ಬೆಳಗಾವಿ(ಮೂಡಲಗಿ): ಸಮೀಪದ ಹಳ್ಳೂರ ಗ್ರಾಮದ ಮುಧೋಳ-ನಿಪ್ಪಾಣಿ ರಸ್ತೆಯಲ್ಲಿ ಕಾರು ಮತ್ತು ಟ್ರಕ್ ಮಧ್ಯೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ನೂತನ ದಂಪತಿ ಸಾವನ್ನಪ್ಪಿದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಇಸ್ಲಾಂಪುರದ ಮೋಹನ ಡಮ್ಮಂಗಿ ಹಾಗೂ ಮೀನಾಕ್ಷಿ ಅವರ ಪುತ್ರ ಇಂದ್ರಜೀತ(27) ಅವರಿಗೆ ಇಚಲಕರಂಜಿಯ ಕಲ್ಯಾಣಿ (24) ಎಂಬುವರ ಜೊತೆಗೆ ಮಾರ್ಚ್ 18ರಂದು ವಿವಾಹ ನೆರವೇರಿತ್ತು. ನವ ದಂಪತಿ ಕುಟುಂಬ ಸಮೇತ ಮನೆ ದೇವರಾದ ಬಾದಾಮಿ ಬನಶಂಕರಿ ದೇವಿಯ ದರ್ಶನ ಪಡೆದು ತಮ್ಮ ಊರಿಗೆ ಮರಳುವಾಗ ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳೂರ ಕ್ರಾಸ್ ಹತ್ತಿರ ಈ ದುರ್ಘಟನೆ ಸಂಭವಿಸಿ, ನವ ದಂಪತಿ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ತಂದೆ ಮೋಹನ ಹಾಗೂ ತಾಯಿ ಮೀನಾಕ್ಷಿ ಮೂಡಲಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

























