ವಾಸುದೇವ ಉಡಳ್ಳಿ
ಕಾರವಾರ: ಮತ್ಸ್ಯೋದ್ಯಮ ಆಧುನೀಕರಣಗೊಳಿಸಲು ಸರ್ಕಾರ ಹಲವು ಯೋಜನೆಗಳನ್ನು ಜಾರಿ ಮಾಡುತ್ತಿದೆ. ಅದರಂತೆ ಮತ್ಸ್ಯಸಂಪದ ಯೋಜನೆಯಡಿ ಆಳ ಸಮುದ್ರ ಮೀನುಗಾರಿಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಬೋಟ್ ಖರೀದಿಗೆ ಸಬ್ಸಿಡಿ ನೀಡಿತ್ತಾದರೂ ರಾಜ್ಯ ಕರಾವಳಿಗೆ ಹೊಂದುವ ಬೋಟ್ ನೀಡದ ಕಾರಣ ಯೋಜನೆ ಅನುಷ್ಠಾನಕ್ಕೆ ಹಿನ್ನಡೆಯಾದಂತಾಗಿದೆ.
ಹೌದು, ಕೇಂದ್ರ ಸರ್ಕಾರ ಮತ್ಸ್ಯಸಂಪದ ಯೋಜನೆಗೆ ಕಳೆದ ಬಾರಿ ನೀಡಿದ್ದ ಸಾವಿರಾರು ಕೋಟಿ ಅನುದಾನ ಬಳಸಿ ರಾಜ್ಯ ಸರ್ಕಾರ ಆಳ ಸಮುದ್ರ ಮೀನುಗಾರಿಕೆಗೆ ಸಬ್ಸಿಡಿ ದರದಲ್ಲಿ ಲಾಂಗ್ ಲೈನರ್ ಬೋಟ್ ನೀಡಲು ಮುಂದಾಗಿತ್ತು. ಕಳೆದ ಬಜೆಟ್‌ನಲ್ಲಿಯೂ ೧೦೦ ಬೋಟ್ ಖರೀದಿಗೆ ಸಹಾಯಧನ ನೀಡುವುದಾಗಿ ಘೋಷಣೆ ಮಾಡಿತ್ತು. ಅದರಂತೆ ಈ ಪೈಕಿ ೫೦ ಬೋಟ್‌ಗಳನ್ನು ಉತ್ತರ ಕನ್ನಡಕ್ಕೆ ನೀಡಲು ಮುಂದಾಗಿ ಯೋಜನೆ ರೂಪಿಸಿ ಅರ್ಜಿ ಆಹ್ವಾನಿಸಿತ್ತು.
ಯೋಜನೆಯಡಿ ಕೇಂದ್ರ ಸರ್ಕಾರ ೧.೨೦ ಕೋಟಿ ಬೋಟ್‌ಗೆ ಮಹಿಳೆಯರಿಗೆ ೬೦ರಷ್ಟು ಹಾಗೂ ಪುರುಷರಿಗೆ ಶೇ. ೪೦ ರಷ್ಟು ಸಬ್ಸಿಡಿ ನೀಡುವುದಾಗಿ ತಿಳಿಸಿತ್ತು. ಆದರೆ ಸರ್ಕಾರ ರೂಪಿಸಿದ ಯೋಜನೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಿನ್ನೆಡೆಯಾಗಿದೆ. ವರ್ಷ ಕಳೆದರೂ ಮೂರು ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದು ಅದರಲ್ಲಿ ಅಂಕೋಲಾದ ಮೀನುಗಾರರೊಬ್ಬರಿಗೆ ಮಾತ್ರ ಬೋಟ್ ಖರೀದಿಗೆ ಅವಕಾಶ ನೀಡಲಾಗಿದೆ.
ಲಾಂಗ್ ಲೈನರ್ ಬೋಟ್‌ಗಳ ಗಾತ್ರ ದೊಡ್ಡದಿದ್ದು ಅದು ಕೇರಳ, ತಮಿಳುನಾಡಿನಲ್ಲಿ ಮಾತ್ರ ಮೀನುಗಾರಿಕೆ ಮಾಡಲು ಯೋಗ್ಯವಾಗಿದೆ. ಆದರೆ ಜಿಲ್ಲೆಯ ವ್ಯಾಪ್ತಿಯಲ್ಲಿ ಪರ್ಶಿಯನ್ ಅಥವಾ ಟ್ರಾಲ್ ಬೋಟ್‌ನಲ್ಲಿ ಮಾತ್ರ ಮೀನುಗಾರಿಕೆ ಮಾಡಲು ಸಾಧ್ಯವಿದೆ. ಇದರಿಂದ ಕೊಟ್ಯಂತರ ರೂ. ಬೋಟ್ ಖರೀದಿ ಮಾಡಿ ಒಂದೊಮ್ಮೆ ಮೀನುಗಾರಿಕೆ ಸಾಧ್ಯವಾಗದೇ ಇದ್ದರೇ ಎಂಬ ಆತಂಕ ಮೀನುಗಾರರಿಗೆ ಕಾಡುವಂತಾಗಿದೆ. ಸರ್ಕಾರ ಮೀನುಗಾರರಿಗೆ ಉಪಯೋಗಕ್ಕೆ ಬಾರದ ಇಂತಹ ಯೋಜನೆ ಹೆರುವ ಬದಲು ಮೀನುಗಾರರೊಂದಿಗೆ ಚರ್ಚಿಸಿ ಯೋಜನೆ ಜಾರಿ ಮಾಡಬೇಕು ಎಂದು ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್ ಆಗ್ರಹಿಸಿದ್ದಾರೆ.
ಇನ್ನು ೧.೨೦ ಕೋಟಿ ವೆಚ್ಚದಲ್ಲಿ ಬೋಟ್ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಯೋಜನೆಯಡಿ ಮೀನುಗಾರರು ಸಾಲ ಮಾಡಬೇಕಾದರೆ ಮನೆಗಳನ್ನು ಅಡ ಇಡಬೇಕಾಗಿದೆ. ಸಿಆರ್‌ಜೆಡ್ ವ್ಯಾಪ್ತಿಯ ಮನೆಗಳಿಗೆ ಸಾಲ ನೀಡುವುದಿಲ್ಲ. ಅಲ್ಲದೆ ಇಷ್ಟೊಂದು ದೊಡ್ಡ ಮೊತ್ತ ಹಾಕಿ ಖರೀದಿ ಮಾಡಿದ ಬಳಿಕ ಮೀನುಗಾರಿಕೆ ಆಗದೆ ಇದ್ದಲ್ಲಿ ಮೀನುಗಾರರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಆದ್ದರಿಂದ ಕೇಂದ್ರದಿಂದ ಅನುಷ್ಠಾನಗೊಂಡ ಯೋಜನೆಯನ್ನು ರಾಜ್ಯದ ಕರಾವಳಿ ಜನರಿಗೆ ಅನುಕೂಲವಾಗುವಂತೆ ಮಾಡಲು ಸಂಬಂಧಪಟ್ಟ ಜನಪ್ರತಿನಿಧಿಗಳು ಪ್ರಯತ್ನಿಸಬೇಕು. ಇಲ್ಲವೇ ಲಾಂಗ್ ಲೈನರ್ ಬದಲು ಬೇರೆ ಬೋಟ್‌ಗಳನ್ನು ನೀಡಬೇಕು ಎನ್ನುವುದು ಮೀನುಗಾರರ ಆಗ್ರಹವಾಗಿದೆ.