ಭಯೋತ್ಪಾದಕರನ್ನು ಸಮರ್ಥಿಸಿಕೊಳ್ಳುವವರಿಗೆ ಮೊದಲು ಗುಂಡಿಕ್ಕಿ

0
28

ಶಿವಮೊಗ್ಗ: ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ ವಾದ್ರಾನಂತವರು ಉಗ್ರಗಾಮಿಗಳಿಗೆ ಶಕ್ತಿ ನೀಡುವಂತಹ ಹೇಳಿಕೆ ಕೊಡುತ್ತಿದ್ದಾರೆ. ಇಡೀ ದೇಶ ಭಯೋತ್ಪಾದನೆಯ ವಿರುದ್ಧ ಮಾತನಾಡುತ್ತಿದ್ದರೆ, ಈತ ಮಾತ್ರ ಭಯೋತ್ಪಾದಕರನ್ನು ಸಮರ್ಥಿಸಿಕೊಳ್ಳುವಂತಹ ಹೇಳಿಕೆ ನೀಡಿದ್ದಾನೆ. ಆತನನ್ನು ಬಂಧಿಸಬೇಕು ಇಲ್ಲವೇ ಆತನಿಗೆ ಗುಂಡಿಕ್ಕಬೇಕು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರು ಓಲೈಕೆಯ ಮಾನಸಿಕತೆಯಿಂದ ಇನ್ನೂ ಹೊರಬಂದಿಲ್ಲ. ಒಂದು ಕಡೆ ಕೇಂದ್ರ ಸರ್ಕಾರದ ಜೊತೆಗೆ ನಾವು ಇದ್ದೇವೆ ಎಂದು ಹೇಳುವ ನಾಯಕರು, ಮತ್ತೊಂದು ಕಡೆ ಭದ್ರತೆಯ ಬಗ್ಗೆ ಅಪಸ್ವರ ಎತ್ತುತ್ತಾರೆ. ಅವರ ಇಬ್ಬಗೆ ನೀತಿಯಿಂದಲೇ ಇಂತಹ ಸ್ಥಿತಿ ಬಂದಿದೆ ಎಂದರು.
ಯುದ್ಧ ಅನಿವಾರ್ಯ: ಪ್ರಪಂಚದ ಏಕೈಕ ಹಿಂದೂ ರಾಷ್ಟ್ರ ಭಾರತದ ಉಳಿವಿಗಾಗಿ ಹಾಗೂ ಭಯೋತ್ಪಾದಕತೆಯನ್ನು ತೊಡೆದು ಹಾಕಲು ಪಾಕಿಸ್ತಾನದೊಂದಿಗೆ ಯುದ್ಧ ಅನಿವಾರ್ಯ. ಮೊನ್ನೆಯ ಭಯೋತ್ಪಾದಕ ಘಟನೆಯಿಂದ ಇಡೀ ಭಾರತೀಯರ ಮನ ಮಿಡಿದಿದೆ. ಭಯೋತ್ಪಾದಕತೆಯ ಅಟ್ಟಹಾಸ ಇನ್ನೂ ಎಷ್ಟುದಿನ ಎನ್ನುವ ಆತಂಕವೂ ಮನೆ ಮಾಡಿದೆ. ಶಿವಮೊಗ್ಗ ಮಂಜುನಾಥ್ ರಾವ್ ಸೇರಿದಂತೆ ಸುಮಾರು 28 ಅಮಾಯಕರು ಈ ದಾಳಿಗೆ ಬಲಿಯಾಗಿದ್ದಾರೆ. ಇಡೀ ದೇಶ ಒಟ್ಟಾಗಿ ಇದನ್ನು ಖಂಡಿಸುತ್ತಿದೆ ಎಂದರು.
“ಪಾಕಿಸ್ತಾನಕ್ಕೆ ಬಾಂಬ್ ಹಾಕಿ, ಭಾರತಕ್ಕೆ ಹೂ ಹಾಕಿ” ಎಂಬ ಘೋಷಣೆ ಘೋಷಣೆಯಾಗೇ ಉಳಿಯದೆ ಕಾರ್ಯರೂಪಕ್ಕೆ ಬರಬೇಕು. ಈ ವಿಷಯದಲ್ಲಿ ಈಗಾಗಲೇ ಪ್ರಧಾನಿ ಮೋದಿ ಅವರು ದೃಢ ನಿರ್ಧಾರ ತೆಗೆದುಕೊಂಡಿದ್ದಾರೆ. ಮೋದಿ ಮತ್ತು ಅಮಿತ್ ಷಾ ಅವರಲ್ಲಿ ನಾನು ಮನವಿ ಮಾಡುತ್ತೇನೆ, ಪಾಕಿಸ್ತಾನ ಸರ್ವನಾಶ ಆಗದ ಹೊರತು ಭಾರತ ಉಳಿಯುವುದಿಲ್ಲ. ಭಾರತದಲ್ಲಿ ಮಾತ್ರ ಹಿಂದೂಗಳಿದ್ದಾರೆ. ಇದು ಹಿಂದೂ ರಾಷ್ಟ್ರವಾಗಿಯೇ ಉಳಿಯಬೇಕಾಗಿದೆ. ಯುದ್ಧ ಸಾರುವುದೇ ಏಕೈಕ ದಾರಿ ಎಂದರು.
ವಿಪಕ್ಷಗಳು ಇದು ಭದ್ರತೆ ವೈಫಲ್ಯ ಎಂದು ಹೇಳತೊಡಗಿವೆ. ಭದ್ರತೆಯ ವೈಫಲ್ಯ ಎಂದು ಹೇಳುವ ಕಾಲ ಅಲ್ಲ ಇದು. ಇಂದಿರಾಗಾಂಧಿ, ರಾಜೀವ್ ಗಾಂಧಿ, ಹತ್ಯೆಯಾದಾಗ ಭದ್ರತೆ ವೈಫಲ್ಯ ಆಗಿರಲಿಲ್ಲವೇ? ಕಳೆದ 25 ವರ್ಷಗಳಲ್ಲಿ ಎಷ್ಟು ಜನ ಅಮಾಯಕರು, ಸೈನಿಕರು, ನಾಗರಿಕರು ಬಲಿಯಾಗಿಲ್ಲ. ಭದ್ರತೆ ವೈಫಲ್ಯ ಎಂದು ಹೇಳುವ ಮಾನಸಿಕತೆಯ ಹಿಂದೆ ಬೇರೆ ಅರ್ಥಗಳೇ ಇವೆ. ಘಟನೆಯನ್ನು ಖಂಡಿಸುವಾಗ ಈ ರೀತಿ ಅಡ್ಡಗೆರೆಗಳನ್ನು ಹಾಕುವ ಅಗತ್ಯದ ಔಚಿತ್ಯವೇನು ಎಂದು ಪ್ರಶ್ನಿಸಿದರು.
ಪ್ರಧಾನಿ ಮೋದಿ ಅವರು ಜಗತ್ತು ಮೆಚ್ಚುವ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಪಾಕಿಸ್ತಾನಿಯರ ಎಲ್ಲಾ ವೀಸಾಗಳನ್ನು ರದ್ದು ಮಾಡಲಾಗಿದೆ. ಸಿಂಧೂ ನದಿಯ ನೀರು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಭಾರತದಲ್ಲಿರುವ ಪಾಕಿಸ್ತಾನಿಗಳನ್ನು ಜಾಗ ಬಿಡುವಂತೆ ತಿಳಿಸಿದ್ದಾರೆ. ವಾಯು ಮಾರ್ಗ ಬಂದ್ ಆಗಿದೆ. ಒಟ್ಟಾರೆ ಪಾಕಿಸ್ತಾನದ ವಿರುದ್ಧ ಭಾರತ ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದೆ ಎಂದರು.

Previous articleಎಲ್‌ಇಟಿ ಟಾಪ್ ಕಮಾಂಡರ್​ ಅಲ್ತಾಫ್ ಲಲ್ಲಿ ಫಿನಿಶ್
Next articleಗ್ರಾಮಸ್ಥರಿಂದ ಅಧಿಕಾರಿಗಳ ಮೇಲೆ ದಾಳಿಗೆ ಯತ್ನ: ಇಬ್ಬರು ಪೊಲೀಸ್‌ ವಶಕ್ಕೆ