ಚಂದ್ರಶೇಖರ ಸ್ವಾಮೀಜಿಯವರ ಮೇಲೆ ಎಫ್ಐಆರ್: ಕಾನೂನಿನ ಚೌಕಟ್ಟಿನೊಳಗೆ ಬಂದರೆ ಕ್ರಮ

0
26

ಬೆಂಗಳೂರು: ಚಂದ್ರಶೇಖರ ಸ್ವಾಮೀಜಿ ಅವರ ಪ್ರಕರಣದಲ್ಲಿ ಪೊಲೀಸರು ಕಾನೂನಿನ ದೃಷ್ಟಿಯಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತಾರೆ. ಕಾನೂನಿನ ಚೌಕಟ್ಟಿನೊಳಗೆ ಬಂದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇಲ್ಲವಾದರೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ಇಂದು ಕೆಂಗಲ್ ಹನುಮಂತಯ್ಯ ಅವರ ಪುಣ್ಯಸ್ಮರಣೆಯ ಪ್ರಯುಕ್ತ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು, ಜೆಡಿಎಸ್‌ನಿಂದ ನನ್ನನ್ನು ಉಚ್ಛಾಟಿಸಲಾಯಿತು. ನಾನು ಬಿಡಲಿಲ್ಲ ಜೆಡಿಎಸ್ ಬಿಡುವಾಗ ಮಾಡಿದ್ದ ನಾಟಕವನ್ನೇ ಈಗ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಜೆಡಿಎಸ್‌ನಿಂದ ನನ್ನನ್ನು ಉಚ್ಛಾಟಿಸಲಾಯಿತು. ನಾನು ಬಿಡಲಿಲ್ಲ ಎಂದರು. ಅವರು ಹೇಳಿದ್ದನ್ನು ಮಾಧ್ಯಮಗಳು ಹೇಳಿದ್ದಾದರೆ ಮಾಧ್ಯಮಗಳು ಏಕಿರಬೇಕು ಎಂದು ಸಿಎಂ ಖಾರವಾಗಿ ಮಾಧ್ಯಮದವರನ್ನು ಪ್ರಶ್ನಿಸಿದರು.
ರಾಜ್ಯದ ಜನರಿಗೆ ಕೃತಜ್ಞತೆ ಹೇಳಲು ಸಮಾವೇಶ
ನಾನು ಪಕ್ಷವನ್ನು ಬಿಡಲಿಲ್ಲ. ನನ್ನನ್ನು ದೇವೇಗೌಡರು ಉಚ್ಚಾಟಿಸಿದರು. ನಂತರ ನಾನು ಬೇರೆ ದಾರಿ ಇಲ್ಲದೆ ಅಹಿಂದ ಸಮಾವೇಶ ನಡೆಸಿದೆ. ಹಾಸನದಲ್ಲಿಯೂ ಸಮಾವೇಶ ಮಾಡಿದ್ದೆ. ಈಗ ಇಡೀ ರಾಜ್ಯದ ಜನರಿಗೆ ಕೃತಜ್ಞತೆ ಹೇಳಲು ಕಾಂಗ್ರೆಸ್ ಪಕ್ಷ ಮತ್ತು ಸ್ವಾಭಿಮಾನಿಗಳ ಒಕ್ಕೂಟದಿಂದ ಸಮಾವೇಶ ಏರ್ಪಡಿಸಲಾಗಿದೆ. ಕಾಂಗ್ರೆಸ್ ಪಕ್ಷ ಮತ್ತು ಸ್ವಾಭಿಮಾನಿಗಳ ಜಂಟಿ ಆಶ್ರಯದಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು. ಇದಕ್ಕೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಲಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಆಹ್ವಾನಿಸಲಾಗಿದೆ. ಪಕ್ಷವು ಇದರಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದೆ ಎಂದರು.
ಜೆಡಿಎಸ್ ಪಕ್ಷವನ್ನು ಕಟ್ಟಿದವರು ನಾವು. ಜೆಡಿಎಸ್ ಈಗ ಜಾತ್ಯಾತೀತವಾಗಿ ಉಳಿದಿದೆಯೇ? ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು. ಕೋಮುವಾದಿಗಳ ಜೊತೆಗೆ ಸೇರಿದ ಮೇಲೆ ಯಾವ ಸೆಕ್ಯುಲರ್ ಆಗಿದೆ? ಸಂವಿಧಾನದಲ್ಲಿ ಜಾತ್ಯಾತೀತ, ಸಮಾಜವಾದಿ ಎಂದು ಸೇರ್ಪಡೆಯಾಗಿದೆ. ಸರ್ವೋಚ್ಚ ನ್ಯಾಯಾಲಯವೂ ಜಾತ್ಯಾತೀತ ಇರಲೇಬೇಕೆಂದು ಹೇಳಿದ್ದಾರೆ. ಜೆಡಿಎಸ್‌ನವರಿಗೆ ಪಕ್ಷ ಯಾವ ಹಿನ್ನೆಲೆಯಲ್ಲಿ ಕಟ್ಟಲಾಗಿದೆ ಎಂದು ಗೊತ್ತಿಲ್ಲ. ಪಕ್ಷ ರಚನೆಗೊಂಡಾಗ ಕುಮಾರಸ್ವಾಮಿ ಇರಲಿಲ್ಲ. ನಾನು ದೇವೇಗೌಡ, ಇಬ್ರಾಹಿಂ, ಸತೀಶ್ ಜಾರಕಿಹೊಳಿ, ಮಹದೇವಪ್ಪ, ವೆಂಕಟೇಶ್, ಲಕ್ಷ್ಮೀ ಸಾಗರ್ ಸೇರಿ ಆಗಿದ್ದು. ದೇವೇಗೌಡರು ರಾಷ್ಟ್ರೀಯ ಅಧ್ಯಕ್ಷರಾದರು, ನಾನು ರಾಜ್ಯಾಧ್ಯಕ್ಷನಾದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

Previous articleಸ್ಮಶಾನ ಕಾರ್ಮಿಕರನ್ನು ಕಾಯಂಗೊಳಿಸಿದ್ದು ನೆಮ್ಮದಿ ತಂದ ತೀರ್ಮಾನ
Next articleಉಪಲೋಕಾಯುಕ್ತರಿಂದ ವಿವಿಧೆಡೆ ಭೇಟಿ, ಪರಿಶೀಲನೆ