ಬೆಳಗಾವಿ: ಪ್ರೀತಿ ನಿರಾಕರಿಸಿ, ಮದುವೆಗೆ ಒಪ್ಪಲಿಲ್ಲ ಎಂಬ ಕಾರಣಕ್ಕೆ ಯುವಕನೊಬ್ಬ ಖಾಸಗಿ ಆಸ್ಪತ್ರೆಗೆ ನುಗ್ಗಿ ಅಲ್ಲಿ ನರ್ಸ್ ಕೆಲಸದಲ್ಲಿದ್ದ ಯುವತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮಗಳ ಮೇಲಿನ ದೌರ್ಜನ್ಯದಿಂದ ಮನನೊಂದ ತಂದೆ ಅದೇ ನೋವಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ನಗರದ ಪ್ರಕಾಶ ಜಾಧವ ಎಂಬಾತ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಯುವತಿಯ ಮೇಲೆ ಮನಸಿಟ್ಟಿದ್ದಾನೆ. ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ, ನೀನೂ ಪ್ರೀತಿ ಮಾಡಲೇಬೇಕು ಎಂದು ಆಕೆಯನ್ನು ಒತ್ತಾಯಿಸತೊಡಗಿದ್ದಾನೆ. ಆದರೆ ಪ್ರಕಾಶನ ಪ್ರೀತಿಯನ್ನು ಯುವತಿ ನಿರಾಕರಿಸಿದ್ದಾಳೆ.
ಆದರೆ ಪಾಗಲ್ ಪ್ರೇಮಿ ಅಷ್ಟಕ್ಕೆ ಸುಮ್ಮನಾಗದೆ ತನ್ನ ಕುಟುಂಬದವರ ಜತೆಯಲ್ಲಿ ಈಕೆಯ ಮನೆಗೆ ಬಂದು ಮದುವೆಯ ಆಫರ್ ನೀಡಿದ್ದಾನೆ. ಈ ವೇಳೆ ಎರಡೂ ಮನೆಯವರ ಮುಂದೆಯೇ ಯುವತಿ ನನಗೆ ನಿಮ್ಮ ಬಗ್ಗೆ ಅಂತಹ ಯಾವುದೇ ಭಾವನೆ ಇಲ್ಲ. ಈ ಮದುವೆಗೆ ನನ್ನ ಒಪ್ಪಿಗೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ. ಆಕೆಯ ಮನೆಯವರು ಕೂಡಾ ಇದನ್ನೇ ಹೇಳಿ ವಾಪಸ್ ಕಳುಹಿಸಿದ್ದಾರೆ.
ಮನೆಯವರ ಮುಂದೆ ಅವಮಾನ ಮಾಡಿದ್ದಕ್ಕೆ ಕೋಪಗೊಂಡಿದ್ದ ಆತ ಅ. ೩೦ರಂದು ಕೈಚೀಲದ ಜತೆ ಆಕೆ ವೃತ್ತಿ ನಿರ್ವಹಿಸುತ್ತಿದ್ದ ಖಾಸಗಿ ಆಸ್ಪತ್ರೆಗೆ ಬಂದು ಕೈ ಚೀಲದಿಂದ ಕೊಯ್ತಾ (ದೊಡ್ಡ ಕತ್ತಿ) ಹೊರತೆಗೆದು ಆಕೆಯ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ತೀವ್ರ ಗಾಯಗೊಂಡ ಯುವತಿ ಕುಸಿದುಬಿದ್ದಾಗ ಆರೋಪಿ ಪರಾರಿಯಾಗಿದ್ದಾನೆ.
ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದ ಯುವತಿಯನ್ನು ಅದೇ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮಗಳ ಮೇಲಿನ ದೌರ್ಜನ್ಯದಿಂದ ಮನನೊಂದು ಆಕೆಯ ತಂದೆ ಅದೇ ನೋವಿನಲ್ಲಿ ಹಾಸಿಗೆ ಹಿಡಿದು ೧೫ ದಿನಗಳ ಹಿಂದೆ ನಿಧನರಾಗಿದ್ದಾರೆ. ಯುವತಿಯ ಮೇಲಿನ ಹಲ್ಲೆ ಪ್ರಕರಣದ ಸಿಸಿ ಕ್ಯಾಮರಾ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಖಡೇಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.