ಸಾಗರ: ‘೨೦೨೦ರಲ್ಲಿ ರಾಜ್ಯದ ತ್ರಿಮತಸ್ಥ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅತ್ಯಂತ ಸಂಕಷ್ಟದ ಸಮಯದಲ್ಲಿ ನಾನು ಅಧಿಕಾರ ವಹಿಸಿಕೊಂಡೆ. ಬ್ರಾಹ್ಮಣರೇ ತಮ್ಮ ಜೀವನಕ್ಕಾಗಿ ಕಷ್ಟಪಟ್ಟು ದುಡಿದು ಹಣವನ್ನು ಕೂಡಿಟ್ಟ ಸಹಕಾರಿ ಬ್ಯಾಂಕ್‌ಗಳು ಮುಚ್ಚುವ ಸ್ಥಿತಿಗೆ ಹೋದಾಗ ನನ್ನ ಮನಸ್ಸಿಗೆ ನೋವಾಗಿ ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು ಎನ್ನುವ ಉದ್ದೇಶದಿಂದ ನನ್ನ ವಕೀಲಿ ವೃತ್ತಿಯನ್ನು ಬಿಟ್ಟು ಬ್ರಾಹ್ಮಣ ಸಮಾಜದ ಅಧ್ಯಕ್ಷನಾದೆ’ ಎಂದು ತ್ರಿಮತಸ್ಥ ಅಖಿಲ ಕರ್ನಾಟಕ ಬ್ರಾಹ್ಮಣ ಸಮಾಜದ ರಾಜ್ಯಾಧ್ಯಕ್ಷರಾದ ಅಶೋಕ ಹಾರನಹಳ್ಳಿ ಅವರು ಹೇಳಿದರು.
ಇಲ್ಲಿನ ಅಗ್ರಹಾರದ ರಾಘವೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ತ್ರಿಮತಸ್ಥ ಬ್ರಾಹ್ಮಣ ಸಮುದಾಯದ ಸಭೆಯಲ್ಲಿ ಮಾತನಾಡಿದ ಅವರು, ನಾನು ಬ್ರಾಹ್ಮಣ ಸಮಾಜದ ಅಧ್ಯಕ್ಷನಾದಾಗ ಹಲವು ಸಮಸ್ಯೆಗಳು ಎದುರಾದವು. ಸಂಸ್ಥೆಯನ್ನು ಹಾಗೂ ಸಮಾಜವನ್ನು ಮುನ್ನಡೆಸುವ ಜವಾಬ್ದಾರಿ ಎದುರಾದಾಗ ಒಂದೊಂದೆ ಸವಾಲನ್ನು ಎದುರಿಸಿದೆ. ಇಂದು ಕೋಟಿಗಟ್ಟಲೆ ಹಣವನ್ನು ಬ್ಯಾಂಕ್ ಠೇವಣಿಯಲ್ಲಿ ಇಡಲಾಗಿದೆ ಎಂದರು.
ಬ್ರಾಹ್ಮಣ ಸಂಘದ ಅಧ್ಯಕ್ಷರೇ ಬ್ರಾಹ್ಮಣ ಸಹಕಾರಿ ಬ್ಯಾಂಕ್ ಮುಳುಗಡೆಯಲ್ಲಿ ಪಾಲುದಾರರಾದರೆ ಸಮಾಜಕ್ಕೆ ಏನು ಉತ್ತರವನ್ನು ನೀಡುವುದು? ಇಂತಹ ಅನೇಕ ಸಮಸ್ಯೆಗಳ ಮಧ್ಯೆ ಹಲವು ಸಾಮಾಜಿಕ ಕೆಲಸಗಳನ್ನು ಮಾಡಲಾಯಿತು. ವಿದ್ಯಾರ್ಥಿನಿಯರ ನಿಲಯವನ್ನು ಅಭಿವೃದ್ಧಿ ಮಾಡಿ ಬಡ ಮಕ್ಕಳಿಗೆ ಉಚಿತ ಲ್ಯಾಪ್‌ಟಾಪ್ ಸಹಾಯ ಮಾಡಲಾಯಿತು. ಅಲ್ಲದೆ ವೃದ್ಧರಿಗೆ ನಿವೃತ್ತಿ ಹಣ ಬರು ವಂತೆ ಮಾಡಲಾಯಿತು. ಹಲವು ಇಂಡಸ್ಟ್ರೀಯಲ್ ಬ್ರಾಹ್ಮಣರ ವ್ಯವಹಾರಿಕರನ್ನು ಗುರುತಿಸಿ ನಮ್ಮ ಸಂಘದ ಜೊತೆಗೆ ಕೈಜೋಡಿಸುವಂತೆ ಅವರಲ್ಲಿ ಮನವಿ ಮಾಡಲಾಯಿತು. ಸದಸ್ಯತ್ವದ ಸಂಖ್ಯೆ ಹೆಚ್ಚಿಸಲಾಯಿತು. ಹಾವೇರಿಯಲ್ಲಿ ಸಿ.ಎ. ನಿವೇಶನವನ್ನು ಖರೀದಿ ಮಾಡಿ ಬ್ರಾಹ್ಮಣ ಸಂಘ ಸ್ವಂತ ಕಟ್ಟಡ ನಿರ್ಮಿಸಲು ಮುಂದಾಯಿತು. ಹೀಗೆ ಹತ್ತು ಹಲವು ಹೊಸ ಯೋಜನೆಗಳನ್ನು ರೂಪಿಸಿ ಇಂದು ೮ ಕೋಟಿಯಷ್ಟು ಹಣವನ್ನು ಬ್ರಾಹ್ಮಣ ಸಂಘಟನೆಯ ಹೆಸರಿನಲ್ಲಿ ಉಳಿತಾಯ ಠೇವಣಿಯಲ್ಲಿ ಇರಿಸಲಾಗಿದೆ ಎಂದರು.
ಬ್ರಾಹ್ಮಣ ಸಮ್ಮೇಳನ ಮಾಡುವ ಸಂದರ್ಭದಲ್ಲೂ ಹಲವು ಅಡೆತಡೆಗಳು ಎದುರಾದವು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸ್ಥಾನಮಾನ ನೀಡಿ ಗೌರವಿಸಿದರೂ ಯಾರೂ ಸಹಾಯಕ್ಕೆ ಬಾರದೆ ಹೋದರು. ಇದೊಂದು ಸವಾಲು ಎಂದು ರಾಜ್ಯಾದ್ಯಂತ ಪ್ರವಾಸ ಮಾಡಿ ಹಣ ಸಂಗ್ರಹ ಮಾಡಲಾಯಿತು. ಹಲವು ಉದ್ಯಮಿಗಳು ಸಹಾಯಕ್ಕೆ ಬಂದಿದ್ದರಿಂದ ಸಮ್ಮೇಳನದ ಖರ್ಚು ವೆಚ್ಚಗಳು ಹೋಗಿ ಅದರಲ್ಲಿ ಒಂದೂವರೆ ಕೋಟಿ ಉಳಿತಾಯ ಮಾಡಲಾಯಿತು. ಮಹಿಳಾ ಸಮ್ಮೇಳನ ಮಾಡಿ ಮಹಿಳಾ ಸಂಘಟನೆಯನ್ನು ಕಟ್ಟಲಾಯಿತು. ಹೀಗೆ ಬ್ರಾಹ್ಮಣ ಸಂಘಟನೆ ಸದೃಢವಾಗಿ ಬೆಳೆಯಲು ಕಾರಣವಾಯಿತು. ಈಗ ಸದೃಢ ನಾಯಕತ್ವ ಅವಶ್ಯಕವಾಗಿದೆ. ಈಗ ನಮ್ಮ ಅಧಿಕಾರ ಮುಗಿಯುತ್ತಾ ಬಂದಿದೆ, ಸಮಾಜಕ್ಕೆ ಉತ್ತಮ ನಾಯಕತ್ವ ಅವಶ್ಯಕವಾಗಿದೆ. ಅದಕ್ಕಾಗಿ ಖ್ಯಾತ ವಿದ್ವಾಂಸರು, ವೈದಿಕರಾದ ಭಾನುಪ್ರಕಾಶ್ ಶರ್ಮಾ ಅವರನ್ನು ಮುಂದಿನ ಅಧ್ಯಕ್ಷರಾಗಿ ಮಾಡುವ ಸಂಕಲ್ಪ ಇದೆ. ಆದ್ದರಿಂದ ಬ್ರಾಹ್ಮಣರು ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಶಿವಮೊಗ್ಗ ಜಿಲ್ಲೆಯಿಂದ ಒಬ್ಬರನ್ನು ಕೇಂದ್ರ ಸಮಿತಿಗೆ ಆಯ್ಕೆ ಮಾಡುವ ಅವಕಾಶ ವಿರುವುದರಿಂದ ಎಲ್.ಟಿ. ತಿಮ್ಮಪ್ಪ ಹೆಗಡೆ ಅವರನ್ನು ಆಯ್ಕೆ ಮಾಡಬೇಕು ಎನ್ನುವ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮುಂದಿನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಭಾನುಪ್ರಕಾಶ್ ಶರ್ಮಾ, ಕೆ.ಜಿ. ರಾಘವೇಂದ್ರ, ತಾಲೂಕು ಬ್ರಾಹ್ಮಣ ಸಮಾಜದ ರವೀಶ್, ಹರನಾಥರಾವ್ ಮತ್ತಿಕೊಪ್ಪ, ಮುಟುಗುಪ್ಪೆ ಮಂಜಣ್ಣ, ರವಿ ವಕೀಲರು, ವಶಂ ರಾಮಚಂದ್ರ ಭಟ್, ಯು.ಹೆಚ್.ರಾಮಪ್ಪ, ಸುದರ್ಶನ ವಕೀಲರು, ಕೆ.ಎಂ. ಸೂರ್ಯನಾರಾಯಣ, ಆರ್.ಎಸ್.ಗಿರಿ ಮೊದಲಾದವರು ಹಾಜರಿದ್ದರು.