ಮರಕ್ಕೆ ಕಟ್ಟಿಹಾಕಿ ಮಹಿಳೆಗೆ ಥಳಿತ: ನಾಲ್ವರ ವಿರುದ್ಧ ಪ್ರಕರಣ

0
26

ಗ್ರಾಮದಲ್ಲಿ ನೂರಾರು ಸಂಖ್ಯೆಯಲ್ಲಿ ಜನ ಸೇರಿದ್ದರೂ ಅವಳ ರಕ್ಷಣೆಗೆ ಯಾರು ಮುಂದಾಗಿರಲಿಲ್ಲ

ರಾಯಚೂರು: ವ್ಯಕ್ತಿ ಸಾವು ಪ್ರಕರಣದ ಹಿನ್ನೆಲೆಯಲ್ಲಿ ಅನುಮಾನದ ಮೇಲೆ ಸಾರ್ವಜನಿಕವಾಗಿ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿರುವ ಘಟನೆ ನಡೆದಿದೆ.
ದೇವದುರ್ಗ ತಾಲೂಕಿನ ಜಾಲಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ, ದುರುಗಪ್ಪ ಎಂಬಾತನ ಸಾವಿಗೆ ಆತನ ಪರಿಚಯಸ್ಥ ಮಹಿಳೆಯೇ ಕಾರಣ ಎಂದು ಆರೋಪಿಸಿ ಆಕೆಯನ್ನು ಮರಕ್ಕೆ ಕಟ್ಟಿ ಥಳಿಸಲಾಗಿದೆ. ಜನವರಿ 27ರಂದು ಸಂಜೆ ವೇಳೆಗೆ ಘಟನೆ ಜರುಗಿದೆ. ಈ ಬಗ್ಗೆ ಮಹಿಳೆಯು ನಾಲ್ವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಬಸವರಾಜ ನಾಯಕ, ಯಂಕಮ್ಮ, ದುರ್ಗಮ್ಮ, ರೇಣುಕಾ ಎಂಬವರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕಳೆದ ಡಿಸೆಂಬರ್​ನಲ್ಲಿ ದುರುಗಪ್ಪ ಮೃತಪಟ್ಟಿದ್ದ. ಮೃತನ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ದುರುಗಪ್ಪಗೆ ಪರಿಚಯವಿದ್ದ ಮಹಿಳೆಯ ಜೊತೆ ತೆರಳಿದ್ದಾಗ ಮೃತಪಟ್ಟಿರುವ ಅನುಮಾನದ ಮೇಲೆ ಆಕೆಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಲಾಗಿದೆ. ನೂರಾರು ಜನರೆದುರು ಮನಬಂದಂತೆ ನಿಂದಿಸಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಮಹಿಳೆಯನ್ನು ರಕ್ಷಿಸಿದ್ದಾರೆ. ಹಲ್ಲೆ ನಡೆಸಿದ ನಾಲ್ವರ ವಿರುದ್ದ ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸೋಮವಾರ ಸಂಜೆ ಕೃತ್ಯ ನಡೆದರೂ ಗ್ರಾಮಸ್ಥರು ತುಟಿ ಬಿಚ್ಚಿರಲಿಲ್ಲ. ಮಹಿಳೆಯ ಮೇಲೆ ಹಲ್ಲೆ ನಡೆಸಿದ ಹಾಗೂ ಪೊಲೀಸರು ಜನರನ್ನು ಚದುರಿಸಿ ಮಹಿಳೆಗೆ ರಕ್ಷಣೆ ನೀಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Previous articleಬಳ್ಳಾರಿ ವೈದ್ಯ ಅಪಹರಣ ಪ್ರಕರಣ: ಏಳು ಆರೋಪಿಗಳ ಬಂಧನ, ಓರ್ವನಿಗೆ ಗುಂಡೇಟು
Next articleಒಂದು ದೇಶ ಒಂದು ಚುನಾವಣೆ: ಭಾರತಕ್ಕೆ ಗೇಮ್ ಚೇಂಜರ್ ಆಗಲಿದೆ