ಪ. ಬಂಗಾಳ ಹಿಂಸಾಚಾರ ಪ್ರಜಾಪ್ರಭುತ್ವ ತಳಹದಿಗೆ ಆಪತ್ತು

0
42
ಸಂಪಾದಕೀಯ

ಪಶ್ಚಿಮ ಬಂಗಾಳ ಜಿಲ್ಲಾ ಪಂಚಾಯ್ತಿ ಮತ್ತು ಸ್ಥಳೀಯ ಸಂಸ್ಥೆ ವ್ಯವಸ್ಥೆಗೆ ತವರೂರು. ಈಗ ಅಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹಿಂಸಾಕೃತ್ಯ ಗಳನ್ನು ನಿಯಂತ್ರಿಸಲು ಸೇನೆಯ ಮೊರೆ ಹೋಗ ಬೇಕಾದ ಕಾಲ ಬಂದಿದೆ. ಗ್ರಾಮ ಮಟ್ಟದಲ್ಲಿ ಜನರ ಹಕ್ಕುಗಳನ್ನು ಕಸಿದುಕೊಂಡು ನೆಲಮಟ್ಟದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಕೆಲಸ ನಡೆಯುತ್ತಿದೆ. ಇದು ಎಲ್ಲ ರಾಜ್ಯಗಳಿಗೆ ಎಚ್ಚರಿಕೆಯ ಗಂಟೆ

ದೇಶದಲ್ಲಿ ಪ್ರಜಾಪ್ರಭುತ್ವ ಬೇರೂರಲು ಸ್ಥಳೀಯ ಸಂಸ್ಥೆಗಳನ್ನು ಭದ್ರಪಡಿಸಬೇಕೆಂದು ಅಧಿಕಾರ ವಿಕೇಂದ್ರೀಕರಣ ಕೈಗೊಂಡ ಮೊದಲ ರಾಜ್ಯ ಎಂದರೆ ಪಶ್ಚಿಮ ಬಂಗಾಳ. ನೆಹರೂ ಕಾಲದಲ್ಲಿ ಎಸ್.ಕೆ. ಡೇ ಅವರು ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯನ್ನು ಪ್ರತಿಪಾದಿಸಿದರು. ೧೯೭೭ ರಲ್ಲೇ ಎಡಪಂಥೀಯ ಸರ್ಕಾರ ಸ್ಥಳೀಯ ಸಂಸ್ಥೆ ವ್ಯವಸ್ಥೆಗೆ ಜೀವ ನೀಡಿತು. ಅಂಥ ರಾಜ್ಯದಲ್ಲಿ ಈಗ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ರಕ್ತದ ಕೋಡಿ ಹರಿಯುದಿದೆ. ರಾಜಕೀಯ ಪಕ್ಷಗಳು ಬೇರು ಮಟ್ಟದಲ್ಲಿ ತಮ್ಮ ಶಕ್ತಿ ಬೆಳೆಸಿಕೊಳ್ಳಲು ಹಿಂಸಾಕೃತ್ಯ, ಹಣ ಮತ್ತು ತೋಳಬಲ ಪ್ರದರ್ಶನ ಮಾಡುತ್ತಿವೆ. ರಾಜ್ಯ ಪೊಲೀಸರ ಕೈಯಲ್ಲಿ ಹಿಂಸಾಕೃತ್ಯವನ್ನು ನಿಯಂತ್ರಿಸಲು ಸಾಧ್ಯವಾಗದೇ ಸೇನಾ ಪಡೆಯನ್ನು ಕರೆಸಲಾಗಿದೆ. ೬೦೦ ಮತಗಟ್ಟೆಗಳಲ್ಲಿ ಮರು ಚುನಾವಣೆ ನಡೆಯುತ್ತಿದೆ. ೧೫ ಜನ ಮೃತಪಟ್ಟಿದ್ದಾರೆ. ಒಟ್ಟು ೫.೬೭ ಕೋಟಿ ಜನ ೨.೦೬ ಜನಪ್ರತಿನಿಧಿಗಳ ಭವಿಷ್ಯ ನಿರ್ಧರಿಸಬೇಕಿದೆ. ಗ್ರಾಮ ಮಟ್ಟದಲ್ಲಿ ನಡೆಯುವ ಈ ಚುನಾವಣೆಯಲ್ಲಿ ರಾಜಕೀಯ ನುಸುಳಬಾರದು ಎಂದು ಕಾಯ್ದೆ ರಚಿಸುವಾಗಲೇ ಹೇಳಲಾಗಿತ್ತು. ಆದಕ್ಕಾಗಿ ರಾಜಕೀಯ ಪಕ್ಷಗಳ ಚುನಾವಣೆ ಚಿನ್ಹೆ ಬಳಸುವಂತಿಲ್ಲ ಎಂದು ಮಾಡಲಾಗಿತ್ತು. ಸ್ಥಳೀಯ ಸಂಸ್ಥೆಗಳ ಜನ ಪ್ರತಿನಿಧಿಗಳು ಸ್ಥಳೀಯ ಅಭಿವೃದ್ಧಿ ಕಾಮಗಾರಿಗಳಿಗೆ ಮಾತ್ರ ಮಹತ್ವ ನೀಡುತ್ತಿದ್ದರು. ಪಕ್ಷ ರಾಜಕಾರಣದಿಂದ ದೂರ ಇರುತ್ತಿದ್ದರು. ಆದರೆ ಕರ್ನಾಟಕವೂ ಸೇರಿದಂತೆ ಹಲವು ಕಡೆ ಜಿಲ್ಲಾ ಪಂಚಾಯ್ತಿ ವ್ಯವಸ್ಥೆ ಉತ್ತಮಗೊಂಡಂತೆ ಪಕ್ಷ ರಾಜಕಾರಣ ಗ್ರಾಮ ಮಟ್ಟಕ್ಕೆ ಇಳಿಯಿತು. ಇದರಿಂದ ದ್ವೇಷ ರಾಜಕಾರಣ ಗ್ರಾಮಗಳಲ್ಲಿ ಆರಂಭವಾಯಿತು. ಹೀಗಾಗಿ ಅಭಿವೃದ್ಧಿ ಕಾರ್ಯಗಳು ಹಿಂದಕ್ಕೆ ಸರಿದವು. ರಾಮಕೃಷ್ಣ ಹೆಗಡೆ ಕಾಲದಲ್ಲಿ ಸಚಿವರಾಗಿದ್ದ ಅಬ್ದುಲ್ ನಜೀರ್ ಸಾಬ್ ಜಿಲ್ಲಾ ಪಂಚಾಯತ್ ವ್ಯವಸ್ಥೆಗೆ ಮರು ಜೀವ ನೀಡಿದರು. ಅದರೊಂದಿಗೆ ರಾಜಕೀಯ ಮೇಲಾಟ ಕೂಡ ಗ್ರಾಮ ಮಟ್ಟದಲ್ಲಿ ಆರಂಭವಾಯಿತು. ರಾಜೀವ ಗಾಂಧಿ ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಸ್ಥಳೀಯ ಸಂಸ್ಥೆಗಳಿಗೆ ಪ್ರತಿ ೫ವರ್ಷಕ್ಕೊಮ್ಮೆ ಚುನಾವಣೆ ಕಡ್ಡಾಯವಾಗಿ ನಡೆಯುವಂತೆ ಮಾಡಿದರು. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.೩೩ ರಷ್ಟು ಮೀಸಲು ಸವಲತ್ತು ಕಲ್ಪಿಸಲಾಗಿದೆ. ಈ ಸವಲತ್ತು ಸಂಸತ್ತು ಮತ್ತು ಶಾಸನಸಭೆಗಳಲ್ಲೂ ಇಲ್ಲ. ಜಿಲ್ಲಾ ಪಂಚಾಯತ್ ವ್ಯವಸ್ಥೆ ಎಷ್ಟು ಪ್ರಬಲವಾಗಿದೆ ಎಂದರೆ ಶಾಸಕರು ಮತ್ತು ಸಂಸದರು ಜಿಲ್ಲಾ ಪಂಚಾಯತ್ ಚುನಾವಣೆಯನ್ನು ಕಡೆಗಣಿಸುವಂತಿಲ್ಲ. ಈಗ ಪಶ್ಚಿಮ ಬಂಗಾಳದಲ್ಲಿ ಹಿಂಸಾಕೃತ್ಯ ನಡೆಯಲು ಇದೇ ಕಾರಣ. ಗ್ರಾಮಸಭೆ ಮತ್ತು ಸ್ಥಳೀಯ ಸಂಸ್ಥೆಗಳು ಕ್ರಿಯಾಶೀಲವಾಗಿ ನಡೆದಲ್ಲಿ ಶಾಸಕರಿಗೆ ಕೆಲಸವೇ ಇರುವುದಿಲ್ಲ. ಶಾಸಕರು ಶಾಸನ ರಚನೆಗೆ ಮಾತ್ರ ಸೀಮಿತಗೊಳ್ಳಬೇಕಾಗುತ್ತದೆ. ಅಭಿವೃದ್ಧಿ ಕಾರ್ಯದಲ್ಲಿ ತಲೆಹಾಕಲು ಬರುವುದಿಲ್ಲ. ಗ್ರಾಮ ಪಂಚಾಯ್ತಿ ಮತ್ತು ಜಿಲ್ಲಾ ಪಂಚಾಯತ್ ಸದಸ್ಯರೇ ಎಲ್ಲವನ್ನೂ ಮಾಡುವ ಸಾಮರ್ಥ್ಯ ಪಡೆದಿರುತ್ತಾರೆ. ನಗರಸಭೆ ಮತ್ತು ಪಾಲಿಕೆಗಳಲ್ಲೂ ಸದಸ್ಯರೇ ಪ್ರಮುಖವಾಗಿರುತ್ತಾರೆ. ಅವರು ಸಮರ್ಪಕವಾಗಿ ದುಡಿದರೆ ನಗರದ ಶಾಸಕರಿಗೆ ಕೆಲಸವೇ ಇರುವುದಿಲ್ಲ. ಅದರಿಂದ ಶಾಸಕರು ಸ್ಥಳೀಯ ಸಂಸ್ಥೆ ಸಶಕ್ತವಾಗಲು ಅವಕಾಶ ನೀಡುವುದಿಲ್ಲ. ಸಂಸತ್ತು ಮತ್ತು ಶಾಸನಸಭೆಗಳೇ ಗ್ರಾಮ ಪಂಚಾಯ್ತಿ ವ್ಯವಸ್ಥೆಗೆ ದೊಡ್ಡ ಅಡ್ಡಿ. ಗ್ರಾಮ ಮಟ್ಟದಲ್ಲಿ ಹಿಂದೆ ರಾಜಕೀಯ ಪಕ್ಷಗಳ ಪ್ರಭಾವ ಇರಲಿಲ್ಲ. ಈಗ ಎಲ್ಲ ಕಡೆ ರಾಜಕೀಯ ಪಕ್ಷಗಳ ಬಲಾಬಲ ಪರೀಕ್ಷೆ ಹಿಂಸಾಕೃತ್ಯಕ್ಕೆ ತಿರುಗಿದೆ. ಇದು ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕ್ಕೆ ಕೊಡಲಿಪೆಟ್ಟು ಕೊಡುವುದರಲ್ಲಿ ಸಂದೇಹವಿಲ್ಲ.ರಾಜ್ಯ ಚುನಾವಣೆ ಆಯೋಗಕ್ಕೆ ಜನತಾ ಪ್ರಾತಿನಿಧ್ಯ ಕಾಯ್ದೆಯಲ್ಲಿ ಅಧಿಕಾರ ನೀಡಿಲ್ಲ.

Previous articleಮಗಳ ಕೊಂದು ತಾಯಿ ನೇಣಿಗೆ ಶರಣು
Next articléಭಾರತದ ಸೂಪರ್ ಸ್ಟಾರ್ ಬೋಪಣ್ಣ