ ಸಮಸ್ಯೆ ಕುರಿತು ಚರ್ಚಿಸುವುದಾಗಿ ತಿಳಿಸಿದರು.

Previous articleಹೆಸ್ಕಾಂ ವಿರುದ್ಧ ರೈತನ ಆಕ್ರೋಶ: ಹು-ಧಾ ಮಹಾನಗರ ಸಂಚಾರ ಸಂಕಟ
Next articleಕನ್ನಡಿಗರ ಮೇಲೆ ಪುಂಡಾಟಿಕೆ ಮಾಡುವವರನ್ನು ಗಡಿಪಾರು ಮಾಡಿ