ಜಯಲಲಿತಾರ ೭ ಕೆಜಿ ಚಿನ್ನ, ೭೦೦ ಕೆಜಿ ಬೆಳ್ಳಿ, ೭೪೦ ಚಪ್ಪಲಿ ಹಸ್ತಾಂತರಕ್ಕೆ ಕೋರ್ಟ್ ಸೂಚನೆ

0
25

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರಿಂದ ವಶಪಡಿಸಿಕೊಳ್ಳಲಾಗಿದ್ದ ೭ ಕೆ.ಜಿ. ಚಿನ್ನ, ವಜ್ರಾಭರಣ, ೭೦೦ ಕೆ.ಜಿ. ಬೆಳ್ಳಿ, ೭೪೦ ದುಬಾರಿ ಬೆಲೆಯ ಚಪ್ಪಲಿ ಸೇರಿದಂತೆ ಜಪ್ತಿ ಮಾಡಲಾಗಿದ್ದ ಅವರ ವಸ್ತುಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರ ಮಾಡುವಂತೆ ವಿಶೇಷ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಜಪ್ತಿ ಮಾಡಲಾಗಿರುವ ಬೆಲೆಬಾಳುವ ವಸ್ತುಗಳು ಮತ್ತು ಆಸ್ತಿಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲು ಫೆಬ್ರವರಿ ೧೪ ಮತ್ತು ೧೫ ರಂದು ಎರಡು ದಿನಗಳನ್ನು ನಿಗದಿಪಡಿಸಿ ಆದೇಶಿಸಿದೆ.
ಸಿಬಿಐ, ಇಡಿ ಪ್ರಕರಣಗಳ ವಿಚಾರಣೆ ನಡೆಸಲು ಸ್ಥಾಪನೆಯಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಮೋಹನ್ ಅವರು ಆದೇಶ ಹೊರಡಿಸಿದ್ದು, ಜಪ್ತಿ ಮಾಡಲಾದ ಬೆಲೆಬಾಳುವ ವಸ್ತುಗಳು ಮತ್ತು ಆಸ್ತಿ ಮೇಲಿನ ಹಕ್ಕುಗಳನ್ನು ಕೋರಿ ಜಯಲಲಿತಾ ಅವರ ಕಾನೂನು ವಾರಸುದಾರರಾದ ಜೆ. ದೀಪಕ್ ಮತ್ತು ಜೆ. ದೀಪಾ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿತ್ತು. ಹೀಗಾಗಿ ಇದೀಗ ಅವುಗಳ ಹಸ್ತಾಂತರಕ್ಕೆ ಕೋರ್ಟ್ ದಿನ ನಿಗದಿಪಡಿಸಿದೆ.
ಬೆಲೆಬಾಳುವ ವಸ್ತುಗಳು ಮತ್ತು ಆಸ್ತಿಯನ್ನು ತಮಿಳುನಾಡಿಗೆ ಹಸ್ತಾಂತರ ಮಾಡುವ ವಿಶೇಷ ನ್ಯಾಯಾಲಯದ ಆದೇಶವನ್ನು ೨೦೨೩ರ ಜುಲೈ ೧೨ ರಂದು ಹೈಕೋರ್ಟ್ ಎತ್ತಿಹಿಡಿದಿತ್ತು. ಆದರೆ, ಅದರ ವಿರುದ್ಧ ಮತ್ತೆ ಮೇಲ್ಮನವಿ ಸಲ್ಲಿಕೆಯಾಗಿತ್ತು.
೨೦೨೪ ರ ಫೆಬ್ರವರಿ ೧೯ ರಂದು, ವಿಶೇಷ ನ್ಯಾಯಾಲಯವು ಬೆಲೆಬಾಳುವ ವಸ್ತುಗಳು, ಚಿನ್ನ ಮತ್ತು ವಜ್ರದ ಆಭರಣಗಳನ್ನು ಹಿಂದಿರುಗಿಸಲು ದಿನಾಂಕವನ್ನು ನಿಗದಿಪಡಿಸಿತ್ತು. ಮಾರ್ಚ್ ೬ ಮತ್ತು ೭ ರಂದು ಅಧಿಕೃತ ಅಧಿಕಾರಿಗಳನ್ನು ನಿಯೋಜಿಸುವಂತೆ ತಮಿಳುನಾಡು ಸರ್ಕಾರಕ್ಕೆ ನಿರ್ದೇಶಿಸಿತ್ತು. ಆದರೆ, ಅದರ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಕೆಯಾದ ಕಾರಣ ಹಸ್ತಾಂತರ ಮಾಡಲಾಗಿರಲಿಲ್ಲ.

Previous articleಸ್ವೀಡನ್‌ನಲ್ಲಿ ಕುರಾನ್ ಸುಟ್ಟ ಆರೋಪಿ ಮೊಮಿಕ್ ಹತ್ಯೆ
Next articleವಿಮಾನ-ಕಾಪ್ಟರ್ ಡಿಕ್ಕಿ: 67 ಪ್ರಯಾಣಿಕರು ಸಾವು