ಸಿವಾನ್: ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಆರ್‌ಜೆಡಿಗಳಿಗೆ ದಲಿತರ ಮೇಲೆ ಯಾವುದೇ ಗೌರವವಿಲ್ಲ ಎಂದು ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ, ಇತ್ತೀಚೆಗೆ ಅವರು ಅಂಬೇಡ್ಕರ್‌ಗೆ ಅವಮಾನವಾಗುವಂತೆ ಮಾತನಾಡಿದ್ದರೂ ಕ್ಷಮೆಯಾಚನೆ ಮಾಡುವುದಿಲ್ಲ ಎಂದು ಕೆಣಕಿದರು.
ಈ ವರ್ಷಾಂತ್ಯದಲ್ಲಿ ನಡೆಯಲಿರುವ ಬಿಹಾರದ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಅವರು ಸಿವಾನ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಕಾರ್ಮಿಕರು ಉದ್ಯೋಗ ಹುಡುಕಿಕೊಂಡು ಹೊರ ರಾಜ್ಯಗಳಿಗೆ ವಲಸೆ ಹೋಗುವುದಕ್ಕೆ ಕಾಂಗ್ರೆಸ್ ಮತ್ತು ಆರ್‌ಜೆಡಿ ಆಡಳಿತದಲ್ಲಿ ಬಿಹಾರ ಒಂದು ಸಂಕೇತವಾಗಿತ್ತು. ಆದರೆ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಿತೀಶ್ ಕುಮಾರ್ ಅವರು ಈ ಪರಿಸ್ಥಿತಿಯನ್ನು ಸುಧಾರಿಸಿದ್ದಾರೆ ಎಂದು ಹೊಗಳಿದರು. ಅಷ್ಟೇ ಅಲ್ಲ, ಯಾರು ಬಿಹಾರವನ್ನು ಬೀಳಿಸಿದ್ದರೋ ಅವರು ಮತ್ತೆ ಅಧಿಕಾರ ಬೇಕೆಂದು ಕೇಳುತ್ತಿದ್ದಾರೆ. ಜನ ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದರು