ಜೋಶಿ ಎದುರು ಅಹಿಂದ ತಂತ್ರಕ್ಕೆ ಕೈ ಮೊರೆ?

0
21

ಬಿ.ಅರವಿಂದ
ಹುಬ್ಬಳ್ಳಿ: ಕೇಂದ್ರದ ಪ್ರಭಾವಿ ಸಚಿವ ಮತ್ತು ರಾಜ್ಯದಲ್ಲಿ ಬಿಜೆಪಿ ಹೈಕಮಾಂಡಿನ ಪ್ರತಿನಿಧಿ ಎಂಬಂತೆಯೇ ಪರಿಗಣಿತವಾಗುವ ಪ್ರಲ್ಹಾದ ಜೋಶಿ ಎದುರು ಕೈ ಅಭ್ಯರ್ಥಿಯ ಪ್ರಾಬಲ್ಯಕ್ಕೆ ಕಾಂಗ್ರೆಸ್ ಪಡೆಯ ಕಾರ್ಯತಂತ್ರಗಳು ಏನಿರಲಿವೆ?
ಕುರುಬ ಸಮುದಾಯದ ವಿನೋದ ಅಸೂಟಿಗೆ ಬಹುತೇಕ ಮಣೆ ಹಾಕುವ ಮೂಲಕ ಕಾಂಗ್ರೆಸ್ ರಾಜ್ಯದ ಬಿಜೆಪಿಗೆ ಠಕ್ಕರ್ ಕೊಡಲು ನಿರ್ಧರಿಸಿದೆಯೇ? ಕುರುಬರು ಮತ್ತು ಒಟ್ಟಾರೆ ಅಹಿಂದ ಮತಗಳನ್ನು ಒಡೆಯದೇ ಸೆಳೆದುಕೊಳ್ಳಲು ಸಿಎಂ ಸಿದ್ದರಾಮಯ್ಯ ಮಾಡಿರುವ ರಾಜಕೀಯ ತಂತ್ರಗಾರಿಕೆಯೇ ಇದು ಎನ್ನುವ ಪ್ರಶ್ನೆ ಜೋರಾಗಿ ಹರಿದಾಡುತ್ತಿದೆ.
ಬಿಜೆಪಿ ಕುರುಬ ಅಭ್ಯರ್ಥಿಗೆ ಮಣೆ ಹಾಕಿಲ್ಲ. ಇದನ್ನೇ ಅಸ್ತ್ರವಾಗಿಸಿಕೊಂಡು ಅಸೂಟಿಗೆ ಬಲಾಢ್ಯ ಜೋಶಿ ವಿರುದ್ಧವೇ ಟಿಕೆಟ್ ನೀಡಿರುವುದು ಕಾಂಗ್ರೆಸ್‌ನ ಯೋಜಿತ ಲೆಕ್ಕಾಚಾರ ಎಂದೇ ಹೇಳಲಾಗುತ್ತಿದೆ. ಕೆ.ಎಸ್.ಈಶ್ವರಪ್ಪ ಮುನಿಸಿಗೆ ಕಾರಣವಾಗಿರುವ ಬಿಜೆಪಿ ಮಟ್ಟಿಗೆ ಸದ್ಯಕ್ಕಂತೂ ಇದು ರಾಜಕೀಯ ಸಡ್ಡು ಎಂಬುದಂತೂ ಸುಳ್ಳಲ್ಲ.
ಜೋಶಿ ಸೋಲಿಸುವುದು ಕಾಂಗ್ರೆಸ್‌ಗೆ ರಾಜ್ಯದಲ್ಲಿ ಉಳಿದೆಲ್ಲೆಡೆಗಿಂತ ಮೊದಲ ಆದ್ಯತೆ. ಆದರೆ ಧಾರವಾಡ ಕಣ ಅಷ್ಟು ಸಲೀಸಲ್ಲ ಎಂಬುದನ್ನು ಹಿಂದಿನ ನಾಲ್ಕು ಚುನಾವಣೆಗಳು ತೋರಿಸಿವೆ. ಆದ್ದರಿಂದಲೇ ಅಹಿಂದ ಮತದಾರರು ಒಡೆದು ಹೋಗದಂತೆ ಕಟ್ಟಲು ಅಸೂಟಿ ಅಸ್ತ್ರವಾಗುವುದು ಪಕ್ಕಾ.
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ೧೯೯೬ರಿಂದ ಸತತವಾಗಿ ಬಿಜೆಪಿ ಗೆಲ್ಲುತ್ತಿದೆ. ಹಾಲಿ ಸಂಸದರಾದ ಪ್ರಲ್ಹಾದ ಜೋಶಿಯವರೇ ಅತ್ಯಧಿಕ ನಾಲ್ಕು ಬಾರಿ ನಿರಂತರವಾಗಿ ಗೆದ್ದಿದ್ದಾರೆ (೨೦೦೪ರಿಂದ ೨೦೧೯). ಐದನೇ ಬಾರಿಗೂ ಬಿಜೆಪಿ ಅಭ್ಯರ್ಥಿಯಾಗಿರುವ ಜೋಶಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲೇಬೇಕು ಎಂದು ಡಿ.ಕೆ.ಶಿವಕುಮಾರ್ ಕೆಲ ತಿಂಗಳ ಹಿಂದೆ ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರ ಆಂತರಿಕ ಸಭೆಯಲ್ಲಿ ಒತ್ತಿ ಹೇಳಿದ್ದರು.
`ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್‌ನ ಭಾರಿ ಗೆಲುವು ಪಕ್ಷದ ಮಟ್ಟಿಗೆ ಅತ್ಯುತ್ತಮ ಸಂದೇಶವನ್ನು ರವಾನಿಸಿದೆ. ಇನ್ನು ಲೋಕಸಭೆ ಚುನಾವಣೆಯಲ್ಲಿ ಜೋಶಿ ಅವರನ್ನು ಸೋಲಿಸಿದರೆ, ರಾಜ್ಯ ಬಿಜೆಪಿಗೆ ಭಾರಿ ದೊಡ್ಡ ಪೆಟ್ಟು ನೀಡಿದಂತೆ. ಉಳಿದೆಲ್ಲ ಬಿಜೆಪಿ ಅಭ್ಯರ್ಥಿಗಳು ಒಂದು ತೂಕವಾದರೆ, ಜೋಶಿ ಅವರೇ ಬೇರೆ ತೂಕ. ಇದನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ. ಭಿನ್ನಾಭಿಪ್ರಾಯಗಳನ್ನು ಮುನ್ನೆಲೆಗೆ ತರಬೇಡಿ’ ಎಂಬ ಅರ್ಥದಲ್ಲಿ ಡಿಕೆಶಿ ಅಂದಿನ ಸಭೆಯಲ್ಲಿ ಖಡಕ್ ಸೂಚನೆ ನೀಡಿದ್ದರು.
ಕಾಂಗ್ರೆಸ್‌ನ ವಿನೋದ ಅಸೂಟಿ ಅಂತಿಮವಾಗಿ ಜೋಶಿ ವಿರುದ್ಧ ಸ್ಪರ್ಧಿಸಲು ಆಯ್ಕೆಯಾಗಿರುವ ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರ ಸೂಚನೆಗೆ ಕಾರ್ಯಕರ್ತರು ಹೇಗೆ ಸ್ಪಂದಿಸಲಿದ್ದಾರೆ? ಇದು ಕಣದ ಒಂದು ಆಯಾಮ. ಮೂರಕ್ಕೂ ಹೆಚ್ಚು ಬಣಗಳು ಹಾಗೂ ಅವುಗಳಲ್ಲೇ ಸಣ್ಣ ಒಳಬಣಗಳಿರುವ ಕಾಂಗ್ರೆಸ್‌ನಲ್ಲಿ ಅಸೂಟಿ ಸ್ಪರ್ಧೆಗೆ ರಾಜ್ಯ ನಾಯಕರ ಬೆಂಬಲ ಹೇಗಿರಲಿದೆ ಎನ್ನುವುದು ಇನ್ನೊಂದು ರಾಜಕೀಯ ಆಯಾಮ.
ವಿನೋದ ಅಸೂಟಿ ಮೂಲತಃ ಕಾಂಗ್ರೆಸ್ಸಿಗ. ನವಲಗುಂದದ ಈ ಯುವ ನಾಯಕ ಯಾವ ಬಣದಲ್ಲೂ ಗುರುತಿಸಿಕೊಂಡಿಲ್ಲ ನಿಜ. ಆದರೆ ಸಿದ್ದರಾಮಯ್ಯನವರ ಬಣದವರೆಂದು ಕಾರ್ಯಕರ್ತರು ಬಹಿರಂಗವಾಗಿಯೇ ಮಾತನಾಡುತ್ತಾರೆ. ಹಾಗೆಂದು ಇವರು ಡಿ.ಕೆ.ಶಿವಕುಮಾರ್ ಬಣಕ್ಕೂ ದೂರವಲ್ಲ. ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ಬೆಂಬಲ ಇವರಿಗಿದೆ.
ಇದುವೇ ಅಸೂಟಿ ಪರ ಎಲ್ಲರೂ ಒಟ್ಟಾಗಿ ಪ್ರಚಾರ ಕಣಕ್ಕೆ ಇಳಿಯಲು ಪ್ರೇರಿತವಾಗಲಿರುವ ಅಂಶವಾಗಿದೆ. ಜೋಶಿ ಎದುರಿಸಲಿರುವ ಕಾಂಗ್ರೆಸ್‌ಗೆ ಇದು ಧನಾತ್ಮಕ ಅಂಶವಾಗಿದೆ.
ವಿರೋಧಿಗಳ ರಾಜಕೀಯ ತಂತ್ರಗಾರಿಕೆಯ ನಡುವೆ ಸಚಿವ ಪ್ರಲ್ಹಾದ ಜೋಶಿ ಕೂಡ ತಮ್ಮದೇ ಆದ ತಂತ್ರಗಾರಿಕೆಯನ್ನು ಈಗಾಗಲೇ ಮಾಡಿಕೊಂಡು ಪ್ರಚಾರವನ್ನೂ ಆರಂಭಿಸಿದ್ದಾರೆ.
ಕಾಂಗ್ರೆಸ್‌ನಲ್ಲಿರುವ ಬಣ ರಾಜಕೀಯ ಹಾಗೂ ಟಿಕೆಟ್ ದೊರೆಯದವರ ಅತೃಪ್ತಿಯಿಂದ ತಮ್ಮ ಗೆಲುವು ಈ ಬಾರಿ ಹಿಂದಿನ ನಾಲ್ಕು ಬಾರಿಗಿಂತ ಹೆಚ್ಚಿನ ಅಂತರದಿಂದ ಕೂಡಿರಲಿದೆ ಎಂಬುದು ಅವರ ಅನಿಸಿಕೆ. ಒಟ್ಟಿನಲ್ಲಿ ಬಿಸಿಲಿನ ಧಗೆಯ ಜೊತೆಗೆ ರಾಜಕೀಯ ಸೆಖೆ ಅಭ್ಯರ್ಥಿಗಳ ಅಂತಿಮ ಚಿತ್ರಣದ ನಂತರ ಹೆಚ್ಚಿದೆ.

Previous articleಉದ್ಬವ ಗಣೇಶನ ಸೊಂಡಿಲು ಮೆತ್ತಗಿನ ಅನುಭವ
Next articleಯುವ, ಹೊಸ ಮುಖಗಳಿಗೆ ಕಾಂಗ್ರೆಸ್ ಮಣೆ