ಬೀದರ್ : ಇಲ್ಲಿಯ ಓಲ್ಡ್ ಆದರ್ಶ ಕಾಲೋನಿಯ ರೈಲ್ವೆ ಗೇಟ್ ಹತ್ತಿರ ಮಂಗಳವಾರ ನಡೆಯುತ್ತಿದ್ದ ಜಗಳ ಬಿಡಿಸಲು ಹೋಗಿದ್ದ ಡೆಲಿವರಿ ಬಾಯ್ ಓರ್ವನಿಗೆ ಯುವಕರ ಗುಂಪೊಂದು ಹಲ್ಲೆ ನಡೆಸಿ ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ವಿಜಯಕುಮಾರ ಹಲ್ಲೆಗೊಳಗಾದ ಯುವಕ. ವಯಸ್ಸಾದ ವ್ಯಕ್ತಿಯೊಂದಿಗೆ ನಡೆಯುತ್ತಿದ್ದ ಜಗಳ ಬಿಡಿಸಲು ಹೋಗಿದ್ದ ಈತನನ್ನು ಯುವಕರ ಗುಂಪು ಅವಾಚ್ಯವಾಗಿ ನಿಂದಿಸಿದಲ್ಲದೆ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಯುವಕ ಅಲ್ಲಿಂದ ತನ್ನ ಕಚೇರಿಗೆ ತೆರಳಿದ್ದಾನೆ. ನಂತರ ಅಲ್ಲಿಯೂ ಆಗಮಿಸಿದ್ದ ಯುವಕರ ಗುಂಪು ವಿಜಯಕುಮಾರನ ಮತ್ತೆ ಹಲ್ಲೆ ನಡೆಸಿದಲ್ಲದೆ ಅಲ್ಲಿಯೇ ಇದ್ದ ಇನ್ನೋರ್ವ ಕಚೇರಿ ಸಿಬ್ಬಂದಿ ರೋಹನ ಎನ್ನುವಾತನ ಮೇಲೆಯೂ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ. ಗಾಯಾಳು ವಿಜಯಕುಮಾರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾನೆ. ಈ ಸಂಬಂಧ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ನಾಲ್ವರನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.