ಹುಬ್ಬಳ್ಳಿ: ಪಕ್ಷದ ಶಿಸ್ತು ಉಲ್ಲಂಘಿಸಿದ ಶಾಸಕರು, ಸಂಸದರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ರಾಜ್ಯ ಸಮಿತಿಗಿಲ್ಲ. ನಿಯಮ ಉಲ್ಲಂಘಿಸಿದ ಶಾಸಕರ ಕುರಿತು ಪಕ್ಷದ ಕೇಂದ್ರ ಸಮಿತಿಗೆ ವರದಿ ಸಲ್ಲಿಸಿದ್ದೇನೆ. ಕೇಂದ್ರ ನಾಯಕರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಹೇಳಿದರು.
ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಶಾಸಕರಾದ ಎಸ್.ಟಿ. ಸೋಮಶೇಖರ ಮತ್ತು ಶಿವರಾಮ ಹೆಬ್ಬಾರ ಅವರು ಡಿ.ಕೆ.ಶಿವಕುಮಾರ ಅವರು ಕರೆದ ಡಿನ್ನರ್ ಪಾರ್ಟಿಯಲ್ಲಿ ಭಾಗವಹಿಸಿದ ಕುರಿತು ಅಲ್ಲಿನ ಪಕ್ಷದ ಜಿಲ್ಲಾಧ್ಯಕ್ಷರು, ಮಂಡಳ ಅಧ್ಯಕ್ಷರ ವರದಿ ಆಧರಿಸಿ ಮಾಹಿತಿ ನೀಡಲಾಗಿದೆ. ಅವರನ್ನು ಹೊರ ಹಾಕಲು ವರದಿ ಕೊಡಲಾಗಿದೆ. ಅವರ ಮೇಲೆ ಕ್ರಮ ಆಗುವ ವಿಶ್ವಾಸವಿದೆ. ಈ ಹಿಂದೆಯೂ ಇವರು ನಿಯಮ ಉಲ್ಲಂಘಿಸಿದ್ದ ಕುರಿತು ಒಂದು ವರ್ಷದ ಹಿಂದೆ ವರದಿ ನೀಡಲಾಗಿತ್ತು. ಈ ತಿಂಗಳ ಕೊನೆಯಲ್ಲಿ ರಾಜ್ಯ ಮತ್ತು ರಾಷ್ಟ್ರ ನಾಯಕರು ಗೊಂದಲಕ್ಕೆ ಅಂತ್ಯ ಹಾಡಲಿದ್ದಾರೆ ಎಂದರು.