ದಾವಣಗೆರೆ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಷ್ಟ್ರೀಯ ನಾಯಕರಿಗೆ ಬ್ಲಾಕ್‌ಮೇಲ್ ರಾಜಕಾರಣ ಮಾಡಿಕೊಂಡೇ ಅಧಿಕಾರ ನಡೆಸಿಕೊಂಡು ಬಂದಿದ್ದಾರೆ ಎಂದು ಹರಿಹರ ಶಾಸಕ ಬಿ.ಪಿ. ಹರೀಶ್ ಹೇಳಿದರು.
‘ಲಿಂಗಾಯತರ ಸಮಾವೇಶ ನಡೆಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಣ ಹೇಳಿದೆ. ಪರ್ಯಾಯವಾಗಿ ನೀವು ಮಾಡ್ತೀರ’ ಎಂಬ ಪ್ರಶ್ನೆಗೆ, ರಾಷ್ಟ್ರೀಯ ನಾಯಕರು ನಮ್ಮ ಜತೆ ಇಲ್ಲ ಎಂಬ ಭಾವನೆ ಅವರಿಗಿದೆ. ಹೀಗಾಗಿ ಈ ಆಟ ಶುರು ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.
ಯಾವೊತ್ತು ಕೂಡ ಬಿ.ಎಸ್.ಯಡಿಯೂರಪ್ಪ ರಾಷ್ಟ್ರೀಯ ನಾಯಕರಿಗೆ ಬ್ಲಾಕ್‌ಮೇಲ್ ಮಾಡಿಕೊಂಡೇ ಬಂದಿದ್ದಾರೆ. ಭ್ರಷ್ಟಾಚಾರದಲ್ಲಿ ಸಿಎಂ ಸ್ಥಾನದಿಂದ ಇಳಿಯುವಾಗ ಇದೇ ರೀತಿ ಮಠ-ಮಾನ್ಯಗಳ ಜನರನ್ನು ಸೇರಿಸೋದು, ಎಲ್ಲರನ್ನು ಸೇರಿಸೋದು ಇವರ ಹಳೆಯ ಆಟ. ಮತ್ತೆ ಈಗ ಅದೇ ಹಳೆಯ ಆಟ ಮುಂದುವರಿಸಿರುವುದನ್ನು ನೋಡಿದರೆ, ಅವರಿಗೆ ರಾಷ್ಟ್ರೀಯ ನಾಯಕರು ಮುಂದುವರಿಸಲು ಇಷ್ಟವಿಲ್ಲ ಎಂಬ ಅನುಮಾನಕ್ಕೆ ಸಮಾವೇಶ ಮಾಡಬಹುದು. ನಮಗೆ ಆ ಭಯ ಇಲ್ಲ, ನಾವು ಪ್ರಾಮಾಣಿಕವಾಗಿ ಇದ್ದೇವೆ ಎಂದರು.
ಪಕ್ಷ ದ್ರೋಹ ಮಾಡಿದವರು, ಮ್ಯಾಚ್ ಫಿಕ್ಸಿಂಗ್ ಮಾಡಿದವರು, ಭ್ರಷ್ಟಾಚಾರಿಗಳನ್ನು ತೊಲಗಿಸಲು ರಾಜ್ಯದ ಜನತೆ ಬಯಸಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯಕ್ಕೆ ಒಳ್ಳೆಯ ಭವಿಷ್ಯವಿದೆ. ಒಳ್ಳೆಯ ನಾಯಕರು ಬೇಕೆಂದು ಜನರು ಬಯಸಿದ್ದಾರೆ. ಅದೇ ರೀತಿ ರಾಷ್ಟ್ರೀಯ ನಾಯಕರು ನಡೆದುಕೊಳ್ಳುವ ವಿಶ್ವಾಸ ನಮಗಿದೆ ಎಂದು ತಿಳಿಸಿದರು.
ವಿಜಯೇಂದ್ರ ಬಣವೂ ಯತ್ನಾಳ್ ಕೂಡ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂದು ಹೇಳುತ್ತಾರೆ ಎಂಬ ಪ್ರಶ್ನೆಗೆ, ‘ಮ್ಯಾಚ್ ಫಿಕ್ಸಿಂಗ್ ಮಾಡಿದ್ರೂ ಬಿಎಸ್‌ವೈ ಹಾಳಾಗಿ ಹೋಗ್ಲಿ, ಯತ್ನಾಳ್ ಹಾಳಾಗಿ ಹೋಗ್ಲಿ, ನಾನೇನು ಯತ್ನಾಳ್ ಹಿಂದೆ ಇರುವವನಲ್ಲ. ಯತ್ನಾಳ್ ಬಿಜಾಪುರ, ನಾನು ದಾವಣಗೆರೆ. ದಾವಣಗೆರೆಯಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಎಸ್‌ವೈ ಮನೆತನ ಮಾಡಿದ ಅನ್ಯಾಯದ ವಿರುದ್ಧ ಪ್ರತಿಭಟಿಸುವವನು ನಾನು’. ನಾಳೆ ಯಾವುದೋ ಕಾರಣಕ್ಕೆ ಅವರು ಒಂದಾದರೂ ಕೂಡ ನನ್ನ ವೈಯಕ್ತಿಕ ಅಭಿಪ್ರಾಯ, ಭ್ರಷ್ಟರನ್ನ, ಮಾಚ್ ಫಿಕ್ಸಿಂಗ್ ಮಾಡೋರನ್ನ, ಬ್ಲಾಕ್‌ಮೇಲ್ ಮಾಡೋರನ್ನ ಯಾವೊತ್ತು ಅವಕಾಶ ಮಾಡಿಕೊಡಬೇಡಿ ಎಂದು ರಾಷ್ಟ್ರ ನಾಯಕರಲ್ಲಿ ಮನವಿ ಮಾಡುತ್ತೇನೆ ಎಂದರು.