ಬೆಂಗಳೂರು: ಬಡಕಲಾವಿದರಿಗೆ ಅತಿ ಶೀಘ್ರದಲ್ಲೇ ಮಾಸಾಶನ ಮಂಜೂರು ಮಾಡಿ ಹಣ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅಭಯ ನೀಡಿದ್ದಾರೆ.ಸಂಯುಕ್ತ ಕರ್ನಾಟಕ' ಫೆ. ೯ರಂದುನಾಲ್ಕು ವರ್ಷದಿಂದ ಬಡಕಲಾವಿದರಿಗಿಲ್ಲ ಮಾಸಾಶನ’ ಎಂಬ ವರದಿ ಪ್ರಕಟಿಸಿತ್ತು. ಇದೀಗ ಆ ಕುರಿತ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಮಾಸಾಶನದ ಮಂಜೂರಾತಿಯ ಭರವಸೆ ನೀಡಿದ್ದಾರೆ.
ವಿಕಾಸಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಸದ್ಯ ೧೨ ಸಾವಿರ ಕಲಾವಿದರಿಗೆ ಮಾಸಾಶನ ನೀಡಲಾಗುತ್ತಿದೆ. ಮಾಸಾಶನಕ್ಕೆ ಆಯ್ಕೆ ಆಗಿರುವ ೨೦೦೦ ಕಲಾವಿದರ ಪಟ್ಟಿ ಸಚಿವಾಲಯದ ಪರಿಶೀಲನೆಯಲ್ಲಿದ್ದು ಹೊಸದಾಗಿ ಬಂದಿರುವ ಅರ್ಜಿಗಳನ್ನು ಆಯ್ಕೆ ಸಮಿತಿ ಪರಾಮರ್ಶಿಸಿ ಆದಷ್ಟು ಬೇಗೆ ಪಟ್ಟಿ ಅಖೈರುಗೊಳಿಸಲಿದೆ. ಆನಂತರ ಎಲ್ಲಾ ಕಲಾವಿದರಿಗೂ ಮಾಸಾಶನ ಮಂಜೂರು ಮಾಡಲಾಗುವುದು ಎಂದರು.
ಸದ್ಯ ಕಲಾವಿದರಿಗೆ ೨೦೦೦ ರೂ. ಮಾಸಾಶನ ನೀಡುತ್ತಿದ್ದು ಈ ಮೊತ್ತವನ್ನು ೩೦೦೦ ರೂ.ಗೆ ಏರಿಸಲಾಗಿದೆ. ಹೊಸ ಪಟ್ಟಿ ತಯಾರಾದ ಮೇಲೆ ಏಪ್ರಿಲ್ ಬಳಿಕ ಎಲ್ಲಾ ಕಲಾವಿದರಿಗೂ ತಲಾ ೩೦೦೦ ರೂ. ಮಾಸಾಶನ ನೀಡಲಾಗುವುದು ಎಂದು ತಂಗಡಗಿ ತಿಳಿಸಿದರು.
ಬೆಂಗಳೂರಿನ ನಾಲ್ಕೂ ಕಡೆ ರಂಗಮಂದಿರಗಳನ್ನು ನಿರ್ಮಿಸುವ ಯೋಜನೆ ಇದೆ. ಆದರೆ, ಜಾಗದ್ದೇ ಸಮಸ್ಯೆಯಾಗಿದೆ. ದೇವನಹಳ್ಳಿ ಬಳಿ ಜಾಗವೊಂದು ಸಿಗುವ ಸುಳಿವಿದ್ದು ಸಿಕ್ಕ ತಕ್ಷಣ ರಂಗಮಂದಿರ ನಿರ್ಮಿಸಲಾಗುವುದು ಎಂದ ಸಚಿವರು, ಆರ್ಥಿಕ ಶಕ್ತಿಗನುಗುಣವಾಗಿ ಜಿಲ್ಲೆಗಳಲ್ಲಿ ಕನ್ನಡ ಭವನವನ್ನು ನಿರ್ಮಿಸಲಾಗುವುದು ಎಂದರು.
ಧನಸಹಾಯ ಯೋಜನೆಯನ್ನು ಮಂದಿನ ವರ್ಷದಿಂದ ಯೋಜಿತವಾಗಿ ಜಾರಿಗೊಳಿಸಲಾಗುವುದು. ಸಂಘ-ಸಂಸ್ಥೆಗಳ ಹಿರಿತನ ಗುರುತಿಸಲು, ಅದಕ್ಕೆ ತಕ್ಕಂತೆ ನೆರವು ನಿಗದಿಪಡಿಸಲು ತಜ್ಞರ ಸಮಿತಿ ರಚಿಸಲಾಗುವುದು ಮುಂದಿನ ವರ್ಷದ ಉತ್ಸವಗಳ ದಿನಾಂಕವನ್ನು ಮುಂಚಿತವಾಗಿಯೇ ಘೋಷಿಸಲಾಗುವುದು ಎಂದರು.
                























