ಮಂಗಳೂರು: ಇತಿಹಾಸ ಪ್ರಸಿದ್ಧ ಶ್ರೀ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಉತ್ಸವದ ಜಾತ್ರೆಯಲ್ಲಿ ವ್ಯಾಪಾರ ವಿವಾದ ತೀವ್ರಗೊಂಡಿದೆ.
ಹರಾಜಿನಲ್ಲಿ ಮಳಿಗೆಗಳನ್ನು ಪಡೆದ ಮುಸ್ಲಿಂ ವ್ಯಾಪಾರಿಗಳ ಬಳಿ ಹಿಂದೂಗಳು ವ್ಯಾಪಾರ ನಡೆಸುವುದನ್ನು ತಡೆಯಲು ವಿಶ್ವ ಹಿಂದೂ ಪರಿಷತ್ ಹಾಗೂ ಸನಾತನ ಹಿಂದೂ ವ್ಯಾಪಾರಸ್ಥರ ಸಂಘದವರು ಹಿಂದೂಗಳ ಮಳಿಗೆಗಳಲ್ಲಿ ಭಗವಾಧ್ವಜಗಳನ್ನು ಕಟ್ಟಿದ್ದಾರೆ. ಭಗವಾಧ್ವಜ ಕಟ್ಟಿರುವ ಮಳಿಗೆಗಳಲ್ಲಿ ಮಾತ್ರ ವ್ಯಾಪಾರ ನಡೆಸುವಂತೆ ಹಿಂದೂಗಳಿಗೆ ಸಂದೇಶ ರವಾನಿಸಿದ್ದಾರೆ.
‘ಹಿಂದೂಗಳ ಮಳಿಗೆಗಳಲ್ಲಿ ಮಾತ್ರ ವ್ಯಾಪಾರ ನಡೆಸುವಂತೆ ನಾವು ನಮ್ಮ ಧರ್ಮದವರ ಮನವೊಲಿಸುತ್ತೇವೆ. ನಮ್ಮವರ ಮಳಿಗೆಗಳನ್ನು ಗುರುತಿಸಲು ಭಗವಾಧ್ವಜ ಕಟ್ಟಿದ್ದೇವೆ’ ಎಂದು ಹಿಂದೂ ಸಂಘಟನೆಗಳ ಮುಂದಾಳುಗಳು ತಿಳಿಸಿದ್ದಾರೆ.
ಭಗವಾಧ್ವಜ ಹಾಕಿರುವ ಮಳಿಗೆಯಲ್ಲಿ ವ್ಯಾಪಾರ ಮಾಡಿ..
ಮಂಗಳಾದೇವಿ ದೇವಸ್ಥಾನ ಆಡಳಿತ ಮಂಡಳಿ ದೇವಸ್ಥಾನದ ಜಾತ್ರಾ ಸಂದರ್ಭದಲ್ಲಿ ಹಿಂದೂ ವ್ಯಾಪಾರಸ್ಥರಿಗೆ ಸಂತೆಯಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಿದಕ್ಕೆ ಅಭಿನಂದನೆಗಳು. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ದೇವಸ್ಥಾನಗಳು ದತ್ತಿ ಇಲಾಖೆಯ ಕಾನೂನಿನ ಅನ್ವಯ ಇದೆ ರೀತಿಯಲ್ಲಿ ಜಾತ್ರಾ ಸಂದರ್ಭದಲ್ಲಿ ಹಿಂದೂ ವ್ಯಾಪಾರಸ್ಥರಿಗೆ ಮಾತ್ರ ಸಂತೆಯಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಬೇಕು.
ಜಿಲ್ಲಾಡಳಿತ ಮಂಗಳಾದೇವಿ ದೇವಸ್ಥಾನದಲ್ಲಿ ಎರಡನೇ ಬಾರಿ ಏಲಂ ಕರೆದು ಹಿಂದುಯೇತರರಿಗೆ ವ್ಯಾಪಾರಕ್ಕೆ ಅವಕಾಶ ಕೊಟ್ಟಿದ್ದು ಸರಿಯಲ್ಲ, ದತ್ತಿ ಇಲಾಖೆಯ ಕಾನೂನಿನ ಅನ್ವಯ ರಥಬೀದಿಯಲ್ಲಿ ಹಿಂದುಯೇತರರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ. ಬಡ ಹಿಂದೂ ವ್ಯಾಪಾರಸ್ಥರು ಈ ಜಾತ್ರೆ ವ್ಯಾಪಾರ ನಂಬಿ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಹಾಗಾಗಿ ಕೇಸರಿ ಧ್ವಜ ಹಾಕಿರುವವರ ಬಳಿ ವ್ಯಾಪಾರ ಮಾಡುವಂತೆ ಮಂಗಳಾದೇವಿ ದೇವಸ್ಥಾನಕ್ಕೆ ಬರುವ ಲಕ್ಷಾಂತರ ಭಕ್ತರಲ್ಲಿ ವಿನಂತಿಸುತ್ತೇವೆ. ಬಡ ಮುಸ್ಲಿಂ ವ್ಯಾಪಾರಿಗಳಿಗೆ ನಮ್ಮ ವಿರೋಧ ಇಲ್ಲ, ಧಾರ್ಮಿಕ ಕ್ಷೇತ್ರ ನಮ್ಮ ಹಕ್ಕು ಹಾಗಾಗಿ ದತ್ತಿ ಇಲಾಖೆ ಕಾನೂನು ಅನ್ವಯ ರಥಬೀದಿಯಲ್ಲಿ ಹಿಂದುಯೇತರರಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ, ನೀವು ರಥಬೀದಿ ಬಿಟ್ಟು ಬೇರೆಕಡೆ ವ್ಯಾಪಾರ ಮಾಡಿ ನಮ್ಮ ಅಭ್ಯಂತರವಿಲ್ಲ ಎಂದು ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷರು ಎಚ್.ಕೆ. ಪುರುಷೋತ್ತಮ ದತ್ತನಗರ ತಿಳಿಸಿದ್ದಾರೆ.
ಮಂಗಳಾದೇವಿ ದೇವಸ್ಥಾನದ ದಸರಾ ಉತ್ಸವದಲ್ಲಿ ಜಾತ್ರೆ ವ್ಯಾಪಾರಿಗಳು ಹೋರಾಟ ನಡೆಸಿ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ಮರು ಏಲಂ ಮಾಡಿಸಿ ಅವಕಾಶ ಪಡೆದಿರುವುದರಿಂದ ಕೋಮುವಾದಿ ಶಕ್ತಿಗಳು ಹತಾಶಾರಾಗಿದ್ದಾರೆ. ಸೋಲಿನ ಹತಾಶೆಯಲ್ಲಿ ಬಡ ವ್ಯಾಪಾರಿಗಳ ಅಂಗಡಿಗಳಿಗೆ ಕೇಸರಿ ಬಾವುಟ ಕಟ್ಟುತ್ತಿರುವುದು ಕೈಲಾಗದವ ಮೈ ಪರಚಿಕೊಂಡಂತೆ ಎಂದು ಡಿವೈಎಫ್‌ಐ ಜಿಲ್ಲಾಧ್ಯಕ್ಷ, ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಹೇಳಿದ್ದಾರೆ.