ಬಂಧನ ವಾರಂಟ್ ಜಾರಿ; ಪ್ರಜ್ವಲ್‌ಗೆ ಸಂಕಷ್ಟ

0
8

ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಬಂಧನದ ವಾರಂಟ್ ಜಾರಿಗೊಳಿಸಲಾಗಿದೆ.
ಹಾಸನ ಜಿಲ್ಲೆಯಾದ್ಯಂತ ಅಶ್ಲೀಲ ವಿಡಿಯೋಗಳುಳ್ಳ ಪೆನ್‌ಡ್ರೈವ್ ಹಂಚಿಕೆಯಾದ ಬೆನ್ನಲ್ಲೇ ವಿದೇಶಕ್ಕೆ ಪರಾರಿಯಾಗಿರುವ ಪ್ರಜ್ವಲ್ ರೇವಣ್ಣ ಅವರಿಗೆ ಸಿಐಡಿಯ ವಿಶೇಷ ತನಿಖಾ ತಂಡ ಹಲವು ಬಾರಿ ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಇದೀಗ ಬಂಧನದ ವಾರಂಟ್ ಜಾರಿಗೊಳಿಸಲಾಗಿದ್ದು ಪ್ರಜ್ವಲ್‌ಗೆ ಸಂಕಷ್ಟ ಎದುರಾಗಿದೆ.
ಹೊಳೆನರಸೀಪುರ ನಗರ ಠಾಣೆಯಲ್ಲಿ ದಾಖಲಾಗಿರುವ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಆರೋಪಿಯಾಗಿರುವ ಪ್ರಜ್ವಲ್‌ಗೆ ಎಸ್‌ಐಟಿ ತಂಡ ಎರಡು ಬಾರಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ತಾನು ಬೆಂಗಳೂರಿನಲ್ಲಿ ಇರದ ಕಾರಣ ವಿಚಾರಣೆಗೆ ಹಾಜರಾಗಲು ಒಂದು ವಾರ ಕಾಲಾವಕಾಶ ನೀಡಬೇಕು’ ಎಂದು ವಕೀಲರ ಮೂಲಕ ಮನವಿ ಮಾಡಿಕೊಂಡಿದ್ದರಾದರೂ ವಿಚಾರಣೆಗೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಜ್ವಲ್ ವಿರುದ್ಧ ಎಸ್‌ಐಟಿ ಎರಡು ಬಾರಿ ಲುಕ್‌ಔಟ್ ನೋಟಿಸ್, ಒಮ್ಮೆ ಬ್ಲೂಕಾರ್ನರ್ ನೋಟಿಸ್ ಸಹ ಜಾರಿಗೊಳಿಸಿದ್ದರೂ ಭಾರತಕ್ಕೆ ಬಾರದ ಪ್ರಜ್ವಲ್ ವಿರುದ್ಧ ಬಂಧನದ ವಾರೆಂಟ್ ಜಾರಿಗೊಳಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಎಸ್‌ಐಟಿ ಮನವಿ ಮಾಡಿಕೊಂಡಿತ್ತು. ಇದೀಗ ಎಸ್‌ಐಟಿ ಮನವಿಗೆ ಸ್ಪಂದಿಸಿರುವ ನ್ಯಾಯಾಲಯ ಪ್ರಜ್ವಲ್ ವಿರುದ್ಧ ಬಂಧನದ ವಾರೆಂಟ್ ಜಾರಿಗೊಳಿಸಿದೆ. ಈ ವಾರಂಟ್ ಜಾರಿಯಲ್ಲಿದ್ದರೂ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರನ್ನು ಅಲ್ಲಿ ಬಂಧಿಸಲಾಗದು. ಆತ ಭಾರತಕ್ಕೆ ಮರಳಿದರೆ ವಿಮಾನನಿಲ್ದಾಣದಲ್ಲಿಯೇ ಬಂಧಿಸಬಹುದಾಗಿದೆ. ನ್ಯಾಯಾಲಯದ ಈ ವಾರಂಟ್ ಮಾಹಿತಿಯನ್ನು ಎಸ್‌ಐಟಿ ಪೊಲೀಸರು ದೇಶದ ಎಲ್ಲಾ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ರವಾನಿಸಲಿದ್ದು ಪ್ರಜ್ವಲ್ ಬರುವಿಕೆಯ ಮಾಹಿತಿ ಹಂಚಿಕೊಳ್ಳಲು ಕೋರಿದೆ. ಖಾತೆಗಳ ಮೇಲೆ ಕಣ್ಣು ಈ ಮಧ್ಯೆ ಪ್ರಜ್ವಲ್ ಹೊಂದಿರುವ ಏಳು ಬ್ಯಾಂಕ್ ಖಾತೆಗಳ ವಹಿವಾಟಿನ ಮೇಲೆ ಎಸ್‌ಐಟಿ ಪೊಲೀಸರ ಹದ್ದಿನ ಕಣ್ಣು ಮುಂದುವರಿದಿದೆ. ಪ್ರಜ್ವಲ್ ಖಾತೆಗಳಿಗೆ ಬೆಂಗಳೂರಿನಿಂದಲೇ ಎರಡು ದಿನಕ್ಕೊಮ್ಮೆ ಲಕ್ಷಾಂತರ ರೂಪಾಯಿ ಜಮಾ ಆಗುತ್ತಿರುವುದರ ಜಾಡು ಹಿಡಿದಿರುವ ತನಿಖಾಧಿಕಾರಿಗಳು, ಒಂದೆಡೆ ಹಣ ಜಮಾ ಮಾಡಿದವರ ಮಾಹಿತಿ ಕಲೆ ಆಗುತ್ತಿದ್ದು ಮತ್ತೊಂದೆಡೆ ನ್ಯಾಯಾಲಯದ ಅನುಮತಿ ಮೇರೆಗೆ ಪ್ರಜ್ವಲ್‌ರ ಎಲ್ಲಾ ಬ್ಯಾಂಕ್ ಖಾತೆಗಳನ್ನುನಿಷ್ಕ್ರಿಯ’ಗೊಳಿಸಲು ಮುಂದಾಗಿದ್ದಾರೆ.

Previous articleಮಹಿಳೆಯರ ಭದ್ರತೆಗೆ ಚನ್ನಮ್ಮ ಪಡೆ ಕಾರ್ಯಪ್ರವೃತ್ತ
Next articleಬದುಕಿನ ಗ್ಯಾರಂಟಿಗಳ ಸಂಭ್ರಮದ ವರ್ಷ, ಅಭಿವೃದ್ಧಿಗೆ ಹೊಸ ಮಾದರಿ