ಮುಖ್ಯಮಂತ್ರಿಯಾಗಿದ್ದಾಗ ಭ್ರಷ್ಟಾಚಾರ ಮಾಡಿಲ್ಲ ಎಂದು ಆಣೆ ಮಾಡಲಿ

0
21

ಮಂಡ್ಯ: ಜಾತ್ಯತೀತ ಜನತಾದಳದ ಶಾಸಕಾಂಗ ನಾಯಕ ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ 14 ತಿಂಗಳ ಆಡಳಿತದ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರ ಮಾಡಿಲ್ಲ ಎಂದು ಆಣೆ ಮಾಡುವುದಾದರೆ ಎಲ್ಲಿಗಾದರೂ ಬರಲಿ ನಾವು ಬರಲು ಸಿದ್ದ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿ ಸವಾಲು ಹಾಕಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು 2018 ರಲ್ಲಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ವರ್ಗಾವಣೆ ಸೇರಿ ಆಡಳಿತದಲ್ಲಿ ಭ್ರಷ್ಟಾಚಾರ ಮಾಡಿಲ್ಲ ಎಂಬ ಬಗ್ಗೆ ಆಣೆ ಮಾಡುವುದಾದರೆ ಧರ್ಮಸ್ಥಳ ಸೇರಿದಂತೆ ಯಾವುದೇ ದೇವಾಲಯಕ್ಕೆ ಬಂದು ಪ್ರಮಾಣ ಮಾಡಲು ನಾವು ಸಿದ್ಧರಿದ್ದೇವೆ, ಅವರು ಬರುತ್ತಾರಾ ಎಂದು ಪ್ರಶ್ನಿಸಿದರು.
ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಬಗ್ಗೆ ಭ್ರಷ್ಟಾಚಾರದ ಆಪಾದನೆ ಮಾಡಿ ಆಣೆ ಪ್ರಮಾಣಕ್ಕೆ ಕೂಗುತ್ತಾರೆ, ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿನ ಬಗ್ಗೆ ಹಳೆಯದೆಲ್ಲ ಬೇಡ ಎನ್ನುತ್ತಾರೆ, ಅದನ್ನೆಲ್ಲ ಬಿಟ್ಟುಬಿಡುತ್ತೇವೆ 14 ತಿಂಗಳ ಆಡಳಿತ ಅವಧಿ ಬಗ್ಗೆ ಪ್ರಮಾಣ ಮಾಡಲಿ ಎಂದರು.
ಮುಖ್ಯಮಂತ್ರಿ ಅಧಿಕಾರ ಹಂಚಿಕೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡಲಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಸರ್ಕಾರ ಸಮರ್ಥವಾಗಿ ಆಡಳಿತ ನಡೆಸುತ್ತಿದೆ, ಕಾಂಗ್ರೆಸ್ ಪಕ್ಷದಲ್ಲಿ 50 ಮಂದಿ ಮುಖ್ಯಮಂತ್ರಿ ಆಗುವ ಅರ್ಹತೆ ಹೊಂದಿದ್ದಾರೆ,ಎಲ್ಲವನ್ನು ಪಕ್ಷದ ವರಿಷ್ಠರು ತೀರ್ಮಾನಿಸಲಿದ್ದಾರೆ ಎಂದರು.
ರಾಜ್ಯದಲ್ಲಿನ ಬರಗಾಲ ಪರಿಸ್ಥಿತಿ ನಿವಾರಣೆಗೆ ಅನುದಾನ ಕೋರಿದ್ದೇವೆ, ಎರಡು ಮೂರು ದಿನ ಕಾಯೋಣ, ಕೇಂದ್ರ ಸ್ಪಂದಿಸಲಿದೆ ಎಂಬ ನಂಬಿಕೆ ಇದೆ, ಈ ಬಗ್ಗೆ ಅನುಮಾನ ಬೇಡ ಎಂದು ತಿಳಿಸಿದರು.
ಆಪರೇಷನ್ ಹಸ್ತದ ಅವಶ್ಯಕತೆ ನಮಗೆ ಇಲ್ಲ, ಬಿಜೆಪಿ – ಜಾದಳ ಮೈತ್ರಿ ಮಾಡಿಕೊಂಡಿವೆ,ಈ ಬಗ್ಗೆ ಆ ಪಕ್ಷಗಳ ನಾಯಕರು,ಶಾಸಕರಿಗೆ ಒಪ್ಪಿಗೆ ಇಲ್ಲ, ಇತ್ತು ಹೊಂದಾಣಿಕೆ ಆಗಿಲ್ಲ, ಗೊಂದಲದ ಪರಿಸ್ಥಿತಿ ಇದೆ ಹಾಗಾಗಿ ಆಪರೇಷನ್ ಕಮಲದ ಗುಮ್ಮ ಬಿಡುತ್ತಿದ್ದಾರೆ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಬಗ್ಗೆ ಮತದಾರರ ಒಲವು ಇದ್ದು, ಅದನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನ ಇದಾಗಿದೆ ಎಂದರು.
ಚುನಾವಣೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳಿಗೆ ರಾಜಕೀಯ ಚರ್ಚೆ ಬೇಕಾಗಿದೆ, ರಾಜ್ಯ ಸರ್ಕಾರ ನಾಲ್ಕುವರೆ ತಿಂಗಳಲ್ಲಿ ಅಭಿವೃದ್ಧಿ ಕೆಲಸದ ಜೊತೆಗೆ ಅನುದಾನವನ್ನು ಬಿಡುಗಡೆ ಮಾಡಿದೆ, ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಿದೆ.ಕಾವೇರಿ ಸಮಸ್ಯೆಯನ್ನು ಸೂಕ್ಷ್ಮವಾಗಿ ಪರಿಗಣಿಸಿದೆ. ಎಲ್ಲವೂ ಅಚ್ಚುಕಟ್ಟಾಗಿ ನಡೆಯುತ್ತಿದ್ದು, ಇದನ್ನು ಸಹಿಸಲು ಪ್ರತಿಪಕ್ಷಗಳಿಗೆ ಆಗುತ್ತಿಲ್ಲ ಹಾಗಾಗಿ ಇಲ್ಲಸಲ್ಲದ ರಾಜಕಾರಣಕ್ಕೆ ಮುಂದಾಗಿದ್ದಾರೆ ಎಂದರು.

Previous articleನ್ಯಾಯಾಲಯ ಮತ್ತು ಸರ್ಕಾರ ವಂಚಿಸಿದ ನಾಲ್ವರು ಭೂಪರ ವಿರುದ್ಧ ಎಫ್ಐಆರ್
Next articleಪ್ರತಿಯೊಬ್ಬರ ನಡೆ ಕೂಡ ನಮಗೆ ಗೊತ್ತಿದೆ