ದಾವಣಗೆರೆ: ತಾಲೂಕಿನ ಕುರ್ಕಿ ಗ್ರಾಮದ ಬಳಿಯ ಭದ್ರಾ ಕಾಲುವೆಯಲ್ಲಿ ಮುಳುಗುತ್ತಿದ್ದ ಯುವಕನ ರಕ್ಷಣೆಗೆ ಹೋದ ಇಬ್ಬರು ನೀರು ಪಾಲಾದ ಘಟನೆ ಶುಕ್ರವಾರ ನಡೆದಿದೆ.
ಆಂಧ್ರಪ್ರದೇಶ ಅನಂತಪುರದ ಕೆ.ರಾಮಕೃಷ್ಣ (೩೪), ಹಿಮೇಶ್ (೨೦) ನೀರು ಪಾಲಾದವರು. ಕೆ. ರಾಮಕೃಷ್ಣ ಮತ್ತು ಹಿಮೇಶ್, ಕುರ್ಕಿ ಗ್ರಾಮದ ಬಳಿ ಹರಿಯುತ್ತಿರುವ ಭದ್ರಾ ಕಾಲುವೆಗೆ ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ಈಜಲು ಹೋಗಿದ್ದಾರೆ. ಈ ವೇಳೆ ಯುವಕನೊಬ್ಬ ಕಾಲುವೆಗೆ ಜಿಗಿದಿದ್ದು, ಈಜು ಬಾರದೆ ಮುಳುಗುತ್ತಿದ್ದ ಯುವಕನ ರಕ್ಷಣೆಗೆ ಇಬ್ಬರು ಹೋಗಿ ಈ ಅವಘಡ ನಡೆದಿದೆ ಎಂದು ಹೇಳಲಾಗಿದೆ.
ಹಿಮೇಶ್ ಎಂಬ ಯುವಕನ ಶವ ಪತ್ತೆಯಾಗಿದ್ದು, ಕೆ.ರಾಮಕೃಷ್ಣ ಅವರ ಶವ ಪತ್ತೆಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಹದಡಿ ಪೊಲೀಸ್ ಠಾಣೆ ಪೊಲೀಸರು ಶೋಧ ನಡೆಸಿದ್ದಾರೆ. ಆರ್.ಆರ್. ನವೀನ್‌ಕುಮಾರ್ ಪತ್ನಿ ತವರಾದ ದಾವಣಗೆರೆ ತಾಲೂಕಿನ ಹದಡಿ ಗ್ರಾಮದ ಸಂಬಂಧಿಕರ ಮನೆಗೆ ಬಂದಿದ್ದರು. ಹಿಮೇಶ್ ನವೀನ್‌ಕುಮಾರ್ ಪುತ್ರನಾಗಿದ್ದು, ಕೆ.ರಾಮಕೃಷ್ಣ ಹಿಮೇಶ್ ತಾಯಿಯ ಸಹೋದರನಾಗಿದ್ದಾರೆ. ಈ ಕುರಿತು ಆರ್.ಆರ್. ನವೀನ್‌ಕುಮಾರ್ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.