ಪ್ರತಿ ಚುನಾವಣೆ ಫಲಿತಾಂಶ ಪ್ರಕಟಗೊಂಡಾಗಲೂ ಸೋಲು ಕಂಡವರು ಮತಯಂತ್ರಗಳಲ್ಲಿ ದೋಷವಿದೆ ಎಂದು ಹೇಳುವುದು ರೂಢಿಯಾಗಿ ಹೋಗಿದೆ. ಸೋಲಿಗೆ ಸರಿಯಾದ ಕಾರಣ ಸಿಗದೇ ಹೋದಾಗ ಮತಯಂತ್ರಗಳ ಮೇಲೆದೋಷ ಹೊರಿಸುವುದು ಸುಲಭದ ಕೆಲಸ. ಮತಯಂತ್ರದ ಬಗ್ಗೆ ಈಗಾಗಲೇ ಸುಪ್ರೀಂ ಕೋರ್ಟ್ ಪರಿಶೀಲಿಸಿ ತೀರ್ಪು ನೀಡಿದೆ. ಆದರೂ ಮತಯಂತ್ರವನ್ನು ದೂಷಿಸುವುದು ಇನ್ನೂ ನಿಂತಿಲ್ಲ. ಮಹಾರಾಷ್ಟ್ರದಲ್ಲಿ ಬಿಜೆಪಿ ಮೈತ್ರಿಪಕ್ಷಗಳು ಬಹುಮತ ಪಡೆದುಕೊಂಡಿದೆ. ಕಾಂಗ್ರೆಸ್ ಮೈತ್ರಿ ಪಕ್ಷಗಳು ಸೋಲು ಕಂಡಿವೆ. ಈಗ ಸೋಲು ಕಂಡವರು ಮತಯಂತ್ರಗಳಲ್ಲಿ ದೋಷ ಹುಡುಕಲು ಆರಂಭಿಸಿದ್ದಾರೆ. ಆದರೆ ಜಾರ್ಖಂಡ್‌ನಲ್ಲಿ ಜೆಎಂಎಂ ಬಹುಮತ ಪಡೆದುಕೊಂಡಿದೆ. ಜೆಎಂಎಂ ಜತೆ ಕಾಂಗ್ರೆಸ್ ಸೇರಿಕೊಂಡಿದೆ. ಅಲ್ಲದೆ ಮತಯಂತ್ರಗಳ ಮೇಲೆ ದೂರು ಕೇಳಿ ಬಂದಿಲ್ಲ.
ಇದರೊಂದಿಗೆ ಪ್ರತಿ ಮತ ಚಲಾವಣೆಯಾದ ಕೂಡಲೇ ವಿವಿಪ್ಯಾಟ್‌ನಲ್ಲಿ ದಾಖಲಾಗುತ್ತದೆ. ಪ್ರತಿ ಮತದಾರ ತನ್ನ ಮತ ಸಮರ್ಪಕವಾಗಿ ವಿತರಣೆಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅವಕಾಶವಿದೆ. ಮತಯಂತ್ರಗಳು ಕೆಲಸ ಮಾಡುವುದು ಬ್ಯಾಟರಿ ಮೂಲಕ. ಆ ಬ್ಯಾಟರಿಗೆ ಎಲ್ಲೂ ಹೊರಗಿನ ಸಂಪರ್ಕ ಇಲ್ಲ. ಪ್ರತಿ ಮತ ಚಲಾವಣೆಯಾದ ಮೇಲೆ ಮತಗಟ್ಟೆ ಅಧಿಕಾರಿ ಮತ್ತೊಂದು ಮತ ಚಲಾವಣೆಗೆ ಅವಕಾಶ ಮಾಡಿಕೊಡಬೇಕು. ಹೀಗಿರುವಾಗ ಸಾಮೂಹಿಕವಾಗಿ ಮತಯಂತ್ರಗಳಲ್ಲಿ ಒಂದು ರಾಜಕೀಯ ಪಕ್ಷ ತನ್ನ ಪರವಾಗಿ ಕೆಲಸ ಮಾಡಲು ಸಾಧ್ಯವೇ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಮತಚೀಟಿಗಳನ್ನು ಮತಪೆಟ್ಟಿಗೆಗೆ ಹಾಕುವಾಗ ನೂರಾರು ಸಮಸ್ಯೆಗಳಿದ್ದವು. ಅದರಲ್ಲಿ ಮತಪೆಟ್ಟೆಗೆಗಳ ಅಪಹರಣ. ಈಗ ಮತಯಂತ್ರ ಬಂದ ಮೇಲೆ ಇದಕ್ಕೆ ಅವಕಾಶವೇ ಇಲ್ಲ. ಮತದಾನ ಪೂರ್ಣಗೊಂಡ ಮೇಲೆ ಎಲ್ಲವೂ ಸೀಲ್ ಆಗಿ ಬಿಡುತ್ತದೆ. ಅಲ್ಲದೆ ಒಂದು ಚಿಪ್‌ನಲ್ಲಿ ಎಲ್ಲ ಅಂಕಿಅಂಶಗಳು ಅಡಗಿರುತ್ತದೆ. ಹೀಗಿರುವಾಗ ಮತಯಂತ್ರವನ್ನು ಅಪಹರಿಸಿದರೂ ಪ್ರಯೋಜನವಾಗುವುದಿಲ್ಲ. ಅಲ್ಲದೆ ಮತಯಂತ್ರದಿಂದ ಅಂಕಿಅಂಶ ಪಡೆಯುವುದು ಸುಲಭ. ಸಾವಿರಾರು ಜನ ಮುಂದೆ ಮತದಾನ ನಡೆಯುವಾಗ ಇಡೀ ರಾಜ್ಯದ ರಾಜಕೀಯವನ್ನೇ ಬದಲಿಸುವ ಹಾಗೆ ಮತಗಳನ್ನು ತಮ್ಮ ಕಡೆ ತಿರುಗಿಸಲು ಸಾಧ್ಯವೇ ಎಂಬುದನ್ನು ರಾಜಕೀಯ ನಾಯಕರು ಒಮ್ಮೆ ಪ್ರಾಂಜಲ ಮನಸ್ಸಿನಿಂದ ಯೋಚಿಸಿದರೆ ತಿಳಿಯುತ್ತದೆ. ಅಲ್ಲದೆ ಮತಯಂತ್ರ ಒಂದು ರಾಜ್ಯದಲ್ಲಿ ಸಮರ್ಪಕ ಮತ್ತೊಂದು ರಾಜ್ಯದಲ್ಲಿ ದೋಷದಿಂದ ಇರಲು ಸಾಧ್ಯವೇ? ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಮೂರು ವಿಧಾನಸಭೆ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಅದೇ ಕಾಂಗ್ರೆಸ್ ಪಕ್ಕದ ಮಹಾರಾಷ್ಟçದಲ್ಲಿ ಹಿಂದೆ ಬಿದ್ದಿದೆ. ಇದಕ್ಕೆ ಮತಯಂತ್ರ ಕಾರಣ ಎಂದರೆ ಹೇಗೆ ನಂಬಲು ಸಾಧ್ಯ? ಮತಯಂತ್ರ ದೋಷದ ಬಗ್ಗೆ ಸುಪ್ರೀಂ ಕೋರ್ಟ್ ಕೂಡ ಪರಿಶೀಲಿಸಿ ಆಗಿದೆ. ಜಗತ್ತಿನಲ್ಲೇ ಅತಿ ಪ್ರಜಾಪ್ರಭುತ್ವ ಎಂದರೆ ನಮ್ಮ ದೇಶ. ಇಲ್ಲಿ ನಡೆಯುವ ಚುನಾವಣೆ ಬಗ್ಗೆ ಇಡೀ ಜಗತ್ತು ಕಣ್ಣಿಟ್ಟಿರುತ್ತದೆ. ಅಲ್ಲದೆ ನಮ್ಮದು ಮುಕ್ತ ಚುನಾವಣೆ. ಯಾರು ಬಂದು ಬೇಕಾದರೂ ಪರಿಶೀಲಿಸಬಹುದು. ಹೀಗಿರುವಾಗ ಮತಯಂತ್ರ ದೋಷ ಹೇಗೆ ಬಂದು ಸೇರುತ್ತದೆ ಎಂಬುದು ಈಗಲೂ ಯಕ್ಷಪ್ರಶ್ನೆಯಾಗಿದೆ. ಗೆದ್ದವರು ಯಾರೂ ಇದುವರೆಗೆ ಮತದೋಷದಿಂದ ಗೆದ್ದೆ ಎಂದು ಎಲ್ಲೂ ಹೇಳಿಲ್ಲ. ಸೋತವರು ಮಾತ್ರ ಅಪಸ್ವರ ಎತ್ತುತ್ತಿದ್ದಾರೆ ಎಂದ ಮೇಲೆ ಅದರ ಉದ್ದೇಶ ಬೇರೆ ಎಂಬುದು ಸ್ಪಷ್ಟ.
ನಾವು ಒಟ್ಟು ೫೫ ಲಕ್ಷ ಮತಯಂತ್ರಗಳನ್ನು ಬಳಸುತ್ತಿದ್ದೇವೆ. ೯೭ ಕೋಟಿಗೂ ಹೆಚ್ಚು ಮತದಾರರಿದ್ದಾರೆ. ೧೦.೫ ಲಕ್ಷ ಮತಗಟ್ಟೆಗಳಿವೆ. ಇಂಥ ಬೃಹತ್ ಚುನಾವಣೆ ಪ್ರಕ್ರಿಯೆಯಲ್ಲಿ ಕೆಲವರು ತಮ್ಮ ಕೈಚಳಕ ತೋರಿಸಿ ಗೆಲ್ಲುತ್ತಾರೆ ಎಂದು ಹೇಳಿದರೂ ನಂಬುವುದು ಕಷ್ಟ. ಇದಕ್ಕೆ ಪುರಾವೆ ಸಿಗುವುದಂತೂ ಕಷ್ಟ. ೧೯೮೨ರಲ್ಲಿ ಕೇರಳದ ೫೦ ಮತಕ್ಷೇತ್ರಗಳಲ್ಲಿ ಮೊದಲ ಬಾರಿ ಈ ಮತಯಂತ್ರಗಳು ಬಳಕೆಗೆ ಬಂದವು. ಸುಪ್ರೀಂ ಕೋರ್ಟ್ ಎಲ್ಲವನ್ನೂ ಪರಿಶೀಲಿಸಿ ೪೫ ದಿನ ಮತಯಂತ್ರಗಳ ಯಥಾಸ್ಥಿತಿಯಲ್ಲಿ ಕಾಯ್ದುಕೊಂಡು ಹೋಗಬೇಕೆಂದು ತಿಳಿಸಿದೆ. ಅಲ್ಲದೆ ಮತದಾನವಾದ ೭ ದಿನಗಳಲ್ಲಿ ತಕರಾರು ಸಲ್ಲಿಸಬೇಕು. ಆಗ ಮೈಕ್ರೋಕಂಟ್ರೋಲರ್ ಪರಿಶೀಲಿಸಬಹುದು. ಮತಗಟ್ಟೆಗಳಲ್ಲಿ ಲಕ್ಷಾಂತರ ಅಧಿಕಾರಿಗಳು ಕೆಲಸ ಮಾಡುತ್ತಾರೆ. ಅವರೆಲ್ಲರ ಪ್ರಾಮಾಣಿಕತೆಯನ್ನು ಪ್ರಶ್ನಿಸುವುದು ಸರಿಯೇ? ಇತ್ತೀಚೆಗೆ ಮುಕ್ತಾಯಗೊಂಡ ಮಹಾರಾಷ್ಟç ವಿಧಾನಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣ ಅಧಿಕಗೊಂಡಿದೆ. ಇದರಿಂದ ಮತಯಂತ್ರ ದೋಷವೂ ಕಾರಣ ಎಂದು ಹೇಳುವ ಜನಪ್ರತಿನಿಧಿಗಳೂ ಇದ್ದಾರೆ. ಇದಕ್ಕೆ ವೈಜ್ಞಾನಿಕ ಪುರಾವೆ ಸಿಕ್ಕಿಲ್ಲ ಎಂಬುದಂತೂ ನಿಜ. ಬೇರೆ ದೇಶದವರು ತಮ್ಮ ಚುನಾವಣಾ ವ್ಯವಸ್ಥೆಯನ್ನು ಹಾಡಿ ಹೊಗಳುತ್ತಿರುವಾಗ ನಾವು ಅದರಲ್ಲಿ ದೋಷ ಹುಡುಕುತ್ತಿದ್ದೇವೆ. ದೋಷ ಹುಡುಕುವುದು ತಪ್ಪಲ್ಲ. ಆದರೆ ಅದಕ್ಕೆ ವೈಜ್ಞಾನಿಕ ಪುರಾವೆಗಳು ಬೇಕು. ನಮ್ಮ ಎಲೆಕ್ಟ್ರಾನಿಕ್ ಎಂನಿಜಯರ್‌ಗಳು ಮತದಾನದ ದಿನವೇ ಸಂಜೆ ವೇಳೆ ಪ್ರತಿ ವಿಧಾನಸಭೆ ಕ್ಷೇತ್ರದ ಫಲಿತಾಂಶ ಪ್ರಕಟಿಸುವಷ್ಟು ಕಂಪ್ಯೂಟರ್‌ಗಳನ್ನು ಸಿದ್ಧಪಡಿಸಿದ್ದಾರೆ. ಅದನ್ನು ಬಳಸುವ ಮನೋಸ್ಥೈರ್ಯ ನಮ್ಮಲ್ಲಿ ಇಲ್ಲ. ನಾವು ಹೇಳಿದಂತೆ ಜನ ಮತ ನೀಡುತ್ತಾರೆ ಎಂದು ನಾವು ಭಾವಿಸುತ್ತೇವೆ. ಅದರೆ ಮತದಾರನ ತೀರ್ಮಾನವೇ ಬೇರೆ ಇರುತ್ತದೆ. ಅದೇ ಪ್ರಜಾಪ್ರಭುತ್ವದ ಜೀವಾಳ. ಅದನ್ನು ಒಪ್ಪಿಕೊಳ್ಳುವುದು ಸೂಕ್ತ. ನಮ್ಮ ಸೋಲಿಗೆ ನಾವೇ ಕಾರಣ ಎಂಬ ಮಾತನ್ನು ಒಪ್ಪಿಕೊಂಡು ಜನರ ಮನಸ್ಸನ್ನು ಗೆಲ್ಲಲು ಶ್ರಮಿಸುವುದು ಸೂಕ್ತ. ಮತದಾರರು ಯಾರೂ ಇದುವರೆಗೆ ಮತಯಂತ್ರದ ಬಗ್ಗೆ ಚಕಾರ ಎತ್ತಿಲ್ಲ. ಆತನಿಗೆ ತಾನು ಕೊಟ್ಟ ತೀರ್ಪು ಏನು ಎಂಬುದು ತಿಳಿದಿರುತ್ತದೆ. ಮತದಾರರ ತೀರ್ಪಿಗೆ ತಲೆಬಾಗುವುದು ಸೂಕ್ತ.