ನನ್ನ ಪ್ರಾಮಾಣಿಕತೆಗೆ ಸಾಕ್ಷಿ

0
25

ದಾವಣಗೆರೆ: ಖಾಸಗಿ ವಾಹಿನಿಯೊಂದು ನನ್ನ ಮೇಲೆ ಮಾಡಿದ್ದ ಆರೋಪಕ್ಕೆ ನ್ಯಾಯಾಲಯವು ಸಮನ್ಸ್ ನೀಡಿದೆ. ಇದು ನನ್ನ ಪ್ರಾಮಾಣಿಕತೆಗೆ ಸಾಕ್ಷಿಯಾಗಿದ್ದು, ಮುಂದಿನ ದಿನಗಳಲ್ಲಿ ಖಾಸಗಿ ವಾಹಿನಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಲು ಚಿಂತನೆ ನಡೆದಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬಿಎಂಆರ್ ಟಿಸಿ ಹಾಗೂ ಕೆಎಸ್ ಆರ್ ಟಿಸಿ ನೌಕರರ ಹೋರಾಟ ನಡೆಸುವ ವೇಳೆಯಲ್ಲಿ ಅವರ ಹೋರಾಟ ಹಿಂಪಡೆಯಲು ನಾನು ಮಧ್ಯಸ್ಥಿಕೆ ವಹಸಿ, ಸುಮಾರು ೩೫ ಕೋಟಿ ಪಡೆದು ವಂಚನೆ ಮಾಡಿದ್ದೇನೆ ಎಂದು ಖಾಸಗಿ ವಾಹಿನಿಯೊಂದು ನನ್ನನ್ನು ಖಳನಾಯಕ, ಮೋಸಗಾರ, ಸುಳ್ಳುಗಾರ ಎಂಬ ಪದ ಬಳಕೆ ಮಾಡಿ ನನ್ನ ತೇಜೋವಧೆ ಮಾಡಿದ್ದಾರೆ. ಇದರ ಜೊತೆ ದೆಹಲಿಯಲ್ಲಿ ನಡೆಯುತ್ತಿದ್ದ ರೈತ ಹೋರಾಟವನ್ನು ನಿಲ್ಲಿಸಲು ಕೊಟ್ಯಾಂತರ ಹಣ ಪಡೆದಿದ್ದೇನೆ ಎಂದು ವಾಹಿನಿಯವರು ಸರಣಿ ಸುದ್ದಿ ಮಾಡಿ ನನ್ನ ಹಾಗೂ ರೈತ ಸಂಘದ ಮೇಲೆ ಆರೋಪ ಹೊರಿಸಿದ್ದರು ಎಂದು ಕಿಡಿಕಾರಿದರು.
ಈ ಬಗ್ಗೆ ವಾಹಿನಿಯ ಮುಖ್ಯಸ್ಥರು,ನಿರೂಪಕರು ಹಾಗೂ ಇತರರ ಮೇಲೆ ಬೆಂಗಳೂರಿನ ಅಡಿಷನಲ್ ಚೀಫ್ ಮ್ಯಾಜಿಸ್ಟ್ರೇಟರ್ ಕೋರ್ಟ್  ಇದೇ ಜುಲೈ ೭ ರಂದು ಕ್ರಿಮಿನಲ್ ಮೊಕದ್ದಮೆ ಐಪಿಸಿ ೪೯೯ ಮತ್ತು ೫೦೦ ಈ ಮೊಕದ್ದಮೆ ದಾಖಲಿಸಿಕೊಂಡು ಅವರಿಗೆ ನ್ಯಾಯಾಲಕ್ಕೆ ಹಾಜರಾಗುವಂತೆ ಎಚ್ಚರಿಕೆಯ ಸಮನ್ಸ್ ನೀಡಲಾಗಿದೆ. ಇದರಿಂದ ಪ್ರಾಮಾಣಿಕತೆ ಸಾಬೀತಾಗಿದೆ ಎಂದು ಸ್ಪಷ್ಟಪಡಿಸಿದರು.
ನನ್ನ ಮಾನಹಾನಿ ಮಾಡಲು ಪ್ರಯತ್ನಿಸಿರುವ ಖಾಸಗಿ ವಾಹಿನಿಯವರ ಮೇಲೆ ಮುಂದಿನ ದಿನಗಳಲ್ಲಿ ಮಾನನಷ್ಟ ಪ್ರಕರಣ ದಾಖಲು ಮಾಡುವ ಕುರಿತು  ವಕೀಲರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದರು. ಈಗಾಗಲೇ ಕೇಂದ್ರ ಸರ್ಕಾರ ರೈತರಿಗೆ ಮಾರಕವಾಗಿರುವ ಮೂರು ಕರಾಳ ಕೃಷಿಕಾಯ್ದೆಗಳನ್ನು ರದ್ಧುಪಡಿಸಿದೆ. ಅದರಂತೆ ರಾಜ್ಯದಲ್ಲೂ ಭೂ ಸುಧಾರಣಾ ಕಾಯ್ದೆಯನ್ನು ಈ ಕೂಡಲೇ ರಾಜ್ಯ ಸರ್ಕಾರ ರದ್ದು ಮಾಡಬೇಕು ಎಂದು ಆಗ್ರಹಿಸಿದರು.

Previous articleಕೆಎಸ್​ಆರ್​ಟಿಸಿ ಬಸ್​ ಚಾಲಕ ಆತ್ಮಹತ್ಯೆಗೆ ಯತ್ನ ಪ್ರಕರಣ: ಅಂಬುಲೆನ್ಸ್ ತಡೆಗೆ ಸ್ಪಷ್ಟನೆ
Next articleಆಗಸ್ಟ್‌ 2ರಿಂದ 370ನೇ ವಿಧಿ ರದ್ದು ವಿರುದ್ಧದ ಅರ್ಜಿ ವಿಚಾರಣೆ