ಹುಬ್ಬಳ್ಳಿ: ನಿತೀಶ್‌ಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಬಿಹಾರ್‌ದಲ್ಲಿದ್ದ ಅಪವಿತ್ರ ಮೈತ್ರಿ ಸರ್ಕಾರ ಅಂತ್ಯವಾಗಿದೆ. ಮುಂದೇನಾಗುತ್ತೋ ನೋಡೋಣ ಎಂದು ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಗಣಿ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿತೀಶ್ ಕುಮಾರ್ ಅವರಿಗೆ ಬಿಜೆಪಿ ಯಾವತ್ತೂ ತೊಂದರೆ ಕೊಟ್ಟಿಲ್ಲ. ವೈಯಕ್ತಿಕವಾಗಿಯೂ ಅವರ ಬಗ್ಗೆ ನಾವ್ಯಾರೂ ಟೀಕೆ ಮಾಡಿಲ್ಲ. ಆದರೆ ಭ್ರಷ್ಟಾಚಾರ ಪರಿವಾರವಾದಿಗಳ ಬಗ್ಗೆ ಟೀಕೆ ಮಾಡಿದ್ದೆವು ಎಂದು ಸ್ಪಷ್ಟಪಡಿಸಿದ ಜೋಶಿ, ಲಾಲೂಪ್ರಸಾದ್ ಯಾದವ್, ಬೆಂಬಲಿಗರು, ಪರಿವಾರದವರು ತೊಂದರೆ ಕೊಟ್ಟಿರಬಹುದೇನೋ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ಹಿಂದೂ ವಿರೋಧಿ. ಮುಸಲ್ಮಾನರ ತುಷ್ಟೀಕರಣ ಮಾಡಿಕೊಂಡು ಬಂದಿರುವ ವ್ಯಕ್ತಿ. ಅವರ ಸರ್ಕಾರದ ನಡೆಯೂ ಅದೇ ಹಾದಿಯಲ್ಲಿ ಸಾಗಿದೆ. ಕೆರಗೋಡಿನಲ್ಲಿ ಹನುಮಧ್ವಜ ತೆರವು ಪ್ರಕರಣ ಬಗ್ಗೆ ಪೂರ್ಣ ಮಾಹಿತಿ ಇಲ್ಲ. ಒಂದಂತೂ ಸತ್ಯ ಈ ಸರ್ಕಾರದಲ್ಲಿ ಇಂಥದ್ದೆಲ್ಲ ನಡೆಯುತ್ತಿದೆ ಎಂದರು.