ಹುಬ್ಬಳ್ಳಿ: ಇಂದಿನ ಕಾಲಘಟ್ಟ ಸನಾತನ ಸಂಸ್ಕೃತಿ ಅಳಿವು ಉಳಿವಿನ ಸಂದರ್ಭ. ಸನಾತನ ಸದಾ ನಮ್ಮೊಂದಿಗೆ ಇರುವುದು ಎಂದು ನಾವು ಮೈ ಮರೆತು ಕುಳಿತರೆ ಅದರ ಪರಿಣಾಮವನ್ನು ಎದುರಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂದು ಪೇಜಾವರ ವಿಶ್ವಪ್ರಸನ್ನತೀರ್ಥ ಶ್ರೀಗಳು ಹೇಳಿದರು.
ಇಲ್ಲಿನ ದೇಶಪಾಂಡೆ ನಗರ ಸವಾಯಿ ಗಂಧರ್ವ ಸಭಾಂಗಣದಲ್ಲಿ ಪೇಜಾವರ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಷಷ್ಟ್ಯಬ್ದ ಅಭಿವಂದನಾ ಕಾರ್ಯಕ್ರಮ ನಿಮಿತ್ತ ಅಖಿಲ ಭಾರತ ಮಾಧ್ವ ಮಹಾಮಂಡಲ ವತಿಯಿಂದ ಹಮ್ಮಿಕೊಂಡಿದ್ದ ಸಂತ ಸಂಗಮ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ನಮ್ಮ ದೇಶಕ್ಕೆ ಬಂದಂತಹ ಉತ್ತಮ ವಿಚಾಗಳಿಗೆ ನಾವು ಸದಾ ಹೃದಯ ತೆರೆದಿಟ್ಟಿದ್ದೇವೆ. ನಮ್ಮ ಮನೆ ಮಕ್ಕಳನ್ನು ಎಗರಿಸಿಕೊಂಡು ಹೋಗುತ್ತಿದ್ದಾರೆ ಎಂದಾದರೆ ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸಂತರ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಸಂತರ ಮಾರ್ಗದರ್ಶನದಲ್ಲಿ ನಾವು ನಡೆಯುವಂತಾಗಬೇಕು. ಸನಾತನ ಧರ್ಮವನ್ನು ಕಿತ್ತೆಸೆಯುತ್ತೇವೆ ಎನ್ನುವ ಸಂದರ್ಭದಲ್ಲಿ ನಾವು ಸುಮ್ಮನೆ ಕೂತರೆ ಆಗುವುದಿಲ್ಲ. ನ್ಯಾಯುತವಾಗಿ ಹೋರಾಟ ಮಾಡಿದಾಗ ನಮಗೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸಲು ಅವಕಾಶ ದೊರೆತಿದೆ. ರಾಮ ಮಂದಿರ ರಾಮ ಮಂದಿರವಾಗಿ ಉಳಿಯಬೇಕಾದರೆ ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿ ಪರಿಚಯ ಮಾಡಬೇಕು. ಇಲ್ಲದಿದ್ದರೆ ಮುಂದೆ ನಮ್ಮ ಮಕ್ಕಳಿಂದಲೇ ನಮ್ಮ ಸಂಸ್ಕೃತಿಗೆ, ರಾಮ ಮಂದಿರಕ್ಕೆ ಅಪಾಯ ಬಂದೊದಗುವ ಸಂಭವವಿದೆ. ಮಕ್ಕಳಿಗೆ ಹೆಸರನ್ನು ಅರ್ಥವಿಲ್ಲದಂತೆ ಇಡುತ್ತಿದ್ದೇವೆ. ನಮ್ಮ ಸಂಸ್ಕೃತಿ, ಧರ್ಮವನ್ನು ಬಿಂಬಿಸುವ ಉತ್ತಮವಾದ ಹೆಸರುಗಳನ್ನು ಇಡಬೇಕು. ಇದೀಗ ನಮ್ಮ ಸಂಸ್ಕೃತಿ ಪರಿಚಯಿಸುವ ನಿಟ್ಟಿನಲ್ಲಿ ಹೆಸರನ್ನು ಇಡುವ ಕ್ರಾಂತಿಯಾಗಬೇಕು. ಇಲ್ಲದಿದ್ದರೆ ನಮ್ಮ ಮಕ್ಕಳೇ ನಮ್ಮ ದೇಶಕ್ಕೆ, ನಮ್ಮ ಕುಟುಂಬಕ್ಕೆ ಪರಕೀಯರಾಗುತ್ತಾರೆ ಎಂದರು.
ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇಲ್ಲಿರುವ ಸಂತರೆಲ್ಲರೂ ಒಂದೇ, ಬೇರೆ ಬೇರೆಯಲ್ಲ. ಕಾವ್ಯ, ಶಾಸ್ತ್ರ, ವಿನೋದದಲ್ಲಿ ಕಾಲವನ್ನು ಕಳೆಯಬೇಕು. ಜಗಳ, ನಿದ್ರೆಯಲ್ಲಿ ಕಳೆಯಬಾರದು. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಅವರನ್ನು ಬಿಟ್ಟು ಇವರು ಆಚರಣೆ ಮಾಡಬೇಕು ಎಂಬ ಘಟನೆ ನಡೆಯುತ್ತಿರುವುದು ಹೊಸದೆನಲ್ಲ. ಶಿವನ ಕೈಲಾಸದಲ್ಲಿಯೇ ದೇವರ ವಾಹನಗಳಾದ ಪ್ರಾಣಿಗಳು ಒಬ್ಬರನ್ನೊಬ್ಬರು ತಿಂದು ಹಾಕಬೇಕು ಎಂಬ ಸಂಚನ್ನು ಮಾಡುತ್ತಿರುವಾಗ ಎಂದು ಉದಾಹರಣೆಯೊಂದನ್ನು ನೀಡಿದರು.
ಭಗವಂತನ ಆರಾಧನೆಯಿಂದ ವಿಮುಖನಾಗಿರುತ್ತಾನೋ ಅವನು ಬ್ರಾಹ್ಮಣನಾಗಿರಲಿ ಯಾರೇ ಆಗಿರಲಿ ಉದ್ಧರಿಸಲು ಸಾಧ್ಯವಿಲ್ಲ. ಭಕ್ತಿಯ ಸ್ಥರದಲ್ಲಿ ಎಲ್ಲರೂ ಒಂದೇ. ವಿಭಿನ್ನ ರೂಪದ ದೇವರಲ್ಲಿ ಇರುವವನು ದೇವ ಒಬ್ಬನೇ. ಆದರೆ, ಅದನ್ನು ಅರ್ಥೈಸಿಕೊಳ್ಳದ ಮಾನವ ನಾಯಿಗೂ ಸಮನಲ್ಲ ಎಂದರು.
ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ದಾಸ ಸಾಹಿತ್ಯ ಹಾಗೂ ವಚನ ಸಾಹಿತ್ಯ ಎರಡು ಒಂದೇ ಎಂದು ಪೇಜಾವರ ಶ್ರೀಗಳ ಸಮ್ಮುಖದಲ್ಲಿ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಯಾರೊಂದಿಗೂ ಮುನಿಸಿಕೊಳ್ಳದೇ ಎಲ್ಲರನ್ನೂ ಒಗ್ಗೂಡಿಸಿದ ಶಕ್ತಿ ವಿಶ್ವೇಶತೀರ್ಥ ಶ್ರಿಗಳಿಗಿತ್ತು. ದಾಸ ಸಾಹಿತ್ಯ ಹಾಗೂ ವಚನ ಸಾಹಿತ್ಯ ಎರಡು ಒಂದೇ ತತ್ವವನ್ನು ಜಗತ್ತಿಗೆ ಸಾರಿವೆ. ಮಧ್ವ ಪರಂಪರೆ ವಿಶ್ವ ಪರಂಪರೆಯಾಗಲು ವಿಶ್ವೇಶತೀರ್ಥ ಶ್ರೀಗಳ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ವಿಜಯಪುರ ಜ್ಞಾನ ಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ಮಾತನಾಡಿ, ಭಾರತ ಎಂದರೆ ನಮಗೆ ನೆನಪಿಗೆ ಬರುವುದು ಪರಂಪರೆ, ಸಂಸ್ಕೃತಿ, ಆಧ್ಯಾತ್ಮ, ಸಾಧು-ಸಂತರು. ಶ್ರೀಗಳು ತಮ್ಮ ಜನ್ಮ ದಿನದ ಅಂಗವಾಗಿ ಎಲ್ಲ ಸಂತರನ್ನು ಸೇರಿಸಿ ಆಚರಿಸುತ್ತಿದ್ದಾರೆ. ಹೃದಯದಲ್ಲಿ ಭಗವಂತನನ್ನು ತುಂಬಿಕೊಂಡವರು ಸಂತರು. ದೇಶಕ್ಕೆ ಬೆಲೆ ಬಂದಿರುವುದು ಸಂತರ ಸಂಗಮದಿಂದ. ದೇಶಕ್ಕೆ ಧಕ್ಕೆ ಬಂದಾಗ ನಾವೆಲ್ಲರೂ ಒಂದಾಗಬೇಕು ಎಂದರು.
ಮೂರುಸಾವಿರಮಠ ಪೀಠಾಧ್ಯಕ್ಷ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ದೇಶಕ್ಕೆ ದೊಡ್ಡ ಬೆಲೆ ಬಂದಿದ್ದು, ಧರ್ಮದಿಂದ ಹಾಗೂ ಸಂತರಿಂದ. ಸಾಮಾಜಿಕ ಸಾಸ್ಥ್ಯವನ್ನು ಒಬ್ಬ ಸಂತ ಹೇಗೆ ಕಾಪಾಡಬಲ್ಲ ಎಂಬುದಕ್ಕೆ ಹಲವು ಘಟನೆಗಳು ದಾಖಲಾಗಿವೆ. ಯೋಗಿಗಳಿಗೆ, ಸಂತರಿಗೆ ರಾತ್ರಿಯೇ ಹಗಲಾಗಿರುತ್ತದೆ. ಸಂತರ ಸಂಪರ್ಕದಿಂದ ಗೌರವಾತಿಥ್ಯ ದೊರೆಯುತ್ತದೆ. ಕಳ್ಳರನ್ನು ಸಂತರನ್ನು ಮಾಡುತ್ತಾನೆ ಹೊರತು ಕಳ್ಳರ ಸಂಪರ್ಕದಿಂದ ಸಂತ ಕಳ್ಳನಾಗುವುದಿಲ್ಲ. ದಾನ, ಧರ್ಮಾಧಿ ಕಾರ್ಯಗಳನ್ನು, ನಾಸ್ತಿಕರನ್ನು ಆಸ್ತಿಕರನ್ನಾಗಿ ಮಾಡುವ ಶಕ್ತಿ ಸಂತರಿಗಿದೆ. ಇಂತಹ ಹಲವು ಸಮಾಜಮುಖಿ ಕಾರ್ಯಗಳನ್ನು ಸಂತರು ಅನಾದಿ ಕಾಲದಿಂದ ಮಾಡುತ್ತ ಬಂದಿದ್ದಾರೆ ಎಂದರು.
ತುಮಕೂರ ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಹಾತ್ಮರಿಗೆ ೬೦ ವರ್ಷ ತುಂಬಿದೆ ಎಂದರೆ ಅವರಿಗೆ ಮತ್ತಷ್ಟು ಜವಾಬ್ದಾರಿ ಬಂದ ಹಾಗೆ. ಬಹಳ ಸರಳ, ಸಂಪನ್ನ ವ್ಯಕ್ತಿತ್ವವನ್ನು ವಿಶ್ವೇಶತೀರ್ಥ ಶ್ರೀಗಳು ಹೊಂದಿದ್ದರು. ಎಲ್ಲರನ್ನು ಒಪ್ಪಿಕೊಂಡು, ಅಪ್ಪಿಕೊಳ್ಳುವ ಮನೋಭಾವ ಹೊಂದಿದವರಾಗಿದ್ದರು. ಅವರಂತೆಯೇ ವಿಶ್ವಪ್ರಸನ್ನತೀರ್ಥ ಶ್ರೀಗಳು ಹೊಂದಿದ್ದಾರೆ ಎಂದು ಹೇಳಿದರು.
ಗ್ಯಾರಂಟಿ ಪ್ರವಾಹದಲ್ಲಿ ಜನ ಏನೇನೋ ಮಾಡಿದ್ದಾರೆ. ಇದರ ಬಿಲ್ ನ್ನು ಮುಂದೊಂದು ದಿನ ನಾವೇ ಪಾವತಿಸಬೇಕಾಗುತ್ತದೆ. ಜನರನ್ನು ನಾವು ಜಾಗೃತಗೊಳಿಸಬೇಕಿದೆ ಎಂದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವಿಶ್ವೇಶತೀರ್ಥ ಶ್ರೀಪಾದಂಗಳು ಎಲ್ಲ ಸಮಾಜದವನ್ನು ಅಪ್ಪಿಕೊಂಡು, ಒಪ್ಪಿಕೊಂಡವರು. ನಾವು ಪ್ಲೀಸ್ ಮಾಡಿದ್ದರ ಪರಿಣಾಮ ನಮ್ಮ ದೇಶ ಇಲ್ಲಿಗೆ ಬಂದಿದೆ. ಇರುವುದನ್ನು ಖಡಾಖಂಡಿತವಾಗಿ ಹೇಳುವುದನ್ನು ಕಲಿಯಬೇಕು. ಅಂದಾಗ ಏನೇ ಬಂದರೂ ಎದುರಿಸುವ ಶಕ್ತಿ ನಮಗಿದೆ. ನಾವೆಲ್ಲರೂ ಒಂದಾದಾಗ ಮಾತ್ರ ದೇಶ ಸಮೃದ್ಧವಾಗಿರಲು ಸಾಧ್ಯ. ಸಂತರು ಹೇಳುವುದಕ್ಕಿಂತ ನಡೆದು ತೋರಿಸಿದರೆ ಅದನ್ನು ಸಮಾಜ ಒಪ್ಪಿಕೊಳ್ಳುತ್ತದೆ ಎಂಬುದನ್ನು ತೋರಿಸಿಕೊಟ್ಟವರು ವಿಶ್ವೇಶತೀರ್ಥ ಶ್ರೀಗಳು. ಸಂಸ್ಕೃತ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿದೆ. ಅದು ಉತ್ತರ ಕರ್ನಾಟಕ ಭಾಗಕ್ಕೂ ತರಬೇಕು ಎಂದು ಹೇಳಿದರು.
ಪಾವಗಡ ರಾಮಕೃಷ್ಣಾಶ್ರಮದ ಸ್ವಾಮಿ ಜಪಾನಂದಜೀ ಮಹಾರಾಜ ಮಾತನಾಡಿ, ನಾವೆಲ್ಲರೂ ಸನಾತನ ಧರ್ಮದ ಉಳಿವಿಗಾಗಿ ನಿಲ್ಲಬೇಕು. ಹಿಮಾಲಯ ಪರ್ವತಕ್ಕಿಂತಲೂ ಗಟ್ಟಿಯಾಗಿ ನಿಂತಿದೆ. ಅದರ ಪುನರುತ್ಥಾನವಾಗಬೇಕು. ಹಿಂದುಗಳು ಹಿಂದೆ ಉಳಿದುಕೊಂಡಿದ್ದರಿಂದ ಹಿಂದೆ ಉಳಿಯುವಂತಾಗಿದೆ. ಸನಾತನ ಧರ್ಮ ಅಳಿವಿನಂಚಿನಲ್ಲಿದೆ. ಅದರ ಉಳಿವಿಗೆ ಹಿಂದುಗಳು ಮುಂದೆ ಬರಬೇಕು ಎಂದರು.
ಚಿತ್ರದುರ್ಗ ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಹುಬ್ಬಳ್ಳಿ-ಧಾರವಾಡ ಇಸ್ಕಾನ್ ಸಂಸ್ಥೆ ಅಧ್ಯಕ್ಷ ರಾಜೀವಲೋಚನದಾಸ್, ಹುಬ್ಬಳ್ಳಿ ಹೊಸಮಠದ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.