ಸಂಭಾಲಾ: ಶಾಹಿ ಜಾಮಾ ಮಸೀದಿಯಲ್ಲಿ ಸಮೀಕ್ಷೆಯ ವೇಳೆ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಘರ್ಷಣೆ ಏರ್ಪಟ್ಟ ಪರಿಣಾಮ ಮೂವರು ಮೃತಪಟ್ಟಿದ್ದಾರೆ. ಮೃತರನ್ನು ನಯೀಮ್ ಖಾನ್, ಬಿಲಾಲ್ ಮತ್ತು ನೋಮನ್ ಎಂದು ಗುರುತಿಸಲಾಗಿದ್ದು, ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವಿನ ಘರ್ಷಣೆಯ ವೇಳೆ ಸಾವಿಗೀಡಾಗಿದ್ದಾರೆ. ಮಸೀದಿಯ ಸಮೀಕ್ಷೆ ಕಾರಣ ಭಾನುವಾರ ಬೆಳಗ್ಗೆ ೭.೩೦ರ ಹೊತ್ತಿಗೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಮತ್ತು ಐದು ಠಾಣೆಗಳ ಪೊಲೀಸರು ಭದ್ರತೆಗಾಗಿ ಸ್ಥಳದಲ್ಲಿದ್ದರು. ಆದರೆ ಏಕಾಏಕಿ ಬಂದ ಜನರ ಗುಂಪು ಪೊಲೀಸರೊಂದಿಗೆ ವಾಗ್ವಾದ ಮಾಡಿ ಕಲ್ಲು ತೂರಾಟ ನಡೆಸಿದೆ. ಮಸೀದಿ ಇದ್ದ ಜಾಗದಲ್ಲಿ ಹಿಂದೂ ದೇವಾಲಯವಿತ್ತು. ಅದನ್ನು ಕಡೆವಿ ಮಸೀದಿ ಕಟ್ಟಲಾಗಿದೆ ಎಂದು ಆರೋಪಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು.