ನದಿ ಬತ್ತಿದಾಗ ಮಾತ್ರ ಗೋಚರಿಸುವ ಈಶ್ವರ…!

0
13

ಈ ಮೊದಲು ನದಿಯ ದಡ ಈ ದೇವಾಲಯ. ಈಗ ಮಧ್ಯ ಭಾಗ…!
ಕೃಷ್ಣಾ ನದಿ ಖಾಲಿಯಾಗಿದ್ದರಿಂದ ಮಹಿಷವಾಡಗಿ ಬ್ಯಾರೇಜನ ಹಿಂಭಾಗದಲ್ಲಿ ಕಟ್ಟಿರುವ ಈ ಗುಡಿ(ದೇವಾಲಯ) ಪೂರ್ತಿಯಾಗಿ ಕಾಣತೊಡಗಿದ್ದು, ಕೃಷ್ಣೆ ಪೂರ್ತಿ ಬರಿದಾದಾಗ ಮಾತ್ರ ಕಾಣುವ ಈ ದೇವಸ್ಥಾನ ಅಪರೂಪ ಎನ್ನುವಂತೆ ವರ್ಷದಲ್ಲಿ ಒಂದು ಬಾರಿ ಇಲ್ಲವೇ, 2ವರ್ಷ, 3 ವರ್ಷ ಹೀಗೆ ಬರಗಾಲ ಬಂದಾಗ ಮಾತ್ರ ಇದು ಗೋಚರಿಸುವುದರ ಜೊತೆಗೆ ಪೂಜೆಗೊಳ್ಳುವ ವಿಶೇಷ ದೇವಸ್ಥಾನವಾಗಿದೆ. ದಿನ ದಿನಕ್ಕೆ ನೀರು ಕಡಿಮೆಯಾದಂತೆ ಗೋಚರಿಸುವ ಈ ದೇವಾಲಯವು ಪೂರ್ವಕ್ಕೆ ಮುಖ ಮಾಡಿ ಕಟ್ಟಲಾಗಿದೆ. ಬೃಹದಾಕಾರದ ಕರಿ ಕಲ್ಲಿನಿಂದ ನಿರ್ಮಿಸಲಾಗಿರುವ ಕಟ್ಟಡದಲ್ಲಿ ಯಾವುದೇ ವಾಸ್ತು ಶಿಲ್ಪವಾಗಲಿ ಕೆತ್ತನೆಯ ಕೆಲಸವಾಗಲಿ ಇಲ್ಲ. ಆದರೂ ಅದು ನೋಡುಗರನ್ನು ಆಕರ್ಷಿಸುವಂತಿದೆ.ಈ ದೇವಾಲಯದ ಕುರಿತು ಮಾಹಿತಿ ಕಲೆ ಹಾಕುವಾಗ ರಬಕವಿಯ ಮರೆಗುದ್ದಿ ಮನೆತನದ ಹಿರಿಯ ಅಜ್ಜ ಬಾಳಪ್ಪ ಮರೆಗುದ್ದಿ ಕಟ್ಟಿಸಿದ್ದು ಎಂದು ತಿಳಿದು ಬಂದಿದ್ದು, ಈಗಲೂ ಆ ದೇವಸ್ಥಾನಕ್ಕೆ ಬಾಳಪ್ಪನ ಗುಡಿ ಅಂತಾ ಕರಿಯುತ್ತಾರೆ. ಆದರೆ ಇದು ಈಶ್ವರ ದೇವಸ್ಥಾನ.
ಮರೆಗುದ್ದಿ ಮನೆತನದವರು ಹೇಳುವ ಪ್ರಕಾರ ನಮ್ಮ ಮುತ್ತ್ಯಾಗ ಗಂಡು ಸಂತಾನ ಇರಲಿಲ್ಲ. ಇಬ್ಬರು ಹೆಣ್ಣು ಮಕ್ಕಳು ಅವರದು ಮದುವೆ ಆಗಿತ್ತು. ಬಾಳಪ್ಪ ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಿದ್ದ ಹಂಗ್ ಚಿಲ್ಲರೆ ನಾಣ್ಯಗಳಿಂದ ಸಾಕಷ್ಟು ಹಣ ಕೂಡಿಸಿದ್ದ. ಆ ಹಣ ಏನು ಮಾಡುವುದು ಎಂಬ ವಿಚಾರಹಿರಿಯರನ್ನು ಕೇಳಿದಾಗ ಅವರು ಕೃಷ್ಣಾ ನದಿಯ ದಡದಲ್ಲಿ ಒಂದು ಗುಡಿ ಇಲ್ಲ. ಅಲ್ಲಿ ಗುಡಿ ಕಟ್ಟಿಸಿದರ ಹೋಗಿ ಬರುವ ಜನಕ್ಕೆ ಪೂಜೆ ಮಾಡಲಿಕ್ಕೆ ಒಂದು ಜಾಗ ಆಗತದ್ ಮತ್ತು ಇದರಿಂದ ಬಹಳ ಜನಕ್ಕ ಅನಕೂಲ ಆಗತದ್ ಅದಕ್ಕ ಅಲ್ಲೇ ಗುಡಿ ಕಟ್ಟಿಸು ಎಂದು ಸಲಹೆ ಇತ್ತರು. ಆಗ ಬನಹಟ್ಟಿ ಜಮಖಂಡಿ ಸಂಸ್ಥಾನಕ್ಕೆ ಸೇರಿತ್ತು, ಅದರಂತೆ ರಬಕವಿ ಪಟ್ಟಣ ಸಾಂಗ್ಲಿ ಸಂಸ್ಥಾನಕ್ಕೆ ಸೇರಿತ್ತು.
ಆಗಿನ ಸಾಂಗ್ಲಿ ಸಂಸ್ಥಾನದಿಂದ ದೇವಾಲಯ ಕಟ್ಟಲು ಪರವಾಣಿಗೆ ಪಡೆದು 1912ರ ಸುಮಾರಿಗೆ ಈ ದೇವಾಲಯವನ್ನು ನಿರ್ಮಿಸಲಾಯಿತು. ಧಾರ್ಮಿಕ ಕಾರ್ಯವಾಗಿದ್ದರಿಂದ ನಮ್ಮ ಮುತ್ತಾö್ಯ ಯಾವುದಕ್ಕೂ ನನ್ನ ಹೆಸರು ಬೇಡ ಅಂದರು. ಈ ದೇವಾಲಯ ಕಟ್ಟಿಸಿದರ ಬಗ್ಗೆ ಸಾಂಗ್ಲಿಯಲ್ಲಿ ದಾಖಲೆಗಳು ಮೋಡಿ ಭಾಷೆಯೊಳಗೆ ನೋಡಲು ಸಿಗುತ್ತಾವೆ ಎನ್ನುತ್ತಾರೆ ಮರೆಗುದ್ದಿ ಮನೆತನದವರು. ಮೊದಲು ನದಿಯ ವ್ಯಾಪ್ತಿ ಬಹಳ ಕಡಿಮೆ ಇದ್ದ ಕಾರಣ ದೇವಾಲಯ ನದಿಯ ದಡದಲ್ಲಿ ಇತ್ತು.
ಆದರೆ 1971ರಲ್ಲಿ ವಿರೇಂದ್ರ ಪಾಟೀಲ ಸರ್ಕಾರ ರಬಕವಿ-ಬನಹಟ್ಟಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಕುಡಿಯುವ ನೀರಿನ ಸಲುವಾಗಿ ಬ್ಯಾರೇಜ್ ನಿರ್ಮಿಸಲು ಅನುಮತಿ ನೀಡಿದರು.
1973ರಲ್ಲಿ ದೇವರಾಜ ಅರಸು ಸರ್ಕಾರವಿದ್ದಾಗ ಪ್ರಥಮ ಬಾರಿಗೆ ನೀರನ್ನು ತಡೆ ಹಿಡಿಯಲಾಯಿತು. ಕಾರಣ ದೇವಾಲಯ ನೀರೊಳಗೆ ಮುಳುಗಿ ಹೋಯಿತು. ಆಗ ಅದೇ ನದಿಯ ಮಧ್ಯ ಭಾಗವಾಯಿತು. ನಿಜಕ್ಕೂ ಒಂದು ಅಪರೂಪದ ದೇವಸ್ಥಾನವಾಗಿರುವ ಇದು ಶತಮಾನಗಳು ಕಳೆದರೂ ಯಾವುದೇ ನೀರಿಗೂ ಗರ್ಭಗುಡಿಯಲ್ಲಿರುವ ಮೂರ್ತಿಗಳು ಜಗ್ಗದೇ ಆಲುಗಾಡದೇ ಹಾಗೇ ನಿಂತಿರುವುದು ವಿಶೇಷವಾಗಿದೆ.

Previous articleಯಾರ ಹೆಗಲ ಮೇಲೆ ಎಂಬ ಟ್ವೀಟಾಸ್ತ್ರ
Next articleಸ್ವಂತ ಬಾವಿಯಿಂದ ಊರಿಗೆಲ್ಲ ನೀರು: ಅಕ್ಷಯ ಪಾತ್ರೆಯಾದ ಬಾವಿ