ಪತ್ರಕರ್ತರು ಗೂಂಡಾಗಳು ಎಂದ ಸಂಜಯ ಪಾಟೀಲ

0
15
ಸಂಜಯ ಪಾಟೀಲ

ಬೆಳಗಾವಿ: ಪತ್ರಕರ್ತರು ದಾದಾಗಿರಿ ಮಾಡುವ ಗೂಂಡಾಗಳು ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾಜಿ ಶಾಸಕ ಹಾಗೂ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಹೇಳಿದ್ದಾರೆ.
ಬಿಜೆಪಿ ಮುಖಂಡರು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕುಕ್ಕರ್ ಹಂಚಿಕೆ, ತೆಂಗಿನಕಾಯಿ ಮುಟ್ಟಿ ಪ್ರಮಾಣದಂಥ ಪ್ರಕರಣಗಳು ನಡೆಯುತ್ತಿದ್ದರೂ ಮಾಧ್ಯಮದವರು ವಿಶೇಷ ಸುದ್ದಿಯನ್ನು ಯಾಕೆ ಮಾಡುತ್ತಿಲ್ಲ ಎಂದು ಪ್ರಶ್ನೆ ಮಾಡಿದರು. ಈ ವೇಳೆ ನಿಮ್ಮ ಹುಟ್ಟು ಹಬ್ಬದ ನೆಪದಲ್ಲಿ ನೀವು ಜನರಿಗೆ ಉಡುಗೊರೆ ಕೊಟ್ಟಿಲ್ಲವೇ? ನಿಮಗೆ ಆ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಮಾಧ್ಯಮದವರು ಮರುಸವಾಲು ಹಾಕುತ್ತಿದ್ದಂತೆಯೇ ಒಂದೆಡೆ ಸೂಕ್ತ ಉತ್ತರ ನೀಡಲಾಗದೆ ಮುಖಭಂಗಕ್ಕೆ ಒಳಗಾದ ಸಂಜಯ ಪಾಟೀಲ, ತಮ್ಮ ಮೇಲಿನ ನೇರಾರೋಪ ಅರಗಿಸಿಕೊಳ್ಳಲಾಗದೆ ಮಾಧ್ಯಮದವರು ದಾದಾಗಿರಿ ಮಾಡುತ್ತಿದ್ದೀರಿ, ನಾವು ನಿಮ್ಮನ್ನು ಕರೆದಿದ್ದೇವೆ, ನಾವು ಹೇಳಿದ್ದನ್ನು ಕೇಳಿಸಿಕೊಳ್ಳಬೇಕು ಎಂದು ಚೀರಾಡಲು ಶುರುವಿಟ್ಟುಕೊಂಡರು.
ನಾನು ಇಡೀ ದೇಶ ಸುತ್ತುತ್ತೇನೆ, ಆದರೆ ಅಲ್ಲಿನ ಪತ್ರಕರ್ತರು ನಾನು ಹೇಳಿದ್ದನ್ನು ಕೇಳುತ್ತಾರೆ. ಆದರೆ ನೀವು ಗೂಂಡಾ ತರಹ ದಾದಾಗಿರಿ ಮಾಡುತ್ತಿದ್ದೀರಿ ಎಂದು ಕೂಗಾಡಲು ಮುಂದಾದರು. ಹೌದು ನಮ್ಮ ಎದುರಾಳಿ ಹೀಗೆಲ್ಲಾ ಹಂಚಿಕೆ ಮಾಡುವಾಗ ನಾನು ಕೈ ಕಟ್ಟಿ ಕುಳಿತುಕೊಳ್ಳಲು ಆಗುತ್ತದೆಯೇ ಎಂದು ತಾವು ಮರುಪ್ರಶ್ನೆ ಹಾಕಿದರು. ಈ ವೇಳೆ ಸುದ್ದಿಗೋಷ್ಠಿಯಲ್ಲಿದ್ದ ಇತರ ಬಿಜೆಪಿ ಮುಖಂಡರು, ಶಾಸಕರು, ಸಂಸದರೆಲ್ಲ ಇರಿಸುಮುರುಸಿಗೆ ಒಳಗಾಗಿ, ತಮ್ಮ ಪಕ್ಷದ ಮಾಜಿ ಶಾಸಕರಿಗೆ ಸುಮ್ಮನಿರುವಂತೆ ಅವರೆಲ್ಲಾ ಸೂಚಿಸಿದರೂ ಸಂಜಯ್ ಪಾಟೀಲರು ಮಾತ್ರ ಮಾದ್ಯಮದವರ ಮೇಲೆ ಬೆಂಕಿ ಕಾರುತ್ತಲೇ ಹೋದರು. ಕೊನೆಗೆ ತಮ್ಮ ಎಲ್ಲಾ ಮಾತುಗಳೂ ಕ್ಯಾಮೆರಾದಲ್ಲಿ ಸೆರೆಯಾಗುತ್ತಿರುವುದನ್ನು ಕಂಡು ತಮ್ಮ ಮಾತಿಗೆ ತಾವೇ ಕ್ಷಮೆ ಕೋರಿ ವಾಗ್ವಾದಕ್ಕೆ ಅಂತ್ಯ ಹಾಡಿದರು.

Previous articleಮೀಸಲಾತಿಗೆ ಹೋರಾಟಗಳು ಫ್ಯಾನ್ಸಿಯಾಗಿವೆ
Next articleಸ್ವಾಮೀಜಿ ಬಹಳ ಮಾತಾಡಿದ್ರ ಸಿಡಿ ಐತಿ ಅಂತಾರ