ದೇವರಹಳ್ಳಿ ಗ್ರಾಪಂ ನೀರುಗಂಟಿ, ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ

ಚನ್ನಗಿರಿ: ತಾಲೂಕಿನ ದೇವರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಹಂಗಾಮಿ ಬಿಲ್ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಲೋಕೇಶ್ ಹಾಗೂ ನೀರುಗಂಟಿ ಶೇಖರಪ್ಪ ಎಂಬುವರು ಗುರುವಾರ ಲಂಚ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಬಲೆಗೆ ಬಿದಿದ್ದಾರೆ.
ಇದೇ ಗ್ರಾಮದ ಲಕ್ಷ್ಮೀದೇವಿ ಎಂಬುವರಿಗೆ ಇಂದಿರಾ ಗ್ರಾಮೀಣ ವಸತಿ ಯೋಜನೆಯಡಿ ೨೦೧೬ರಲ್ಲಿ ನಿವೇಶನ ಮಂಜೂರಾಗಿದೆ. ಈ ನಿವೇಶನದ ಹಕ್ಕುಪತ್ರ ಕೊಡಲು 5 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಲಂಚದ ಹಣವನ್ನು ಕೊಡಲು ಇಷ್ಟ ಇಲ್ಲದೆ ದಾವಣಗೆರೆ ಲೋಕಾಯುಕ್ತ ಕಚೇರಿಗೆ ಲಕ್ಷ್ಮೀದೇವಿ ಎಂಬುವರು ದೂರು ನೀಡಿದ್ದರು. ಲೋಕಾಯುಕ್ತ ಪೊಲೀಸರ ಸಲಹೆಯಂತೆ ಗುರುವಾರ ಲಕ್ಷ್ಮೀದೇವಿ, ಹಂಗಾಮಿ ಬಿಲ್ ಕಲೆಕ್ಟರ್ ಲೋಕೇಶ್ ಮತ್ತು ನೀರುಗಂಟಿ ಶೇಖರಪ್ಪ ಅವರಿಗೆ ಲಂಚದ ಹಣ 5 ಸಾವಿರ ರೂ. ಕೊಡುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಲೋಕಾಯುಕ್ತ ಅಧೀಕ್ಷಕ ಎಂ.ಎಸ್. ಕೌಲಾಪೊರೆ ಮತ್ತು ಉಪಾಧೀಕ್ಷಕಿ ಕಲಾವತಿ, ಅವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಪ್ರಭು, ಸರಳ ಅವರೊಂದಿಗೆ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಆರೋಪಿಗಳನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.