ಪ್ರಸನ್ನತೆಗಾಗಿ ಪ್ರಸಾದ ಸೇವನೆ

0
12

ದೇವರ ಅಥವಾ ಗುರುಗಳ ಪ್ರಸಾದವನ್ನು ಪ್ರತಿನಿತ್ಯ ಸೇವಿಸುವುದರಿಂದ ಮನುಷ್ಯನು ಯಾವಾಗಲೂ ಪ್ರಸನ್ನನಾಗಿರಲು ಸಾಧ್ಯ. ಮನುಷ್ಯನು ಸೇವಿಸುವ ಅನ್ನವೆ ರಸ, ರಕ್ತ, ಮತ್ತು ಮಾಂಸ ಮುಂತಾದ ಸಪ್ತಧಾತುಗಳ ರೂಪದಲ್ಲಿ ಪರಿವರ್ತನೆ ಆಗುತ್ತ ಕೊನೆಗೆ ಮನಸ್ಸಾಗುತ್ತದೆ. ಆದ್ದರಿಂದ ದೋಷದಿಂದ ಕೂಡಿದ ಅನ್ನ ಸೇವಿಸಿದರೆ ಮನಸ್ಸು ದೂಷಿತವಾಗುತ್ತದೆ. “ಅನ್ನಶುದ್ಧ್ಯಾ ಹಿ ಸರ್ವೇಷಾಂ ಸತ್ತ್ವಶುದ್ಧಿರುದಾಹೃತಾ” ಎಂಬ ಸಿದ್ಧಾಂತ ಶಿಖಾಮಣಿಯ ಉಕ್ತಿಯಂತೆ ಪರಿಶುದ್ಧವಾದ ಅನ್ನವನ್ನು ಸೇವಿಸಿದರೆ ಸರ್ವರ ಮನಸ್ಸು ಪರಿಶುದ್ಧವಾಗುತ್ತದೆ. ಮನುಷ್ಯನು ಸೇವಿಸುವ ಅನ್ನದಲ್ಲಿ ಪದಾರ್ಥಗತ ಮತ್ತು ಭಾವಗತ ಎಂಬುದಾಗಿ ಎರಡು ಪ್ರಕಾರದ ದೋಷಗಳಿರುತ್ತವೆ. ಪದಾರ್ಥಗಳನ್ನು ಸ್ವಚ್ಛಗೊಳಿಸುವುದರಿಂದ ಪದಾರ್ಥಗತ ದೋಷ ನಿವಾರಣೆ ಆಗುತ್ತದೆ. ಪದಾರ್ಥಗಳನ್ನು ದೇವರಿಗೆ ಅರ್ಪಿಸಿದಾಗ ಅದಕ್ಕೆ ಸಂಬಂಧಿಸಿದ ಭಾವಗತ ದೋಷವು ದೂರಾಗುತ್ತದೆ. ಸಾಮಾನ್ಯವಾಗಿ ಪದಾರ್ಥಗಳ ಬಗ್ಗೆ ಇದು ನನ್ನದು ಮತ್ತು ಇದನ್ನು ಕಷ್ಟ ಪಟ್ಟು ನಾನು ಸಂಪಾದಿಸಿರುವುದರಿಂದ ಇದನ್ನು ನಾನೇ ಅನುಭವಿಸಬೇಕೆಂಬ ಸ್ವಾರ್ಥ ಭಾವ ಇರುತ್ತದೆ. ಇದನ್ನು ಕಳೆದುಕೊಳ್ಳುವುದು ಬಹಳ ಮುಖ್ಯ.
ಪದಾರ್ಥವು ಹೇಗೆ ಪ್ರಸಾದವಾಗುತ್ತದೆ ಎಂಬುದು ತಿಳಿಯಬೇಕಾದರೆ, ಈ ಕೆಳಗಿನ ಸಂದರ್ಭವನ್ನು ಗಮನಿಸಬೇಕು. ನೀವು ದೇವಸ್ಥಾನಕ್ಕೆ ಹೋಗುವಾಗ “ರಿಕ್ತಹಸ್ತೋ ನ ಗಚ್ಛೇತ್” ಎಂಬ ಉಕ್ತಿಯಂತೆ ಹಣ್ಣುಕಾಯಿ ಕಲ್ಲುಸಕ್ಕರೆ ಇತ್ಯಾದಿ ಪದಾರ್ಥಗಳನ್ನು ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿರುತ್ತೀರಿ. ಆಗ ದಾರಿಯಲ್ಲಿ ಎದುರಾದ ನಿಮ್ಮ ಸ್ನೇಹಿತ ನಿಮ್ಮ ಕೈಯಲ್ಲಿರುವ ವಸ್ತುಗಳನ್ನು ನೋಡಿ ಕೈಯಲ್ಲಿ ಏನಿದೆ? ತೆಗೆದುಕೊಂಡು ಎಲ್ಲಿಗೆ ಹೊರಟಿದ್ದೀರಿ? ಎಂಬಿತ್ಯಾದಿಯಾಗಿ ವಿಚಾರಿಸಲು ನೀವು ಪದಾರ್ಥಗಳ ಹೆಸರನ್ನು ಹೇಳಿತ್ತೀರಿ. ಮತ್ತು ದೇವಸ್ಥಾನಕ್ಕೆ ಹೋಗುತ್ತಿರುವುದಾಗಿ ಹೇಳಿತ್ತೀರಿ. ಇವೆಲ್ಲ ಯಾರವು? ಎಂದು ಕೇಳಿದಾಗ ಇವುಗಳನ್ನೆಲ್ಲ ನಾನೇ ಮಾರ್ಕೇಟ್ ನಿಂದ ತಂದ್ದಿದ್ದೇನೆ. ಇವೆಲ್ಲ ನನ್ನವು ಎಂದು ಹೇಳುತ್ತೀರಿ. ನಂತರ ದೇವಸ್ಥಾನಕ್ಕೆ ಹೋಗಿ ಆ ಪದಾರ್ಥಗಳನ್ನು ಪೂಜಾರಿಯ ಕೈಗೆ ನೀಡಿದಾಗ ಅವನು ಕಾಯಿ ಒಡೆದು, ಹಣ್ಣು, ಕಲ್ಲುಸಕ್ಕರೆಗಳನ್ನು ದೇವರಿಗೆ ನೈವೇದ್ಯ ಮಾಡಿ ಅದರಲ್ಲಿ ಸ್ವಲ್ಪು ಭಾಗವನ್ನು ನಿಮಗೆ ಕೊಡುತ್ತಾನೆ. ಅದನ್ನು ನೀವು ಭಕ್ತಿಯಿಂದ ತೆಗೆದುಕೊಂಡು ಕೈಯಲ್ಲಿ ಹಿಡಿದು ಮನೆಯ ಕಡೆ ಹೋರಡುತ್ತೀರಿ. ಬರುವಾಗ ಭೇಟಿಯಾದ ನಿಮ್ಮ ಸ್ನೇಹಿತ ಮತ್ತೆ ಅಲ್ಲೇ ಇದ್ದು, ನಿಮ್ಮನ್ನು ಮತ್ತೆ “ಕೈಯಲ್ಲಿ ಏನಿದೆ” ಎಂದು ಕೇಳುತ್ತಾನೆ. ಆಗ ನೀವು “ಇದು ಪ್ರಸಾದವಿದೆ” ಎಂದು ಹೇಳುತ್ತೀರಿ. ಮುಂದುವರೆದು “ಯಾರದು?” ಎಂದು ಅವನು ಕೇಳಿದರೆ, “ದೇವರದು” ಎಂದು ಹೇಳುವುದರ ಜೊತೆಗೆ ನೀನೂ ಸ್ವಲ್ಪ ತೆಗೆದುಕೋ ಎಂದು ಕೊಡುತ್ತೀರಿ. ಯಾವುದೇ ವಸ್ತುವಿನ ಬಗ್ಗೆಯಾಗಲಿ ಇದು ನನ್ನದೆಂಬ ಮಮಕಾರ ಭಾವ ಹೋಗಿ ದೇವರದು ಎಂಬ ಭಾವ ಬಂದಾಗ ಅದು ಪ್ರಸಾದವಾಗುತ್ತದೆ.

Previous articleಬೇಲಿ-ಹೊಲದ ನಡುವೆ ಪೊಲೀಸರಲ್ಲೊಬ್ಬ ಕೀಚಕ
Next articleಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಓರ್ವನ ಬಂಧನ