ಅನುವಾದಿತ “ವಿದಿಶ ಪ್ರಹಸನ’ ಕೃತಿಗೆ ಲಭಿಸಿದ ಪ್ರಶಸ್ತಿ
ಧಾರವಾಡ: ಸಾಹಿತಿಗಳ ಬೀಡು ಧಾರವಾಡಕ್ಕೆ ಮತ್ತೊಂದು ಹಿರಿಮೆ ಲಭಿಸಿದ್ದು, ಹಿರಿಯ ಸಾಹಿತಿ ಪ್ರೊ. ಸಿದ್ದಲಿಂಗ ಪಟ್ಟಣಶೆಟ್ಟಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿರುವುದು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಟ್ಟಿಗೆ ಮತ್ತೊಬ್ಬ ಧಾರವಾಡದ ಸಾಹಿತಿ ಸೇರಿರುವುದು ಸಾಹಿತ್ಯ ಪ್ರೇಮಿಗಳಿಗೆ ಖುಷಿ ನೀಡಿದೆ.
ತಮ್ಮ ಅಮೂಲ್ಯ ಕೃತಿಗಳಿಂದ ಕನ್ನಡ ಹಾಗೂ ಹಿಂದಿ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಪ್ರೊ. ಸಿದ್ದಲಿಂಗ ಪಟ್ಟಣಶೆಟ್ಟಿ ಅವರ ಅನುವಾದಿತ “ವಿದಿಶ ಪ್ರಹಸನ’ ಕನ್ನಡ ಕೃತಿಗೆ ಪ್ರಶಸ್ತಿ ಸಂದಿದ್ದು, ಇದು ಕಾಳಿದಾಸನ ಸಂಸ್ಕೃತ ನಾಟಕ “ಮಾಲವಿಕಾಗ್ನಿಮಿತ್ರಮ್’ ಕೃತಿಯ ಕನ್ನಡ ಅನುವಾದ ಕೃತಿಯಾಗಿದೆ.
ಹಿರಿಯ ಸಾಹಿತಿ ಪ್ರೊ. ಸಿದ್ದಲಿಂಗ ಪಟ್ಟಣಶೆಟ್ಟಿ ಸಂಯುಕ್ತ ಕರ್ನಾಟಕದೊಂದಿಗೆ ಮಾತನಾಡಿ, ಕೇಂದ್ರ ಸಾಹಿತ್ಯ ಪ್ರಶಸ್ತಿ ಲಭಿಸಿದ್ದಕ್ಕೆ ಸಂತಸ ಹಂಚಿಕೊಂಡರು. ಸಾಕಷ್ಟು ಕೃತಿಗಳನ್ನು ಬರೆದಿದ್ದೇನೆ. ಆದರೆ ಯಾವುದೇ ಪ್ರಶಸ್ತಿಗಾಗಿ ಆಸೆ ಪಟ್ಟವನಲ್ಲ.
ಅದಕ್ಕಾಗಿ ಲಾಬಿ ಮಾಡಿದವನೂ ಅಲ್ಲ. ನಿರ್ಲಿಪ್ತತೆ ನನ್ನನ್ನು ಕಾಪಾಡಿದೆ. ನಿರ್ಲಿಪ್ತನಾಗಿ ಕುಳಿತಿದ್ದಕ್ಕೆ ಸಂದ ಗೌರವ ಇದಾಗಿದೆ. ನನ್ನ ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ದೊರೆಯಬೇಕೆಂಬುದು ಹಲವು ಸಾಹಿತ್ಯ ಸ್ನೇಹಿತರು ಹಾಗೂ ಓದುಗ ಅಭಿಮಾನಿಗಳ ಅಪೇಕ್ಷೆಯಾಗಿತ್ತು. ಅವರಿಗೆ ಖುಷಿಯಾಗಿದೆ, ಸಹಜವಾಗಿಯೇ ಕೃತಿಕಾರನಾದ ನನಗೂ ಖುಷಿಯಾಗಿದೆ.
ಬರುವುದು ಬಂದೇ ಬರುತ್ತದೆ ಎಂಬ ಮಧುರಚನ್ನರ ಮಾತು ನನಗೀಗ ನೆನಪಾಗುತ್ತಿದೆ. ಆಗ ಬರಬೇಕಿತ್ತು, ಈಗ ಬಂದಿದೆ ಎಂದೆಲ್ಲ ನಾನು ಹೇಳುವುದಿಲ್ಲ. ಅಂಥ ಸ್ಥಿತಿಯಲ್ಲಿಯೂ ಈಗ ನಾನಿಲ್ಲ, ಎಲ್ಲವನ್ನೂ, ಎಲ್ಲರನ್ನೂ ಪ್ರೀತಿಸುವ ಭಾವನೆ ಇದೆ. ನಮ್ಮೊಂದಿಗಿದ್ದವರಿಗೆ ಖುಷಿಯಾಗಿದೆ ನನಗೂ ಖುಷಿಯಾಗಿದೆ. ನಾವು ಸದಾ ಖುಷಿ ಖುಷಿಯಾಗಿರಬೇಕು. ಸಂತೋಷ ಪಡಲು ಒಂದು ಕಾರಣ ಇದಾಗಿದೆ ಎಂದು ಅಭಿಪ್ರಾಯಪಟ್ಟರು.



























