ಬಳ್ಳಾರಿ: 400ಕ್ಕೂ ಹೆಚ್ಚು ಕರಡಿಗಳು ಸೇರಿದಂತೆ ವಿವಿಧ ವನ್ಯಜೀವಿಗಳ ಹಾಗೂ ಪಕ್ಷಿಗಳ ವಾಸಸ್ಥಾನವಾಗಿರುವ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದರೋಜಿ ಗುಡ್ಡದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ.
ಭಾನುವಾರ ತಡರಾತ್ರಿ ಗುಡ್ಡದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿಯೇ ಗುಡ್ಡದ ತುಂಬೆಲ್ಲಾ ಆವರಿಸಿಕೊಂಡಿದೆ. ಬೆಂಕಿ ಕೆನ್ನಾಲಿಗೆಯಿಂದ ಕಾಡು ಪ್ರಾಣಿಗಳಿಗೆ ಅಪಾಯದ ಆತಂಕ ಎದುರಾಗಿತ್ತು. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ತಡರಾತ್ರಿಯಿಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ತೊಡಗಿದ್ದು, ಕಾರ್ಯಾಚರಣೆ ಯಶಸ್ವಿಯಾಗಿದೆ. ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದ್ದು, ಯಾವುದೇ ವನ್ಯಜೀವಿಗಳ ಪ್ರಾಣಕ್ಕೆ ಹಾನಿಯಾಗಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

























