ಮಸೀದಿಗಳ ಸರ್ವೇಗೆ ಸುಪ್ರೀಂಕೋರ್ಟ್‌ ಬ್ರೇಕ್!

0
10

ನವದೆಹಲಿ: ಧಾರ್ಮಿಕ ಸ್ಥಳಗಳು, ಅದರಲ್ಲೂ ಮಸೀದಿ ಮತ್ತು ದರ್ಗಾಗಳನ್ನು ತಮ್ಮ ಸುಪರ್ದಿಗೆ ಕೊಡಬೇಕೆಂದು ಸಲ್ಲಿಕೆ ಯಾಗಿರುವ ಅರ್ಜಿಗಳ ಕುರಿತು ಮಧ್ಯಂತರ ಅಥವಾ ಅಂತಿಮ ಆದೇಶಗಳನ್ನು ಹೊರಡಿಸದಂತೆ ದೇಶದ ನ್ಯಾಯಾಲಯಗಳಿಗೆ ಸುಪ್ರೀಂ ಕೋರ್ಟ್ ಗುರುವಾರ ನಿರ್ಬಂಧ ಹೇರಿದೆ. ಮುಂದಿನ ನಿರ್ದೇಶನದವರೆಗೆ ಕಾಯು ವಂತೆ ಕೆಳ ನ್ಯಾಯಾಲಯಗಳಿಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಹಾಗೂ ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ಪೀಠ, `ಧಾರ್ಮಿಕ ಸ್ಥಳಗಳ ಕುರಿತ ವಿಷಯವು ವಿಚಾರಣೆಯಲ್ಲಿರುವುದರಿಂದ ನಾವು ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕಿದೆ. ಆದ್ದರಿಂದ ಮುಂದಿನ ಆದೇಶದವರೆಗೂ ಯಾವುದೇ ಹೊಸ ಪ್ರಕರಣಗಳ ವಿಚಾರಣೆ ಮತ್ತು ಆದೇಶ ನೀಡಬಾರದು’ ಎಂದು ಹೇಳಿದೆ.
ವಾರಾಣಸಿಯ ಜ್ಞಾನವಾಪಿ, ಮಥುರಾದ ಶಾಹಿ ಈದ್ಗಾ ಮಸೀದಿ, ಸಂಭಲ್‌ನ ಶಾಹಿ ಜಾಮಾ ಮಸೀದಿ ಸೇರಿದಂತೆ ೧೦ ಮಸೀದಿಗಳ ಮೂಲ ಧಾರ್ಮಿಕ ಸ್ವರೂಪವನ್ನು ಪರಿಶೀಲಿ ಸುವಂತೆ ವಿವಿಧ ಹಿಂದೂ ಅರ್ಜಿದಾರರು ಸಲ್ಲಿಸಿರುವ ಸುಮಾರು ೧೮ ಮೊಕದ್ದಮೆಗಳ ವಿಚಾರಣೆಯನ್ನು ಸುಪ್ರೀಂ ಪೀಠ ನಿರ್ಬಂಧಿಸಿದೆ.
ಸದ್ಯ ೧೯೯೧ರ ಪೂಜಾ ಸ್ಥಳಗಳ ಕಾಯ್ದೆಯ ವಿವಿಧ ಅಂಶ ಗಳನ್ನು ಪ್ರಶ್ನಿಸಿ ವಕೀಲ ಅಶ್ವಿನಿ ಉಪಾಧ್ಯಾಯ್ ಸೇರಿದಂತೆ ೬ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ಈ ಮಧ್ಯೆ, ೧೯೯೧ರ ಕಾನೂನಿನ ಮಾನ್ಯತೆ ಮತ್ತು ವ್ಯಾಪ್ತಿಯನ್ನು ಪರಿಶೀಲನೆ ಮಾಡುವುದಾಗಿ ಪೀಠ ಸ್ಪಷ್ಟಪಡಿಸಿದೆ.

ಏನೇನು ಸೂಚನೆ?
ಈಗ ಕೋರ್ಟ್‌ಗಳಲ್ಲಿ ಧಾರ್ಮಿಕ ಸ್ಥಳಗಳ ಕುರಿತು ವಿಚಾರಣೆ ನಡೆಯುತ್ತಿರುವ ಪ್ರಕರಣಗಳಲ್ಲಿ ಯಾವುದೇ ಮಧ್ಯಂತರ ಅಥವಾ ಅಂತಿಮ ಆದೇಶ ನೀಡುವಂತಿಲ್ಲ.
ಧಾರ್ಮಿಕ ಸ್ಥಳಗಳ ಸಮೀಕ್ಷೆ ಸೇರಿ ಇನ್ನಿತರ ಆದೇಶ ಕೋರಿ ಹೊಸದಾಗಿ ಸಲ್ಲಿಕೆಯಾಗುವ ದಾವೆಗಳನ್ನು ರಿಜಿಸ್ಟರ್ ಮಾಡಿಕೊಳ್ಳುವಂತಿಲ್ಲ.

ವಿವಾದಕ್ಕೊಳಗಾಗಿರುವ ದೇಶದ ಮಸೀದಿಗಳು
೧. ಕಾಶಿಯ ಜ್ಞಾನವಾಪಿ ಮಸೀದಿ
೨. ಮಥುರಾ ಶಾಹಿ ಈದ್ಗಾ
೩. ಸಂಭಲ್‌ನ ಜಾಮಾ ಮಸೀದಿ

Previous articleವಿಶ್ವನಾಥನ್ ಆನಂದ್ ಬಳಿಕ ಅತ್ಯುಚ್ಚ ಸ್ಥಾನ ಅಲಂಕರಿಸಿದ ಶಿಷ್ಯ
Next articleಏಕ ಚುನಾವಣೆ ಮಸೂದೆಗೆ ಕೇಂದ್ರ ಸಂಪುಟ ಅಸ್ತು