ಚಿತ್ರದುರ್ಗ: ಕಲುಷಿತ ನೀರು ಸೇವಿಸಿ ಮಹಿಳೆಯೊಬ್ಬರು ಮೃತಪಟ್ಟು ಸುಮಾರು 20 ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿರುವ ಘಟನೆ ಇಂದು ಚಿತ್ರದುರ್ಗ ನಗರದ ಕವಾಡಿಗರಹಟ್ಟಿ ಬಡಾವಣೆಯಲ್ಲಿ ನಡೆದಿದೆ.
ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಮಂಜುಳಾ (21) ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಮಹಿಳೆ.
ನಗರಸಭೆ ವತಿಯಿಂದ ಶಾಂತಿಸಾಗರದ ಕುಡಿಯುವ ನೀರನ್ನು ಮೊದಲು ಟ್ಯಾಂಕ್‌ನಲ್ಲಿ ಶೇಖರಿಸಿ ನಂತರ ನಗರದ ಹಲವು ಬಡಾವಣೆಗಳಿಗೆ ಪೈಪ್‌ಗಳ ಮೂಲಕ ಸರಬರಾಜು ಮಾಡಲಾಗುತ್ತಿತ್ತು. ಎಂದಿನಂತೆ ಇಂದು ಕೂಡ ಶಾಂತಿಸಾಗರದಿಂದ ನೀರು ಸರಬರಾಜು ಮಾಡಲಾಗಿದ್ದು, ಇದೇ ನೀರನ್ನು ಕವಾಡಿಗರಹಟ್ಟಿ ಬಡಾವಣೆಗೂ ಸಹ ಸರಬರಾಜು ಮಾಡಲಾಗಿದೆ. ಆದರೆ ಈ ನೀರನ್ನು ಸೇವನೆ ಮಾಡಿರುವ ಕವಾಡಿಗರಹಟ್ಟಿ ಬಡಾವಣೆಯ ವೃದ್ದರು, ಮಹಿಳೆಯರು ಹಾಗೂ ಮಕ್ಕಳು ವಾಂತಿ, ಭೇದಿಯಿಂದ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ನೆರೆಹೊರೆಯ ಜನರು ಅಸ್ವಸ್ಥಗೊಂಡಂತಹ ಜನರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇದರಲ್ಲಿ ತೀವ್ರ ಅಸ್ವಸ್ಥಗೊಂಡಿದ್ದ ಮಂಜುಳಾ ಎಂಬ ಮಹಿಳೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಇನ್ನೂ ಮೂರು ಜನರ ಸ್ಥಿತಿ ಗಂಭೀರವಾಗಿದ್ದು, 10 ಮಕ್ಕಳು ಸೇರಿದಂತೆ 20 ಜನರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಾಂತಿ ಸಾಗರದಿಂದ ಪೂರೈಕೆ ಆಗುವ ಕುಡಿಯುವ ನೀರು ಟ್ಯಾಂಕ್‌ಗೆ ಶೇಖರಣೆ ಮಾಡಲಾಗುತ್ತಿದ್ದು, ಈ ಟ್ಯಾಂಕ್‌ನ್ನು ಸುಮಾರು ವರ್ಷಗಳು ಕಳೆದರೂ ತೊಳೆದಿರಲಿಲ್ಲ. ಸುಚಿತ್ವ ಇಲ್ಲದೆ ಕಸ, ಕೊಳಚೆ ನೀರು ಸೇರಿ ಕುಡಿಯುವ ನೀರು ಕಲುಷಿತಗೊಂಡಿದೆ. ಜನರು ವಾಂತಿ, ಭೇದಿ ಮಾಡಿ ಅಸ್ವಸ್ಥರಾಗಿ ಒಬ್ಬರು ಮೃತಪಡಲು ಇದೇ ಮೂಲ ಕಾರಣ ಎಂದು ಸಾರ್ವಜನಿಕರು ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ